ಟಿಪ್ಪಣಿಗಳು

Update: 2017-11-30 18:12 GMT

ಮುಹಮ್ಮದ್ (ಸ) ಬಿನ್ ಅಬ್ದುಲ್ಲಾಹ್ ಕ್ರಿ.ಶ.570ರಲ್ಲಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದವರು. 63ರ ಹರೆಯದಲ್ಲಿ ಅವರು ನಿಧನರಾದರು. ತಮ್ಮ 40ನೇ ವಯಸ್ಸಿನಲ್ಲಿ ಅವರು, ತಾವು ದೇವದೂತರೆಂದು ಘೋಷಿಸಿದರು. ಒಂದು ಪುಟ್ಟ ಗೋತ್ರದಲ್ಲಿ ಜನಿಸಿದ ಅವರು ಸಂಪೂರ್ಣ ಮಾನವ ಸಮೂಹವನ್ನು ಸಂಸ್ಕರಿಸಲು ಹೊರಟರು. ಗಣನೀಯ ಯಶಸ್ಸನ್ನ್ನೂ ಸಾಧಿಸಿದರು.

► ಅವರು ಸದಾ ಹಸನ್ಮುಖಿಯಾಗಿದ್ದರು.

► ಅವರಷ್ಟು ಸರಳ, ಸಹಜ ಬದುಕನ್ನು ಬದುಕಿದ ಮಹಾಪುರುಷ ಬೇರಿಲ್ಲ.

► ಅವರು ಅತ್ಯಂತ ಕ್ಷಮಾಶೀಲರಾಗಿದ್ದರು.

► ಅವರಲ್ಲಿ ಅಪಾರ ವಿನಯವಿತ್ತು.

► ಅವರ ಔದಾರ್ಯ ಅನುಪಮವಾಗಿತ್ತು.

► ಅವರು ಭಾರೀ ಧೈರ್ಯಶಾಲಿಯಾಗಿದ್ದರು. ಅಸಾಮಾನ್ಯ ಸಾಹಸಿಯಾಗಿದ್ದರು.

► ಅವರ ವಾತ್ಸಲ್ಯ ನಿಸ್ಸೀಮವಾಗಿತ್ತು. ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು, ಅಷ್ಟೇ ಏಕೆ, ಗಿಡ ಮರಗಳು ಕೂಡಾ ಅವರ ಪ್ರೀತಿ ವಾತ್ಸಲ್ಯಗಳಿಗೆ ಪಾತ್ರವಾಗಿದ್ದವು.

► ಅವರು ಪರಮ ಸೌಜನ್ಯ ಶೀಲರಾಗಿದ್ದರು.

► ಅವರು ಈ ಜಗತ್ತು ಕಂಡ ಅತ್ಯುತ್ತಮ ಶಿಕ್ಷಕರಾಗಿದ್ದರು.

► ಅವರು ಕೃಪೆ, ಕರುಣೆಗಳ ಸಾಗರವಾಗಿದ್ದರು.

► ಅವರ ನ್ಯಾಯನಿಷ್ಠೆ ಅನನ್ಯವಾಗಿತ್ತು. ಅನ್ಯಾಯ, ಶೋಷಣೆಗಳ ವಿರುದ್ಧ ಅವರಲ್ಲಿ ಅದಮ್ಯ ರೋಷವಿತ್ತು.

► ಜನಸೇವೆಯ ವಿಷಯದಲ್ಲಿ ಅವರ ಹುರುಪು-ಉತ್ಸಾಹ ಸಾರ್ವಕಾಲಿಕ ಮಾದರಿಯಾಗಿತ್ತು.

► ಅವರು ನಿಸರ್ಗ ಪ್ರೇಮಿಯಾಗಿದ್ದರು. ಪ್ರಕೃತಿಯ ಮಡಿಲಲ್ಲಿ ಅವರು ನೆಮ್ಮದಿಯನ್ನು ಕಾಣುತ್ತಿದ್ದರು. ಪ್ರಕೃತಿಯೇ ಧರ್ಮದ ಮೂಲ ಸ್ವಭಾವವೆಂದು ವರ್ಣಿಸಿದ್ದ ಅವರು, ಪರಿಸರ ಸಂರಕ್ಷಣೆಗೆ ಪೂರಕವಾದ ಜೀವನ ಕ್ರಮವನ್ನು ಪ್ರೋತ್ಸಾಹಿಸಿದ್ದರು.

