ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ-ಉಪಾಧ್ಯಕ್ಷರಿಂದಲೇ ಅಕ್ರಮ: ಆರೋಪ
ಬೆಂಗಳೂರು, ನ. 30: ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮತ್ತು ಉಪಾಧ್ಯಕ್ಷರೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂ.ಲೂಟಿ ಮಾಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ನಿಗಮದ ನಿರ್ದೇಶಕರುಗಳೇ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ದೂರು ನೀಡಿದ್ದಾರೆ.
ಕೆಸಿಡಿಸಿ ನಿಗಮಕ್ಕಾಗಿ 34 ಮಂದಿ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು 45 ಮಂದಿಗೆ ವೇತನ ಪಾವತಿಸಿದ್ದಾರೆ. ತಿಂಗಳಿಗೆ ಹೆಚ್ಚುವರಿ ಕನಿಷ್ಟ 1 ಸಾವಿರ ಲೀಟರ್ ಡೀಸೆಲ್ ಹಣವನ್ನು ಪಡೆದಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರು ತಲಾ 84,150 ರೂ.ಮೊಬೈಲ್ ಖರೀದಿಸಿದ್ದಾರೆ. ಅಲ್ಲದೆ, ಟೈಯರ್ ಅಂಗಡಿಗೆ 3.25 ಲಕ್ಷ ರೂ.ಪಾವತಿಸಿ 4.91ಲಕ್ಷ ರೂ.ಹಣವನ್ನು ಡ್ರಾ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ತಿಂಗಳಿಗೆ 60 ಸಾವಿರ ರೂ.ನಂತೆ 5.50 ಲಕ್ಷ ರೂ.ಹಣವನ್ನು ನಿಗಮದಿಂದ ಪಡೆದಿದ್ದಾರೆ. ನಿಗಮಕ್ಕೆ 5 ಸಾವಿರ ರೂ.ಗ್ರಿಲ್ ಅಳವಡಿಸಿ ಅಂಗಡಿ ಮಾಲಕರಿಗೆ 72 ಸಾವಿರ ರೂ.ಪಾವತಿಸಿ, ವ್ಯತ್ಯಾಸದ ಮೊತ್ತ 67 ಸಾವಿರ ರೂ.ಗಳನ್ನು ಪಡೆದಿದ್ದಾರೆ.
ಕರ್ನಾಟಕ ಮಾರ್ಕೆಟಿಂಗ್ ಆ್ಯಂಡ್ ಅಲೀದ್ ಸರ್ವಿಸ್ ಮತ್ತು ಮಾರುತಿ ಪೆರ್ಟೋಕಮ್ ಟೆರಾ ಬಯೋ ಟೆಕ್ನಾಲಜೀಸ್ ಲಿ.ಗೆ 2011ರಿಂದ 2015ರ ವರೆಗೆ ಕೃಷಿ ಇಲಾಖೆಗೆ ಗೊಬ್ಬರ ಸರಬರಾಜು ಮಾಡಿರುವುದಕ್ಕೆ ಹಳೆ ಬಾಕಿ ಎಂಬುದಾಗಿ ಮೂರು ಕಂತಿನಲ್ಲಿ ಒಟ್ಟು 75.81ಲಕ್ಷ ರೂ.ಪಾವತಿ ಮಾಡಿದ್ದಾರೆಂಬುದು ಸೇರಿದಂತೆ ನಿಗಮದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಕ್ರಮಗಳ ಬಗ್ಗೆ ಸಮಗ್ರ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದೆ.
ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆಂಚೇಗೌಡ ಹಾಗೂ ಉಪಾಧ್ಯಕ್ಷ ಎಂ.ವೆಂಕಟೇಶ್ ಅವರ ಅಕ್ರಮಗಳಿಗೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಬೇಕೆಂದು ಕೋರಿ, ನಿಗಮದ ನಿರ್ದೇಶಕರಾದ ಶಿವರಾಮಯ್ಯ, ಈರಂಕಯ್ಯ, ದಿನೇಶ್, ವೆಂಕಟೇಶ್ ಮತ್ತು ಮುರುಗಪ್ಪ ದೂರು ನೀಡಿದ್ದಾರೆ.
ತನಿಖೆಗೆ ಆದೇಶ: ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ನಿರ್ದೇಶಕ ಶಿವರಾಮಯ್ಯನವರ ದೂರನ್ನು ಆಧರಿಸಿ ಈ ವಿಷಯದ ಬಗ್ಗೆ ಪರಿಶೀಲಿಸಿ ಕೂಡಲೇ ವರದಿ ನೀಡಬೇಕೆಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಆದೇಶಿಸಲಾಗಿದೆ.
-ಕೆ.ಜೆ.ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