ಡಿ.4 ರಿಂದ ಕ್ಷಯ ರೋಗ ಪತ್ತೆ, ಚಿಕಿತ್ಸಾ ಆಂದೋಲನ
ಬೆಂಗಳೂರು, ನ.30: ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಡಿ.4 ರಿಂದ 18 ರವರೆಗೆ ನಗರದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎನ್.ರಮೇಶ್‌ಬಾಬು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷಯ ರೋಗಿಗಳು ಆಸ್ಪತ್ರೆಗಳನ್ನು ಹುಡುಕಿಕೊಂಡು ಬಂದು ಚಿಕಿತ್ಸೆ ಪಡೆಯಬೇಕಾಗಿತ್ತು. ಆದರೆ, ಹಲವರಿಗೆ ಆಸ್ಪತ್ರೆಗೆ ಬರಲು ಸಾಧ್ಯವಾಗದೆ ಚಿಕಿತ್ಸೆ ಪಡೆಯುವುದನ್ನು ನಿರ್ಲಕ್ಷಿಸಲಾಗುತ್ತಿತ್ತು. ಇದನ್ನು ಮನಗಂಡು ಕೇಂದ್ರ ಸರಕಾರ ಸಕ್ರಿಯ ಕ್ಷಯ ರೋಗ ಪತ್ತೆ ಹಚ್ಚುವ ಕಾರ್ಯಕ್ರಮವನ್ನು ಜಾರಿ ಮಾಡಿದೆ. ಅದರ ಅಡಿಯಲ್ಲಿ ಈ ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಯೋಜನೆ ಅಡಿಯಲ್ಲಿ ಸ್ಲಂಗಳು, ಖೈದಿಗಳು, ವೃದ್ಧಾಪ್ಯ ಕೇಂದ್ರಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರಾಶ್ರಿತ ಶಿಬಿರಗಳು, ರಾತ್ರಿ ಆಶಯ ಕೇಂದ್ರಗಳು, ಅನಾಥಾಶ್ರಮಗಳು, ನಿರ್ಗತಿಕ ವಸತಿ ಕೇಂದ್ರಗಳು, ರಕ್ಷಣಾಲಯಗಳು, ಆಸ್ಪತ್ರೆಗೆ ಬರಲು ಕಷ್ಟಕರವಾದ ಊರು ಮತ್ತು ತಪ್ಪಲು ಪ್ರದೇಶಗಳು, ಗಣಿ, ಕಲ್ಲುಕೊರೆಯುವ ಕೆಲಸಗಾರರ ಸ್ಥಳಗಳು, ಹೆಚ್ಚಿನ ಪ್ರಕರಣ ಹಾಗೂ ಗುರುತಿಸಿದ ಹಳ್ಳಿಗಳು, ಬುಡಕಟ್ಟು ಶಾಲಾ ವಸತಿಗಳು ಸೇರಿದಂತೆ ಹಲವು ಸ್ಥಳಗಳಿಗೆ ವೈದ್ಯರು ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತದೆ. ಅಲ್ಲದೆ, ಚಿಕಿತ್ಸೆ ಅಗತ್ಯವಿದ್ದಲ್ಲಿ ಸೂಕ್ತ ಉಚಿತ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ ಎಂದು ಅವರು ವಿವರಿಸಿದರು.
ಆನೇಕಲ್, ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಈ ಅಭಿಯಾನ ನಡೆಯಲಿದೆ. ವಿಶ್ವದಲ್ಲಿ ವರ್ಷಕ್ಕೆ 10.4 ಮಿಲಿಯನ್, ಭಾರತದಲ್ಲಿ ವಿಶ್ವದ ಶೇ.40 ರಷ್ಟು ಕ್ಷಯ ರೋಗ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 60 ಸಾವಿರ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ ಕಳೆದ ವರ್ಷ 4041 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದರು.
ಕ್ಷಯ ರೋಗದ ಲಕ್ಷಣಗಳು: ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಮತ್ತು ಜ್ವರ, ಗಣನೀಯವಾಗಿ ತೂಕದ ನಷ್ಟ, ಕಳೆದ 6 ತಿಂಗಳಲ್ಲಿ ಯಾವುದೇ ಸಮಯದಲ್ಲಿ ಕಫದಲ್ಲಿ ರಕ್ಷ ಬೀಳುವುದು, ಒಂದು ತಿಂಗಳಿಂದ ಎದೆ ನೋವು ಇರುವವರು ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಡಾ.ರಮೇಶ್‌ಬಾಬು ಸಲಹೆ ನೀಡಿದರು.
ಡಿ.4 ರಂದು ಜಾಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿನ ಪ್ರಥಮ ದರ್ಜೆ ಕಾಲೇಜಿನ ಬಳಿ ಜಾಥಾಗೆ ಚಾಲನೆ ನೀಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆಶಾ ಮಾತನಾಡಿ, ವಿಶ್ವ ಏಡ್ಸ್ ದಿನದ ಅಂಗವಾಗಿ ‘ನನ್ನ ಆರೋಗ್ಯ ನನ್ನ ಹಕ್ಕು’ ಎಂಬ ಘೋಷಣೆ ಅಡಿಯಲ್ಲಿ ಡಿ.5 ರಂದು ನಗರದ ಸಪ್ತಗಿರಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಏಡ್ಸ್ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.