► ಅವರು ನುಡಿದಂತೆ ನಡೆದವರು. ಅವರ ಮಾತು - ಕೃತಿಗಳ ನಡುವೆ ಎಂದೂ ಯಾರೂ ಯಾವುದೇ ವಿರೋಧಾಭಾಸವನ್ನು ಕಾಣಲಿಲ್ಲ.

► ಅವರ ಬದುಕು ಹಾಗೂ ವ್ಯಕ್ತಿತ್ವವು ಸತ್ಯ-ನ್ಯಾಯಗಳ ಪ್ರತಿರೂಪವಾಗಿತ್ತು.

► ಅವರು ಸತ್ಯ, ಸಾಮೂಹಿಕ ನ್ಯಾಯ ಮತ್ತು ಅತ್ಯುನ್ನತ ಮಟ್ಟದ ನೈತಿಕ ವೌಲ್ಯಗಳನ್ನು ಕೇವಲ ಬೋಧಿಸಿದ್ದು ಮಾತ್ರವಲ್ಲ, ತಮ್ಮ ಬದುಕಿನ ಅವಧಿಯಲ್ಲೇ ಸಮಾಜದಲ್ಲಿ       ಅವುಗಳನ್ನು ಅನುಷ್ಠಾನಿಸಿ, ನಿಜಕ್ಕೂ ಒಂದು ಆದರ್ಶ ಸಮಾಜವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು.

► ಅವರು ತಮ್ಮ ಬದುಕಿನ ಅವಧಿಯಲ್ಲೇ ಮದ್ಯ ಮುಕ್ತ, ಜೂಜು ಮುಕ್ತ, ವ್ಯಭಿಚಾರ ಮುಕ್ತ, ಲಂಚಮುಕ್ತ, ಬಡ್ಡಿಮುಕ್ತ ಹಾಗೂ ಅಪರಾಧ ಮುಕ್ತ ಸಮಾಜವೊಂದನ್ನು ನಿರ್ಮಿಸಿ     ತೋರಿಸಿದ್ದರು.

► ಅವರ ವ್ಯಕ್ತಿತ್ವದಂತೆ, ಅವರ ಸಂದೇಶವೂ ಸರಳವಾಗಿತ್ತು.

► ಮಾನವರು ತಮ್ಮ ಸೃಷ್ಟಿಕರ್ತನನ್ನು ಗುರುತಿಸಿ, ಅವನಿಗೆ ಶರಣಾಗಿ, ಅವನ ಮಾರ್ಗದರ್ಶನದಂತೆ ಬದುಕಬೇಕು. ಈ ಲೋಕದ ಬದುಕು ಒಂದು ತಾತ್ಕಾಲಿಕ ಪರೀಕ್ಷಾವಧಿ. ಮರಣದೊಂದಿಗೆ ಈ ಪರೀಕ್ಷೆ ಕೊನೆಗೊಳ್ಳುತ್ತದೆ. ವ್ಯಕ್ತಿಗಳಂತೆ, ಈ ಲೋಕಕ್ಕೂ ಒಂದು ಅಂತ್ಯವಿದೆ. ಈ ನಶ್ವರ ಲೋಕದ ಅಂತ್ಯದೊಂದಿಗೆ, ಫಲಿತಾಂಶಗಳ ಶಾಶ್ವತ ಬದುಕು ಆರಂಭಗೊಳ್ಳುತ್ತದೆ. ತಮ್ಮ ಮೂಲಕ ಜಗತ್ತಿಗೆ ತಲುಪಿದ ‘ಪವಿತ್ರ ಕುರ್‌ಆನ್’ ಎಂಬ ಅಂತಿಮ ದಿವ್ಯಗ್ರಂಥದ ಮಾರ್ಗದರ್ಶನವನ್ನು ಅನುಸರಿಸುತ್ತಾ, ತಮ್ಮ ಆದರ್ಶವನ್ನು ಪಾಲಿಸುತ್ತಾ ಬದುಕಿದವರು ಆ ಶಾಶ್ವತ ಬದುಕಿನಲ್ಲಿ ಯಶಸ್ವಿಯಾಗು ತ್ತಾರೆ. ಈ ಸತ್ಯವನ್ನು ಧಿಕ್ಕರಿಸಿದವರು ಸದಾಕಾಲ ಯಾತನೆ, ಅಪಮಾನಗಳಿಗೆ ತುತ್ತಾಗಿರಬೇಕಾಗುತ್ತದೆ - ಇದು ಅವರು ಸಾರಿದ ಸಂದೇಶದ ಸಾರಾಂಶ.

