ಮಂಗಳೂರು ಮೇಯರ್, ಡಿಜಿಗೆ ಹೈಕೋರ್ಟ್ ನೋಟಿಸ್
Update: 2017-11-30 22:35 IST
ಬೆಂಗಳೂರು, ನ.30: ಪರವಾನಿಗೆ ಇಲ್ಲದೆ ನಡೆಸುತ್ತಿದ್ದ ಕಾರಣಕ್ಕೆ ಅತ್ತಾವರದ ನ್ಯೂ ಮೆಂಬರ್ರ್ಸ್ ಸ್ಕಿಲ್ ಲಾಂಜ್ ಕ್ಲಬ್ ಮೇಲೆ ದಾಳಿ ನಡೆಸಿ ಬೀಗ ಹಾಕಿದ್ದಲ್ಲದೆ, ಎಫ್‌ಐಆರ್ ದಾಖಲಿಸದೆ ಕ್ಲಬ್ ಮಾಲಕರಾದ ಸುಜಿತಾ ರೈ ಅವರನ್ನು ಬಂಧಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಮೇಯರ್ ಕವಿತಾ ಸುನಿಲ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್ ಗುರುವಾರ ನೋಟಿಸ್ ನೀಡಿದೆ.
ಪ್ರಕರಣ ರದ್ದುಪಡಿಸಬೇಕು, ಪರಿಹಾರ ನೀಡಬೇಕೆಂದು ಸುಜಿತಾ ರೈ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ, ಮಂಗಳೂರು ಮೇಯರ್ ಕವಿತಾ ಸುನಿಲ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಸುಜಿತಾ ರೈ ವಿರುದ್ಧ ದಾಖಲಿಸಿರುವ ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನು ಡಿ.14ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರಕಾರಿ ಅಭಿಯೋಜಕರಿಗೆ ಇದೇ ವೇಳೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.