ಡಿ.2 ರಂದು 'ಸಾರ್ವತ್ರಿಕ ಸಾಮರಸ್ಯ ಸಮಾವೇಶ'
ಬೆಂಗಳೂರು, ನ.30: ಕ್ಯಾಥೋಲಿಕ್ ಧರ್ಮಾಧ್ಯಕ್ಷರುಗಳ ಮಂಡಳಿ ಹಾಗೂ ಅಂತರ್ ಧರ್ಮೀಯ ಸಂವಾದ ಆಯೋಗದ ವತಿಯಿಂದ ‘ಸಾರ್ವತ್ರಿಕ ಸಾಮರಸ್ಯ’ ಎಂಬ ಅಂತರ್ ಧರ್ಮಿಯರ ಸಮಾವೇಶವನ್ನು ಡಿ.2 ರಂದು ನಗರದ ಸಂತ ಜೋಸೆಫ್ ಇಂಡಿಯನ್ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂತರ ಧರ್ಮೀಯ ಸಂವಾದ ಆಯೋಗದ ಪ್ರಾದೇಶಿಕ ಕಾರ್ಯದರ್ಶಿ ಜಾರ್ಜ್ ವಿನ್ಸೆಂಟ್ ಲೋಬೋ, ಇತ್ತೀಚಿನ ದಿನಗಳಲ್ಲಿ ಧರ್ಮಗಳ ನಡುವೆ ಸಾಮರಸ್ಯ ಮೂಡುವ ಬದಲಿಗೆ ದ್ವೇಷ ಹೆಚ್ಚಾಗುತ್ತಿದೆ. ಪ್ರೀತಿಯನ್ನು ಹಂಚಬೇಕಾದ ಸಂದರ್ಭದಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಸಂವಿಧಾನವೇ ಎಲ್ಲರಿಗೂ ಕೂಡಿ ಬಾಳುವ ಹಕ್ಕು ನೀಡಿದೆ. ಆದರೆ, ಇಂದು ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ದೇಶ ಜಾತ್ಯತೀತ ರಾಷ್ಟ್ರ. ಹೀಗಾಗಿ, ಎಲ್ಲರೂ ಸೌಹಾರ್ದತೆ, ಸಮಾನತೆಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ, ಸೌಹಾರ್ದ ನಾಡು ಕಟ್ಟುವ ಕಡೆಗೆ ಅಂತರ್ ಧರ್ಮೀಯ ಬಾಂಧವ್ಯವನ್ನು ಘೋಷಣೆ ಮಾಡುವ ಸಲುವಾಗಿ ಈ ಸಮಾವೇಶ ಹಮ್ಮಿಕೊಂಡಿದ್ದು, ಇದರಲ್ಲಿ ಎಲ್ಲ ಧರ್ಮಗಳ ಧಾರ್ಮಿಕ ಮುಖಂಡರು, ಜನ ಪ್ರತಿನಿಧಿಗಳು, ಸಾಹಿತಿಗಳು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.