► ಧರ್ಮ, ಅಧ್ಯಾತ್ಮ, ಪರಲೋಕ ಇತ್ಯಾದಿಗಳ ಹೆಸರಲ್ಲಿ ಈ ಲೋಕವನ್ನು ಕಡೆಗಣಿಸುವುದನ್ನು ಅವರು ವಿರೋಧಿಸಿದರು. ಈ ಲೋಕದಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತಿತರ ಜವಾಬ್ದಾರಿಗಳಿವೆ. ಅವುಗಳಿಂದ ಪಲಾಯನ ಸಲ್ಲದು. ಈ ಎಲ್ಲ ರಂಗಗಳನ್ನು ಜನರು ಪರೀಕ್ಷೆಯಾಗಿ, ಸವಾಲಾಗಿ ಪರಿಗಣಿಸಿ ಸತ್ಯದ ಆಧಾರದಲ್ಲಿ ತಮ್ಮ ಹೊಣೆಗಾರಿಕೆಗಳನ್ನು ಈಡೇರಿಸಿದರೆ ಈ ಲೋಕದಲ್ಲೂ ನ್ಯಾಯವನ್ನು ಸ್ಥಾಪಿಸಲು ಮತ್ತು ಸಮಷ್ಟಿ ಕಲ್ಯಾಣವನ್ನು ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಅದು ಪರಲೋಕದ ಯಶಸ್ಸಿಗೆ ಏಣಿಯಾಗುತ್ತದೆ ಎಂಬುದು ಅವರ ಉಪದೇಶದ ಸ್ಫೂರ್ತಿಯಾಗಿತ್ತು.

► ಅವರು ಸಾಮಾನ್ಯವಾಗಿ ಬಡ, ಜನಸಾಮಾನ್ಯರ ನಡುವೆ ಬದುಕಿದವರು ಮತ್ತು ಬಡವರ ಬದುಕನ್ನೇ ಬದುಕಿದವರು.

► ಅವರಿಗೆ ಲಕ್ಷಾಂತರ ಅನುಯಾಯಿಗಳಿದ್ದಾಗಲೂ, ದೊಡ್ಡ ಭೂಭಾಗವೊಂದರ ಆಡಳಿತವು ಅವರ ಕೈಯಲ್ಲಿದ್ದಾಗಲೂ ಅವರು ತಮಗಾಗಿ ಯಾವುದೇ ಅರಮನೆಯನ್ನು ಕಟ್ಟಿಸಿಕೊಳ್ಳಲಿಲ್ಲ.

► ಅವರು ಜನಸಾಮಾನ್ಯರಂತಹ ಉಡುಗೆ ತೊಡುಗೆಗಳನ್ನು ಧರಿಸುತ್ತಿದ್ದರು. ಜನಸಾಮಾನ್ಯರಂತಹ ಆಹಾರವನ್ನೇ ಸೇವಿಸುತ್ತಿದ್ದರು.

► ಅವರೆಂದೂ ತಮಗಾಗಿ ಯಾವುದೇ ಪಟ್ಟ, ಪೀಠಗಳನ್ನು ನಿರ್ಮಿಸಿಕೊಳ್ಳಲಿಲ್ಲ. ಎಂದೂ ಸಿಂಹಾಸನದಲ್ಲಿ ಕೂರಲಿಲ್ಲ.

► ಪೇಟೆಯಲ್ಲೂ ಮಸೀದಿಯಲ್ಲೂ ಸಭೆ ಸಮಾರಂಭಗಳಲ್ಲೂ ಅವರು ಎಲ್ಲರ ಜೊತೆ ಕುಳಿತು ಕೊಳ್ಳುತ್ತಿದ್ದರು. ಅವರು ಎಲ್ಲೂ ತಮಗಾಗಿ ಯಾವುದೇ ಪ್ರತ್ಯೇಕ ಸ್ಥಳವನ್ನು ಮೀಸಲಾಗಿಟ್ಟಿರಲಿಲ್ಲ.

