ಡಿ.2 ರಿಂದ ಮಸ್ತಕಾಭಿಷೇಕಕ್ಕೆ ಪೂರಕವಾದ ವಿಶೇಷ ಕಾರ್ಯಕ್ರಮಗಳ ಪ್ರಸಾರ
ಬೆಂಗಳೂರು, ನ.30: ಮುಂದಿನ ವರ್ಷ ನಡೆಯಲಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ ಆಕಾಶವಾಣಿಯಿಂದ ಡಿ.2 ರಿಂದ ಫೆ.20 ರವರೆಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಕಾಶವಾಣಿಯ ನಿರ್ದೇಶಕಿ ಎಚ್.ಎಸ್.ಸರಸ್ವತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಾಶವಾಣಿಯ ದೈನಂದಿನ ಕಾರ್ಯಕ್ರಮಗಳ ಜತೆಗೆ ಮಹಾ ಮಸ್ತಕಾಭಿಷೇಕ ಸಂದರ್ಭಕ್ಕೆ ಪೂರಕವಾದ ವಿಶೇಷ ಕಾರ್ಯಕ್ರಮಗಳ ಯೋಜನೆ ಸಿದ್ಧಪಡಿಸಲಾಗಿದೆ. ಹೊಸ ಪೀಳಿಗೆಯ ಯುವ ಕೇಳುಗರಿಗೆ, ಕರ್ನಾಟಕ ಜೈನ ಧರ್ಮೀಯರ ಪರಂಪರೆ, ಇತಿಹಾಸ, ಧಾರ್ಮಿಕತೆ ಸೇರಿದಂತೆ ಅನೇಕ ಅಂಶಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಆಕಾಶವಾಣಿ ಸಹ ನಿರ್ದೇಶಕ ಡಾ.ಎನ್.ರಘು ಮಾತನಾಡಿ, ಡಿ.2 ರಿಂದ ಆರಂಭವಾಗುವ ವಿಶೇಷ ಸರಣಿಯಲ್ಲಿ ಐದು ಭಾಗಗಳಾಗಿ ಕಾರ್ಯಕ್ರಮಗಳನ್ನು ವಿಂಗಡನೆ ಮಾಡಿದ್ದು, ಅದರಲ್ಲಿ ಜಿನ ವಂದನ, ಜಿನ ಚಿಂತನ, ಜಿನ ದರ್ಶನ, ಜಿನ ಸೌರಭ ಹೆಸರಿನಲ್ಲಿ ನಡೆಯುತ್ತದೆ. ಜೈನ ಕವಿಗಳ ಸಾಹಿತ್ಯ ಸಾಧನೆಯ ಕುರಿತ ರೂಪಕಗಳು, ರಾಜ್ಯದ ವಿವಿಧ ಪ್ರದೇಶಗಳನ್ನಾಳಿದ ಜೈನ ರಾಜವಂಶಗಳ ಪರಿಚಯ, ಪ್ರಸಿದ್ಧ ಜೈನ ತೀರ್ಥ ಕ್ಷೇತ್ರಗಳು, ಜೈನ ಭಕ್ತಿಗೀತೆಗಳು, ಜೈನ ಪರಂಪರೆಯ ವಿವಿಧ ವಿಚಾರಗಳ ಕುರಿತ ಚಿಂತನೆಗಳು, ಬಾನುಲಿ ಭಾಷಣಗಳು, ಆಸಕ್ತ ಶ್ರೋತೃವರ್ಗಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದರು.
ಪಂಡಿತ ರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಸಂಪಾದಿಸಿರುವ ಜಿನಭಜನಸಾರ ಮತ್ತು ರತ್ನಾಕರವರ್ಣಿ ವಿರಚಿತ ಅಣ್ಣನ ಹಾಡುಗಳಿಂದ ಆಯ್ದ 30 ಸಾಂಪ್ರದಾಯಿಕ ಜಿನ ಭಕ್ತಿಗೀತೆಗಳನ್ನು ರಾಜ್ಯದ ಐದು ಕೇಂದ್ರಗಳಿಂದ ಪ್ರಸಾರವಾಗಲಿವೆ. ಅಲ್ಲದೆ, ಮೊದಲಬಾರಿಗೆ ನಯನಸೇನನ ಧರ್ಮಾಮೃತ ಮತ್ತು ವಡ್ಡಾರಾಧನೆಯ ಕಥೆಗಳನ್ನು ಆಧರಿಸಿ ಕಿರು ನಾಟಕಗಳ ಸರಣಿಗಳು ಪ್ರಸಾರ ಮಾಡಲಾಗುತ್ತಿದೆ ಹಾಗೂ ಜೈನ ಧರ್ಮದ ಕುರಿತು ಸಾಹಿತಿ ಮತ್ತು ಚಿಂತಕರ 14 ನಿಮಿಷಗಳ ಭಾಷಣವನ್ನು ಪ್ರಸಾರ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಮಹಾಮಸ್ತಕಾಭಿಷೇಕದ ಅಂಗವಾಗಿ ಯುವಜನರನ್ನು ಆಕರ್ಷಿಸಲು ಫೋನ್ ಇನ್ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜ.10, 11, 12 ರಂದು ರಾಜ್ಯಮಟ್ಟದ ಯುವ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಫೆ.10 ರಿಂದ 20 ರವರೆಗೆ ಶ್ರವಣಬೆಳಗೊಳದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ ಕುರಿತು ಐದು ನಿಮಿಷಗಳ ಮಾಹಿತಿ ಪ್ರಸಾರ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.