×
Ad

ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಗೆ ಚಾಲನೆ

Update: 2017-11-30 19:31 IST

ಬೆಂಗಳೂರು, ನ.29: ಕನ್ನಡ ಪುಸ್ತಕ ಪ್ರಾಧಿಕಾರವು ಆರಂಭಿಸಿರುವ ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಗೆ ಕಾಮಧೇನು ಪುಸ್ತಕ ಭವನದ ಮುಖ್ಯಸ್ಥ ಡಿ.ಕೆ.ಶ್ಯಾಮಸುಂದರರಾವ್ ಗುರುವಾರ ಚಾಲನೆ ನೀಡಿದರು.

ಪುಸ್ತಕ ಹೀಗೆ ಖರೀದಿಸಿ: ಪುಸ್ತಕ ಪ್ರಾಧಿಕಾರದ ಜಾಲತಾಣಕ್ಕೆ ಭೇಟಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಂತರ ಪ್ರಾಧಿಕಾರ ಪ್ರಕಟಿಸಿರುವ ಪುಸ್ತಕಗಳಲ್ಲಿ ಯಾವುದನ್ನು ಕೊಳ್ಳಬೇಕೊ, ಅವುಗಳನ್ನು ಆಯ್ಕೆ ಮಾಡಬೇಕು. ಬಳಿಕ ಆನ್‌ಲೈನ್ ಮೂಲಕ ಪುಸ್ತಕಗಳ ಬೆಲೆಯ ಮೊತ್ತವನ್ನು ಪಾವತಿಸಬೇಕು. ನೋಂದಾಯಿಸಿದ ವಿಳಾಸಕ್ಕೆ ಪ್ರಾಧಿಕಾರವು ಸ್ಪೀಡ್‌ಪೋಸ್ಟ್ ಮೂಲಕ ಪುಸ್ತಕಗಳನ್ನು ಕಳುಹಿಸಿಕೊಡುತ್ತದೆ. ಅಂಚೆ ವೆಚ್ಚವನ್ನು ಗ್ರಾಹಕರೆ ಭರಿಸಬೇಕು.

ಮಾಜಿ ಶಾಸಕಿ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಹೊಟ್ಟೆಗೆ ಆಹಾರ ಸೇವಿಸುವಂತೆ, ಮೆದುಳಿಗೆ ಮೇವು ಹಾಕಲು ಪುಸ್ತಕಗಳನ್ನು ಓದಬೇಕು. ಜಗತ್ತಿನ ಬಹುತೇಕ ಬದಲಾವಣೆಗಳು ಪುಸ್ತಕಗಳಿಂದಲೆ ಆಗಿವೆ. ವಿದ್ಯಾರ್ಥಿಗಳು ಹೆಚ್ಚು ಓದಬೇಕು, ಅದುವೆ ಸರಸ್ವತಿಪೂಜೆ. ಎಲ್ಲರೂ ವಯಸ್ಸಿನ ಭೇದವಿಲ್ಲದೆ ಹೊಸದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡುತ್ತ, ಪ್ರಾಧಿಕಾರದ ಮಳಿಗೆ ಅಥವಾ ಜಾಲತಾಣದಲ್ಲಿ ಖರೀದಿಸುವ ಪುಸ್ತಕಗಳಿಗೆ ಶೇ.15ರಿಂದ ಶೇ.50 ರವರೆಗೆ ರಿಯಾಯಿತಿ ನೀಡಿದ್ದೇವೆ. ಅವುಗಳಲ್ಲಿ ಹಳೆಯ ಪುಸ್ತಕಗಳು ಇವೆ. ರಾಜ್ಯದ ಎಲ್ಲ ಊರುಗಳಿಗೂ ಪುಸ್ತಕಗಳನ್ನು ಅಂಚೆ ಮೂಲಕ ಕಳುಹಿಸುತ್ತೇವೆ. ಓದುಗರು ಹೊಸ ವ್ಯವಸ್ಥೆಯ ಉಪಯೋಗ ಪಡೆಯಬೇಕು ಎಂದರು.

ಪ್ರಾಧಿಕಾರವು ಹಲವಾರು ಪ್ರಕಾಶಕರಿಂದ ಸಾವಿರಾರು ಪುಸ್ತಕಗಳನ್ನು 14 ಮತ್ತು 15ನೆ ಸಗಟು ಖರೀದಿ ಯೋಜನೆಯಡಿ ಖರೀದಿಸಿದೆ. ಅವುಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳ ಮಕ್ಕಳಿಗೆ ಹಂಚುತ್ತೇವೆ. ಪ್ರಕಾಶಕರು ಮತ್ತು ಪುಸ್ತಕದ ವ್ಯಾಪಾರಿಗಳಿಗೆ ಜಿಎಸ್‌ಟಿ ಕುರಿತು ಇರುವ ಗೊಂದಲಗಳನ್ನು ನಿವಾರಿಸಲು ಕಾರ್ಯಕ್ರಮ ಆಯೋಜಿಸುತ್ತೇವೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಕಾಶಕರ ಸಮಾವೇಶ ಏರ್ಪಡಿಸುತ್ತೇವೆ. ಮುಂಬರುವ ದಿನಗಳಲ್ಲಿ ಪುಸ್ತಕ ಮೇಳ, ಸಂಚಾರಿ ಪುಸ್ತಕ ಜಾಥಾ ಆಯೋಜಿಸುತ್ತೇವೆ ಎಂದು ಮಾಹಿತಿ ನೀಡಿದರು.

ಲೇಖಕ ನಾ.ಸೋಮೇಶ್ವರ, ಹಲವಾರು ವಿಷಯಗಳ ಕುರಿತು ಕನ್ನಡದಲ್ಲಿ ಪುಸ್ತಕಗಳು ಇಲ್ಲ. ಅಂತಹ ವಿಷಯಗಳನ್ನು ಪಟ್ಟಿ ಮಾಡಿ, ಪ್ರಾಧಿಕಾರ ತಜ್ಞರಿಂದ ಹೊತ್ತಗೆಗಳನ್ನು ರಚಿಬೇಕು ಎಂದು ಮನವಿ ಮಾಡಿದರು.

ಮಹಿಳೆಯರ ಕುರಿತು ‘ಲೋಕಕಾಣದ ಲೋಕ’, ಕರಕುಶಲತೆ, ಆಹಾರ ಪದ್ಧತಿ ಹಾಗೂ ವಿಜ್ಞಾನದ ಕುರಿತ ‘ದೇಶಿ ಜ್ಞಾನ’ ಮತ್ತು ‘ಪುಸ್ತಕೋದ್ಯಮ ಚರಿತೆ’ ಎಂಬ ಹೊಸ ಪುಸ್ತಕಗಳನ್ನು ತಜ್ಞರಿಂದ ರಚಿಸಲು ಪ್ರಾಧಿಕಾರ ನಿರ್ಧರಿಸಿದೆ.

-ಡಾ.ವಸುಂಧರಾ ಭೂಪತಿ, ಅಧ್ಯಕ್ಷೆ, ಕನ್ನಡ ಪುಸ್ತಕ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News