► ತಮ್ಮ ಗೌರವಾರ್ಥ ಜನರು ಎದ್ದು ನಿಲ್ಲುವುದನ್ನು ಮತ್ತು ತಮ್ಮ ಮುಂದೆ ತಮ್ಮನ್ನು ವೈಭವೀಕರಿಸುವುದನ್ನು ಅವರು ವಿರೋಧಿಸಿದ್ದರು.

► ಅವರು ಸರ್ವಾಧಿಕಾರ, ವಂಶಾಡಳಿತ ಹಾಗೂ ರಾಜಾಳ್ವಿಕೆಗಳ ವಿರೋಧಿಯಾಗಿ ದ್ದರು. ಆಡಳಿತವು ದೇವದತ್ತವಾದ ನ್ಯಾಯೋಚಿತ ನಿಯಮಗಳಿಗೆ ಬದ್ಧವಾಗಿರಬೇಕು. ಜನಮನ್ನಣೆ ಉಳ್ಳವರೇ ಆಳಬೇಕು ಮತ್ತು ಆಡಳಿತಗಾರರು ಜನರ ಮುಂದೆ ಪ್ರಶ್ನಾರ್ಹ ರಾಗಿರಬೇಕು-ಎಂಬುದು ಅವರ ನಿಲುವಾಗಿತ್ತು.

► ದೇವರು ನಿರಾಕಾರ, ನಿಸ್ಸೀಮ, ಅನಾದಿ, ಅನಂತ ಹಾಗೂ ಸರ್ವಶಕ್ತ್ತಿ ಸಂಪನ್ನನಾಗಿ ದ್ದಾನೆ. ಸಕಲ ಮಾನವರು, ಎಲ್ಲ ಜೀವಿ ನಿರ್ಜೀವಿಗಳು ಹಾಗೂ ಸಂಪೂರ್ಣ ಅಸ್ತಿತ್ವದ ನಿರ್ಮಾತೃ ಹಾಗೂ ನಿಯಂತ್ರಕನು ಅವನೇ. ಅವನು ಎಲ್ಲಾ ತರದ ಅಗತ್ಯಗಳಿಂದ, ದೌರ್ಬಲ್ಯಗಳಿಂದ ಹಾಗೂ ನಿರ್ಬಂಧಗಳಿಂದ ಮುಕ್ತನಾಗಿದ್ದಾನೆ ಎಂದು ಅವರು ಪ್ರತಿಪಾದಿಸಿದರು.

► ದೇವರನ್ನು ಯಾವುದಾದರೂ ರೂಪದಲ್ಲಿ ಕಲ್ಪಿಸಿಕೊಂಡು, ಚಿತ್ರ, ವಿಗ್ರಹ ಇತ್ಯಾದಿಗಳನ್ನು ರೂಪಿಸಿ ಅವುಗಳನ್ನು ದೇವರೆಂದು ನಂಬಿ ಪೂಜಿಸುವ ಕ್ರಮವನ್ನು ಅವರು ಖಂಡಿಸಿದರು. ಹಾಗೆಯೇ ದೇವರಿಗೆ ಹಸಿವು, ದಾಹ, ನಿದ್ರೆ, ಕಾಮ, ಕುಟುಂಬ, ಸಂತಾನ ಇತ್ಯಾದಿ ಗುಣಗಳನ್ನು ಆರೋಪಿಸುವುದನ್ನು ಅವರು ಆಕ್ಷೇಪಿಸಿದರು.

