ಸಂವಿಧಾನ ಕುರಿತ ಹೇಳಿಕೆಗೆ ಖಂಡನೆ: ಪೇಜಾವರ ಶ್ರೀ ಕಟೌಟ್ ಹರಿದ ವಿದ್ಯಾರ್ಥಿಗಳು
ಬೆಂಗಳೂರು, ನ.30: ಉಡುಪಿಯ ಧರ್ಮ ಸಂಸದ್ ಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ನೀಡಿರುವ ಹೇಳಿಕೆ ಖಂಡಿಸಿ ಬೆಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ವಿವಿ ಆವರಣದಲ್ಲಿ ಅಳವಡಿಸಲಾಗಿದ್ದ ಪೇಜಾವರ ಶ್ರೀ ಅವರ ಬ್ಯಾನರ್, ಕಟೌಟ್‌ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಮಾಜಿ ಸದಸ್ಯ ಹನುಮಂತೇಗೌಡ ಅವರು ಹನುಮ ಜಯಂತಿ ದಿನದಂದು ಪೇಜಾವರ ಶ್ರೀಗಳಿಗೆ ಗುರು ವಂದನೆ ಸಲ್ಲಿಸಲು ತೀರ್ಮಾನಿಸಿ ಕಾರ್ಯಕ್ರಮ ಕುರಿತಂತೆ ಜ್ಞಾನಭಾರತಿ ಆವರಣದ ರಸ್ತೆಗಳಲ್ಲಿ ಬ್ಯಾನರ್ ಮತ್ತು ಕಟೌಟ್ ಹಾಕಿಸಿದ್ದರು. ಗುರುವಾರ ಬೆಳಗ್ಗೆ ಸಂಶೋಧನಾ ವಿದ್ಯಾರ್ಥಿಗಳು ಏಕಾಏಕಿ ಪೇಜಾವರ ಶ್ರೀ ಇರುವ ಭಾವಚಿತ್ರದ ಕಟೌಟ್(ಜಾಹೀರಾತು ಫಲಕ)ಗಳನ್ನುತೆರವುಗೊಳಿಸಿದರು.
ಈ ವೇಳ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ.ಎಸ್.ವೆಂಕಟಚಾಲ, ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್‌ನಲ್ಲಿ ಪೇಜಾವರ ಶ್ರೀ ದೇಶದ ಸಂವಿಧಾನವನ್ನು ಅವಮಾನಿಸಿ ದೇಶದ್ರೋಹವೆಸಗಿದ್ದಾರೆ ಎಂದು ದೂರಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ತಿದ್ದುಪಡಿ ಬಗ್ಗೆ ಮಾತನಾಡಿರುವ ಪೇಜಾವರ ಶ್ರೀಗಳು ಪ್ರಜಾಪ್ರಭುತ್ವಕ್ಕೆಅಪಮಾನ ಮಾಡಿದ್ದಾರೆ.ಅಂತಹ ವ್ಯಕ್ತಿಯ ಭಾವಚಿತ್ರವನ್ನು ವಿವಿ ಆವರಣದಲ್ಲಿ ಅಳವಡಿಸುವುದನ್ನು ನಾವು ಸಹಿಸುವುದಿಲ್ಲ. ಹೀಗಾಗಿ, ಪೇಜಾವರ ಶ್ರೀ ಅವರ ಎಲ್ಲ ಭಾವಚಿತ್ರಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.