×
Ad

ಕಲ್ಲಿದ್ದಲು ಕೊರತೆ ಉಂಟಾದರೂ ಲೋಡ್ ಶೆಡ್ಡಿಂಗ್ ಮಾಡೋಲ್ಲ: ಸಚಿವ ಶಿವಕುಮಾರ್

Update: 2017-12-01 22:30 IST

ಬೆಂಗಳೂರು, ಡಿ.1: ರಾಜ್ಯದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಿಗೆ ವಿದ್ಯುತ್ ಕೊರತೆ ಉಂಟಾಗಿದ್ದರೂ, ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಪಶ್ಚಿಮ ದ್ವಾರದಲ್ಲಿರುವ ಕೆಂಗಲ್ ಹನುಮಂತಯ್ಯ ಪುಣ್ಯ ಸ್ಮರಣೆ ಅಂಗವಾಗಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮೂಲಗಳಿಂದಲೂ ಕಲ್ಲಿದ್ದಲು ಖರೀದಿಸಿ ಕಲ್ಲಿದ್ದಲು ಕೊರತೆ ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಹೊಸದಿಲ್ಲಿಯಲ್ಲಿ ಡಿ.6ರಿಂದ 8ರ ವರೆಗೆ ಇಂಧನ ಸಚಿವರ ಸಮ್ಮೇಳನ ನಡೆಯಲಿದ್ದು, ಆ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದಲ್ಲಿ ಉಂಟಾಗುವ ಕಲ್ಲಿದ್ದಲು ಕೊರತೆ ವಿಚಾರ ಪ್ರಸ್ತಾಪಿಸಲಾಗುವುದೆಂದ ಅವರು, ಈ ಮಧ್ಯೆ ಮಹಾರಾಷ್ಟ್ರದಿಂದ ಕಲ್ಲಿದ್ದಲು ಪಡೆಯುವುದಕ್ಕೂ ಕೇಂದ್ರ ಅಡ್ಡಿಪಡಿಸಿದೆ ಎಂದು ದೂರಿದರು.

ಕೇಂದ್ರ ಕಲ್ಲಿದ್ದಲು ಪೂರೈಕೆ ಮಾಡದೆ ರಾಜ್ಯಕ್ಕೆ ಒಂದು ರೀತಿಯಲ್ಲಿ ಶಾಕ್ ನೀಡಿದೆ. ಆದರೂ ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ. ಯುಪಿಸಿಎಲ್ನಿಂದ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಗೆ ಉದ್ದೇಶಿಸಲಾಗಿದೆ ಎಂದ ಅವರು, ವಿದ್ಯುತ್ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ಪ್ರತ್ಯೇಕ ಕಾರಿಡಾರ್ ಒದಗಿಸಿ ಕೇಂದ್ರದ ವಿದ್ಯುತ್ ಸ್ಥಾವರದಲ್ಲಿ ಪ್ರತಿ ಯೂನಿಟ್‌ಗೆ 2.50 ರೂ.ದರದಲ್ಲಿ ವಿದ್ಯುತ್ ಕೊಡಿಸಿದರೆ ಅದನ್ನು ರಾಜ್ಯ ಸರಕಾರ ಸ್ವಾಗತಿಸಲಿದೆ. ಈ ಸಂಬಂಧ ಬಿಎಸ್‌ವೈಗೆ ಪತ್ರವನ್ನು ಬರೆಯುವೆ ಎಂದು ಶಿವಕುಮಾರ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಒರ್ವ ಧೀಮಂತ ವ್ಯಕ್ತಿ. ಅವರ ಪರಿಶ್ರಮದಿಂದಾಗಿ ಇಂದು ವಿಧಾನಸೌಧ ಶಕ್ತಿ ಕೇಂದ್ರವಾಗಿ ಬೆಳೆದಿದೆ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಹನುಮಂತಯ್ಯನವರ ತೀರ್ಮಾನಗಳು ಕರ್ನಾಟಕಕ್ಕೆ ಹೊಸ ತಿರುವು ನೀಡಿತು.
-ಡಿ.ಕೆ.ಶಿವಕುಮಾರ್, ಇಂಧನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News