► ಅವರು ಪೌರೋಹಿತ್ಯದ ವಿರೋಧಿಯಾಗಿದ್ದರು. ಮಾನವರು, ದೇವರನ್ನು ಸಮೀಪಿಸುವುದಕ್ಕಾಗಿ ಮಧ್ಯವರ್ತಿಗಳನ್ನಾಗಲಿ, ಪುರೋಹಿತರನ್ನಾಗಲಿ ಅವಲಂಬಿಸುವ ಅಗತ್ಯವೇನಿಲ್ಲ. ದೇವರು ಸದಾ ಎಲ್ಲ ಮಾನವರಿಗೆ ನಿಕಟನಾಗಿರುತ್ತಾನೆ. ಅವರ ಅಹವಾಲುಗಳನ್ನು ಅರಿತಿರುತ್ತಾನೆ ಹಾಗೂ ಅವರ ಮೊರೆಗಳನ್ನು ಆಲಿಸುತ್ತಾನೆ. ಅವನು ಮಾತ್ರ ಪೂಜೆಗೆ ಅರ್ಹನು ಮತ್ತು ಅವನಿಗೆ ಶರಣಾಗಿ ಬದುಕುವುದೇ ಇಹ-ಪರ ವಿಜಯಕ್ಕಿರುವ ದಾರಿ ಎಂಬುದು ಅವರ ಮೂಲ ಉಪದೇಶವಾಗಿತ್ತು.

 ► ಧರ್ಮ, ದೇವರು, ಲೋಕ, ಪರಲೋಕ, ಅಧ್ಯಾತ್ಮ, ವಿಜ್ಞಾನ ಇತ್ಯಾದಿ ಯಾವುದೇ ವಿಷಯದ ಕುರಿತಾದ ಜ್ಞಾನ, ವಿದ್ವತ್ತುಗಳು ಯಾವುದೇ ವರ್ಗಕ್ಕೆ ಸೀಮಿತ ವಾಗಿರಬಾರದು. ಜ್ಞಾನಾರ್ಜನೆ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಮಾತ್ರವಲ್ಲ ಕರ್ತವ್ಯವೂ ಹೌದು ಎಂದು ಸಾರುವ ಮೂಲಕ ಅವರು ಶೋಷಣೆಯ ಒಂದು ಪರಂಪರಾಗತ ಹೆಬ್ಬಾಗಿಲನ್ನೇ ಮುಚ್ಚಿಬಿಟ್ಟರು.

► ಇದೆಲ್ಲವನ್ನೂ ಸಾಧಿಸಿದ ಪ್ರವಾದಿ ಮುಹಮ್ಮದ್(ಸ), ಇತಿಹಾಸದ ತುಂಬು ಬೆಳಕಿನಲ್ಲಿ ಹುಟ್ಟಿ ಬೆಳೆದು ಮಾನವ ಬದುಕನ್ನು ಬೆಳಗಿದವರು. ಇಂದು ಕೂಡಾ ಅವರ ಬದುಕಿನ ಎಲ್ಲ ಹಂತಗಳ ಕುರಿತು ಅಧಿಕೃತ, ವಿಶ್ವಸನೀಯ, ಐತಿಹಾಸಿಕ ಮಾಹಿತಿಗಳು ಲಭ್ಯ.

ಹೀಗೆ, ಯಾವ ಆಯಾಮದಿಂದ ನೋಡಿದರೂ ಪ್ರವಾದಿ ಮುಹಮ್ಮದ್ (ಸ) ಅವರ ಕ್ರಾಂತಿಕಾರಿ ಬದುಕು, ವ್ಯಕ್ತಿತ್ವ, ಸಂದೇಶ ಹಾಗೂ ಸಾಧನೆಗಳಲ್ಲಿ ಮಾನವ ಕುಲದ ಸಮಗ್ರ ಕಲ್ಯಾಣಕ್ಕೆ ಬೇಕಾದ ಅಂಶಗಳೇ ಎದ್ದು ಕಾಣುತ್ತವೆ. ಸಮಷ್ಟಿ ಹಿತ ಸಾಧಿಸುವುದಕ್ಕೆ ಬೇಕಾದ ಸರ್ವ ಸಾಧನ, ಸಾಮರ್ಥ್ಯಗಳು ಅಲ್ಲಿವೆ.

ಪ್ರವಾದಿ ಮುಹಮ್ಮದ್ (ಸ) ರ ಬದುಕಿನ ಕುರಿತು ಒಂದು ಇಣುಕು ನೋಟವನ್ನು ಒದಗಿಸುವಂತಹ ತೀರಾ ಸರಳವಾದ ಕೆಲವು ನುಡಿಗಳು, ಆದೇಶಗಳು ಮತ್ತು ಪುಟ್ಟ ಘಟನೆಗಳು ಇಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News