ಡೀಸೆಲ್ ಆಟೊ ರಿಕ್ಷಾ ನೋಂದಣಿ ನಿಷೇಧಕ್ಕೆ ಹೈಕೋರ್ಟ್ ಮಧ್ಯಂತರ ತಡೆ
ಬೆಂಗಳೂರು, ನ.30: ಪರಿಸರ ಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಡೀಸೆಲ್ ಆಟೊ ರಿಕ್ಷಾಗಳ ನೋಂದಣಿ ನಿಷೇಧಿಸಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಡೀಸೆಲ್ ಆಟೋಗಳ ನೋಂದಣಿ ನಿಷೇಧಿಸಿ ಸರಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಮೆಸರ್ಸ್ ಫಾರ್ಮಾ ಪವರ್ ಟ್ರ್ಯಾಕ್ಟರ್ ಹಾಗೂ ಇತರ ಆಟೊ ತಯಾರಕ ಹಾಗೂ ಮಾರಾಟಗಾರ ಕಂಪೆನಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಜುಲೈ 7ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಾದೇಶಿಕ ಅಥವಾ ಸಹಾಯಕ ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಯಲ್ಲಿ 4ಸ್ಟ್ರೋಕ್ ಪೆಟ್ರೋಲ್ ಚಾಲಿತ ಆಟೊ ರಿಕ್ಷಾಗಳನ್ನು ಮಾತ್ರವೇ ನೋಂದಣಿ ಮಾಡಬೇಕು ಎಂದು ಕಡ್ಡಾಯಗೊಳಿಸಲಾಗಿದೆ.
ಈ ಅಧಿಸೂಚನೆ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ ಎಂದು ಸರಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ, ಡೀಸೆಲ್ ಆಟೊಗಳ ನೋಂದಣಿ ನಿಷೇಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಪರಿಸರ ಮಾಲಿನ್ಯ ತಡೆ ದೃಷ್ಟಿಯಿಂದ ಸರಕಾರ ಈ ನಿರ್ಧಾರ ಕೈಗೊಂಡಿದ್ದು, ಇಂತಹ ನಿರ್ಧಾರಗಳನ್ನು ಕೈಗೊಳ್ಳಲು ರಾಜ್ಯಕ್ಕೆ ಅಧಿಕಾರವಿದೆ ಎಂದು ತಿಳಿಸಿದರು.
ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಡೀಸೆಲ್ ಆಟೊಗಳ ನೋಂದಣಿ ನಿಷೇಧಿಸಲಾಗಿದ್ದು, ನಾಲ್ಕು ಸ್ಟ್ರೋಕ್‌ನ ಎಲ್‌ಪಿಜಿ, ಸಿಎನ್‌ಜಿ ಮತ್ತು ಪೆಟ್ರೋಲ್ ಆಟೊರಿಕ್ಷಾಗಳ ನೋಂದಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಡೀಸೆಲ್ ಆಟೊ ರಿಕ್ಷಾಗಳ ನೋಂದಣಿ ನಿಷೇಧಿಸಿ ಆದೇಶ ಹೊರಡಿಸಿರುವುದು ಕೇಂದ್ರ ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ. ಹೀಗಾಗಿ, ಆಟೊ ರಿಕ್ಷಾಗಳ ನೋಂದಣಿ ನಿಷೇಧಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗುವುದು ಎಂದು ಹೇಳಿತು.
ಪ್ರಕರಣವೇನು: ಯಾವ ಸ್ಥಳಗಳಲ್ಲಿ ಎಲ್‌ಪಿಜಿ ರೆಟ್ರೊಫಿಟ್‌ಮೆಂಟ್ ಮತ್ತು ಮರು ಇಂಧನ ಪೂರೈಕೆ ಸೌಲಭ್ಯ ಹೊಂದಲಾಗಿದೆಯೋ ಅಂತಹ ಸ್ಥಳಗಳಲ್ಲಿ ಮಾತ್ರವೇ 4ಸ್ಟ್ರೋಕ್ ಎಂಜಿನ್ ಹೊಂದಿರುವ ಎಲ್‌ಪಿಜಿ (ದ್ವಿ ಇಂಧನ) ಆಟೊ ರಿಕ್ಷಾಗಳನ್ನು ನೋಂದಾಯಿಸಬೇಕು ಎಂದು ಜುಲೈ 7 ರಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.