'ಪದ್ಮಾವತಿ' ಕಾಲ್ಪನಿಕ ಆಗಿದ್ದರೆ ನೈಜ ಹೆಸರು ಬಳಸಿದ್ದೇಕೆ?: ಸಿಬಿಎಫ್‌ಸಿ ಪ್ರಶ್ನೆ

Update: 2017-12-01 04:42 GMT

ಹೊಸದಿಲ್ಲಿ, ಡಿ.1: ವಿವಾದಿತ ಚಿತ್ರ 'ಪದ್ಮಾವತಿ' ಕಾಲ್ಪನಿಕ ಕಥೆಯಾನ್ನಧರಿಸಿದ ಚಿತ್ರ ಎಂದು ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ ಹೇಳಿದ್ದರೂ, ಇತಿಹಾಸಕಾರರು ಒಪ್ಪಿಕೊಂಡ ಬಳಿಕ ಪ್ರಮಾಣಪತ್ರ ನೀಡಿ ಬಿಡುಗಡೆ ಮಾಡಲಾಗುವುದು ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಪ್ರಕಟಿಸಿದ್ದಾರೆ.

ಈ ಸಂಬಂಧ ಸಂಸದೀಯ ಸಮಿತಿ ಮುಂದೆ ಶುಕ್ರವಾರ ಜೋಶಿ ಹೇಳಿಕೆ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕುರಿತ ಸಂಸದಗೀಯ ಸಮಿತಿ ಸದಸ್ಯರು ಬನ್ಸಾಲಿಯವರನ್ನು ತರಾಟೆಗೆ ತೆಗೆದುಕೊಂಡು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡುವ ಮುನ್ನ ಕೆಲ ಆಯ್ದ ಪತ್ರಕರ್ತರಿಗೆ ಹೇಗೆ ಪ್ರದರ್ಶನ ಮಾಡಲಾಯಿತು ಎಂದು ಪ್ರಶ್ನಿಸಿದರು.

ಈ ಚಿತ್ರದಲ್ಲಿ ತಪ್ಪೇನೂ ಇಲ್ಲ ಎಂಬ ಸಂದೇಶವನ್ನು ರವಾನಿಸುವ ಸಲುವಾಗಿ ಬೇರೆ ಆಯ್ಕೆ ಇರಲಿಲ್ಲ ಎಂದು ಭನ್ಸಾಲಿ ಸಮರ್ಥಿಸಿಕೊಂಡರು. ಆದರೆ ಭನ್ಸಾಲಿಯವರು ಮಂಡಳಿಯನ್ನು ಕಡೆಗಣಿಸಿದ್ದಾರೆ ಎಂದು ಜೋಶಿ ಆರೋಪಿಸಿದರು. ಚಿತ್ರದ ಪ್ರಮಾಣಪತ್ರಕ್ಕೆ ಒತ್ತಡ ತರುವುದಾದರೆ ಸಮಿತಿ ಮುಂದೆ ಹಾಜರಾಗುವ ಅಗತ್ಯ ಏನಿತ್ತು ಎಂದು ಸಮಿತಿಯ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಭನ್ಸಾಲಿಯವರನ್ನು ಪ್ರಶ್ನಿಸಿದರು.

60 ದೇಶಗಳಲ್ಲಿ ಚಿತ್ರ ಬಿಡುಗಡೆಗೆ ಬಾಕಿ ಇರುವುದರಿಂದ ಈಗಾಗಲೇ ದೊಡ್ಡ ಪ್ರಮಾಣದ ಹಣಕಾಸು ನಷ್ಟವಾಗಿದೆ ಎಂದು ಭನ್ಸಾಲಿ ಹೇಳಿದರು. ಇದಕ್ಕೆ ಆಕ್ಷೇಪಿಸಿದ ಸದಸ್ಯರು, ಭಾವನಾತ್ಮಕ ವಿಷಯವನ್ನು ವ್ಯವಹಾರ ಮಾಡಲು ಹೊರಟಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಚಿತ್ರ ತಿರುಚಿದ ಇತಿಹಾಸವನ್ನು ಒಳಗೊಂಡಿದೆ ಎಂದು ಬಿಜೆಪಿ ಸಂಸದರಾದ ಓಂ ಬಿರ್ಲಾ ಮತ್ತು ಸಿ.ಪಿ.ಜೋಶಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಭನ್ಸಾಲಿ ಹಾಗೂ ಮಂಡಳಿ ತಮ್ಮ ಪ್ರತಿಕ್ರಿಯೆ ನೀಡುವಂತೆ ಸಂಸದೀಯ ಸಮಿತಿ ಕೇಳಿತ್ತು. ತಜ್ಞರ ಸಮಿತಿ ಚಿತ್ರವನ್ನು ನೋಡಿ ಒಪ್ಪಿಕೊಂಡ ಬಳಿಕವಷ್ಟೇ ಪ್ರಮಾಣಪತ್ರ ನೀಡುವುದಾಗಿ ಜೋಶಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಚಿತ್ರ ಕಾಲ್ಪನಿಕ ಎಂದಾದರೆ ನೈಜ ಹೆಸರುಗಳನ್ನು ಏಕೆ ಬಳಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿ ಎಂದು ಸಮಿತಿ ಸದಸ್ಯರು ಹಾಗೂ ಜೋಶಿ ಭನ್ಸಾಲಿ ಅವರನ್ನು ಆಗ್ರಹಿಸಿದರು ಎಂದು ತಿಳಿದುಬಂದಿದೆ. ಚಿತ್ರ ಇರುವುದು ಮನೋರಂಜನೆಗೇ ಹೊರತು ಉದ್ವಿಗ್ನ ವಾತಾವರಣ ಸೃಷ್ಟಿಸಲು ಅಲ್ಲ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News