ಕೊಡಗಿನ ಹುತ್ತರಿ ಹಬ್ಬ

Update: 2017-12-02 12:29 GMT

ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹುತ್ತರಿ ಹಬ್ಬವು ವ್ಯವಸಾಯಕ್ಕೆ ಸಂಬಂಧಿಸಿದ ಆಚರಣೆಯಾಗಿದ್ದು, ವರ್ಷದ ಮೊದಲ ಬೆಳೆ ತೆಗೆಯುವ ಸಂದರ್ಭದಲ್ಲಿ ಆಚರಿಸುವ ಈ ಹಬ್ಬವನ್ನು ‘ಸುಗ್ಗಿ ಹಬ್ಬ’ ಎಂದು ಇತರೆಡೆ ಆಚರಿಸಿದರೆ, ಕೊಡಗಿನಲ್ಲಿ ‘ಹುತ್ತರಿ ಹಬ್ಬ’ ಎಂದು ಆಚರಿಸುತ್ತಾರೆ. ವ್ಯವಸಾಯ ಪ್ರಧಾನವಾದ ನಾಡು ಕೊಡಗು. ಇಲ್ಲಿ ವ್ಯವಸಾಯವನ್ನು ಅವಲಂಬಿಸಿರುವ ಎಲ್ಲರೂ ಈ ಹಬ್ಬವನ್ನು ಆಚರಿಸಿದರೂ ಕೊಡಗಿನಲ್ಲಿ ಕೊಡವರು ಆಚರಿಸುವ ಈ ಹುತ್ತರಿ ಹಬ್ಬದ ಆಚರಣೆ ವಿಶಿಷ್ಟವಾದುದು.

ಕೊಡಗು ತನ್ನ ವೈವಿಧ್ಯಮಯದ ಜೀವ ಜಗತ್ತು. ಪ್ರಾಕೃತಿಕ ಸೌಂದರ್ಯ, ಬುಡಕಟ್ಟು, ಅರಣ್ಯ ಬೆಟ್ಟಗುಡ್ಡಗಳಿಗೆ ಹೆಸರುವಾಸಿಯಾದ ಕರ್ನಾಟಕದ ಒಂದು ಪುಟ್ಟ ಜಿಲ್ಲೆ. ಇದಿಷ್ಟಅಲ್ಲದೇ ತನ್ನ ವಿಶಿಷ್ಟವಾದ ಆಚಾರ, ಸಂಪ್ರದಾಯ, ಊಟ ಉಪಚಾರ, ಉಡುಗೆ, ತೊಡುಗೆಗಳಿಂದಲೂ ಆಕರ್ಷಣೆಯ ಬಿಂದುವಾಗಿದೆ. ಈ ಪ್ರದೇಶದಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ತಮ್ಮ ಪ್ರತಿಯೊಂದು ಆಚರಣೆಗಳಲ್ಲೂ ಇದು ಅಭಿವ್ಯಕ್ತಿಗೊಳ್ಳುತ್ತಲೇ ಇರುತ್ತದೆ. ಇಂತಹ ವಿಶಿಷ್ಟ ಆಚರಣೆಗಳಲ್ಲಿ ಹುತ್ತರಿ ಹಬ್ಬವೂ ಕೂಡ ಒಂದು. ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹುತ್ತರಿ ಹಬ್ಬವು ವ್ಯವಸಾಯಕ್ಕೆ ಸಂಬಂಧಿಸಿದ ಆಚರಣೆಯಾಗಿದ್ದು, ವರ್ಷದ ಮೊದಲ ಬೆಳೆ ತೆಗೆಯುವ ಸಂದರ್ಭದಲ್ಲಿ ಆಚರಿಸುವ ಈ ಹಬ್ಬವನ್ನು ‘‘ಸುಗ್ಗಿ ಹಬ್ಬ’’ ಎಂದು ಇತರೆಡೆ ಆಚರಿಸಿದರೆ, ಕೊಡಗಿನಲ್ಲಿ ‘ಹುತ್ತರಿ ಹಬ್ಬ’ ಎಂದು ಆಚರಿಸುತ್ತಾರೆ. ವ್ಯವಸಾಯ ಪ್ರಧಾನವಾದ ನಾಡು ಕೊಡಗು. ಇಲ್ಲಿ ವ್ಯವಸಾಯವನ್ನು ಅವಲಂಬಿಸಿರುವ ಎಲ್ಲರೂ ಈ ಹಬ್ಬವನ್ನು ಆಚರಿಸಿದರೂ ಕೊಡಗಿನಲ್ಲಿ ಕೊಡವರು ಆಚರಿಸುವ ಈ ಹುತ್ತರಿ ಹಬ್ಬದ ಆಚರಣೆ ವಿಶಿಷ್ಟವಾದುದು. ಕೊಡವರಿಗೂ ಭೂಮಿಗೂ ಬಹಳ ಅನ್ಯೋನ್ಯವಾದ ನಂಟು. ಪ್ರಾಣಕೊಟ್ಟರೂ ಸೈ ಭೂಮಿ ಬಿಡೆವು ಎಂಬಂತಹ ಮನಸ್ಥಿತಿ ಕೊಡವರದು. ಶೈವ, ವೈಷ್ಣವ ಎಂದು ಒಂದು ನಿರ್ದಿಷ್ಟ ಮತ ಪಂಥಕ್ಕೆ ಒಳಪಡದ ಈ ಸಮುದಾಯದವರು ಪ್ರಕೃತಿಯ ಆರಾಧಕರು. ಪಂಚಭೂತಗಳೇ ಇವರ ದೈವಗಳು. ಇವರು ಅಗ್ನಿ ಹಾಗೂ ನೀರಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಅಗ್ನಿಯನ್ನು ವಿಶೇಷವಾಗಿ ಪೂಜಿಸುವ ಇವರ ಈ ಆಚರಣೆಯಲ್ಲಿ ಆರ್ಯರ ಹೋಲಿಕೆಯನ್ನು ಕಾಣಬಹುದು. ಮೂಲತಃ ಇವರು ವಿಗ್ರಹಾರಾಧಕರಲ್ಲ. ಮನೆಯ ನೆಲ್ಲಕ್ಕಿ ನಡುಬಾಡೆಯ (ಮನೆಯ ಮುಖ್ಯಭಾಗ) ‘ತೂಕ್ ಬೊಳಕ್’ (ತೂಗುವ ದೀಪವೇ) ಇವರ ಆರಾಧನೆಯ ಸ್ಥಳ. ಆದರೆ ಇತ್ತೀಚೆಗೆ ಅಲ್ಲಿ ಕೆಲವು ದೇವರ ಪಟಗಳನ್ನು ಕಾಣಬಹುದು. ವೈದಿಕಶಾಹಿಯ ಪ್ರಭಾವ ಬಹಳ ಗಾಢವಾಗಿ ಈ ಸಮುದಾಯದ ಮೇಲಾಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಹುತ್ತರಿ ಎಂಬುದರ ಕೊಡವ ಭಾಷಿಕ ರೂಪವೇ ಪುತ್ತರಿ. ಹುತ್ತರಿ ಎಂದರೆ ಪುದಿಯ=ಹೊಸ, ಅರಿ=ಅಕ್ಕಿ, ಪುತ್ತರಿ=ಹೊಸ ಅಕ್ಕಿ, ಹೊಸ ಭತ್ತದ ಬೆಳೆಯನ್ನು ನೀಡಿದ ಭೂಮಿ ತಾಯಿಗೆ ಹಾಗೂ ಧಾನ್ಯಲಕ್ಷ್ಮೀಗೆ ಭಕ್ತಿ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವೇ ಹುತ್ತರಿ ಹಬ್ಬ. ಹುತ್ತರಿ ಹಬ್ಬಕ್ಕೂ ಕೊಡಗಿನ ದೈವ ಇಗ್ಗುತಪ್ಪನಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಒಂದು ಪೌರಾಣಿಕ ಹಿನ್ನೆಲೆ ಕೂಡ ಇದೆ. ಹಿಂದೆ ರಾಜ್ಯ ರಾಜ್ಯಗಳ ನಡುವೆ ಗಡಿಗಳಿರದಿದ್ದ ಸಂದರ್ಭದಲ್ಲಿ ಕೊಡಗು ಹಾಗೂ ಕೇರಳ ಒಂದು ದಟ್ಟ ಕಾನನದಲ್ಲಿರುವ ಅಕ್ಕಪಕ್ಕದ ಪ್ರದೇಶಗಳು. ಈ ಕಾಡನ್ನು ಗಡಿಗಳಾಗಿ ಗುರುತಿಸುವುದು ಅಷ್ಟು ಸುಲಭವಲ್ಲ. ಆಚರಣೆ, ನಂಬಿಕೆ, ದೈವಗಳಿಗೆ ಸಂಬಂಧಿಸಿದಂತೆ ಈ ಎರಡು ಪ್ರದೇಶಗಳ ನಡುವೆ ಬಹಳಷ್ಟು ಹೋಲಿಕೆಗಳಿವೆ. ಇಂದಿಗೂ ಕೊಡಗಿನಲ್ಲಿ ಪೂಜಿಸಲಾಗುತ್ತಿರುವ ಬಹಳಷ್ಟು ಪ್ರಮುಖ ದೇವತೆಗಳು ಕೇರಳದಿಂದ ಬಂದ ದೈವಗಳೆಂದು ನಂಬುತ್ತಾರೆ. ಕೊಡಗಿನಲ್ಲಿ ಪ್ರಮುಖವಾಗಿ ಆರಾಧನೆಗೆ ಒಳಪಡುತ್ತಿರುವ ಇಗ್ಗುತಪ್ಪ, ಪಾಲುರಪ್ಪ, ಬೇಂದ್ರುಕೋಲಪ್ಪ, ಪೆಮ್ಮಯ್ಯ, ಕಾಂಚರಾಟಪ್ಪ, ತಿರಚಂಬರಪ್ಪ ಈ ಸಹೋದರರ ಕೊನೆಯ ತಂಗಿ ಪನ್ನಂಗಾಲ ತಮ್ಮೆ ಇವರು ಕೇರಳದಿಂದ ಬಂದು ಕೊಡಗಿನಲ್ಲಿ ಪೂಜಿಸಲ್ಪಡುತ್ತಿರುವವರು. ಇವರಲ್ಲಿ ಇಗ್ಗುತಪ್ಪ, ಪಾಲೂರಪ್ಪ, ತಿರುನೆಲ್ಲಿ ಪೆಮ್ಮಯ್ಯ ಇವರು ಕೇರಳದಿಂದ ಕೊಡಗಿಗೆ ಬಂದು ತಾವು ಬಿಟ್ಟ ಬಾಣ ಎಲ್ಲಿ ಹೋಗಿ ನಾಟುತ್ತದೆಯೋ, ಅಲ್ಲಿ ಹೋಗಿ ನೆಲೆ ನಿಲ್ಲೋಣಾ ಎಂದು ನಿಶ್ಚಯಿಸಿ ಅದರಂತೆ ಇಗ್ಗುತಪ್ಪಾ ಕೊಡಗಿನಲ್ಲಿ ನೆಲೆಸಿ ಕೊಡಗಿನವರ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದ್ದಾರೆ.

ಒಮ್ಮೆ ಇಗ್ಗುತಪ್ಪನು ಕೊಡಗಿನಲ್ಲಿ ಸುಗ್ಗಿಯ ಸಂಭ್ರಮವನ್ನು ಆಚರಿಸಲು ಯಾವುದೇ ಆಚರಣೆಗಳು ಇಲ್ಲದಿದ್ದಾಗ ಕೇರಳದಲ್ಲಿ ನೆಲೆಸಿರುವ ತನ್ನ ಸಹೋದರನಾದ ಬೇಂದ್ರುಕೋಲಪ್ಪನ ಬಳಿ ತೆರಳಿ ಕೇರಳದಲ್ಲಿ ಸುಗ್ಗಿಯನ್ನು ಆಚರಿಸಲು ಓಣಂ ಇರುವಂತೆ ಕೊಡಗಿನಲ್ಲೂ ಸುಗ್ಗಿ ಆಚರಣೆಗೆ ಒಂದು ಮುಹೂರ್ತ ವಿಧಿ ವಿಧಾನಗಳು ಆಗಬೇಕೆಂದು ಕೇಳಿಕೊಂಡಾಗ ಬೇಂದ್ರುಕೋಲಪ್ಪನು ‘ಓಣತಮ್ಮೆ’ ಎಂಬ ಓಣಂ ಹಬ್ಬದ ದೇವತೆಯನ್ನು ಕರೆದು ಪ್ರತೀ ವರ್ಷ ಕೇರಳದಲ್ಲಿ ಓಣಂ ಹಬ್ಬವನ್ನು ಆಚರಿಸಿದ ತೊಂಬತ್ತು ದಿನಗಳ ನಂತರದ ಮೊದಲ ರೋಹಿಣಿ ನಕ್ಷತ್ರದ ಹುಣ್ಣಿಮೆಯಂದು ಸುಗ್ಗಿ ಹಬ್ಬವನ್ನು ನಿಶ್ಚಯಿಸುತ್ತಾನೆೆ. ಅದರಂತೆ ಅದಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಪಾಡಿ ಇಗ್ಗುತಪ್ಪನ ಸನ್ನಿಧಾನಕ್ಕೆ ತೆರಳಿ ಎಲ್ಲರಿಗೂ ವಿಷಯ ತಿಳಿಸಿ ಬಾ ಎಂದು ಕಳುಹಿಸುತ್ತಾನೆ. ಅಂತೆಯೇ ಒಬ್ಬ ಮಹಿಳೆಯ ರೂಪದಲ್ಲಿ ಬಂದ ‘ಓಣತಮ್ಮೆ’ ಇಗ್ಗುತಪ್ಪನ ಸನ್ನಿಧಿಗೆ ಬಂದು ಅಲ್ಲಿನ ಮುಖ್ಯಸ್ಥರಿಗೂ, ಕಣಿಯರಿಗೂ ಈ ವಿಷಯ ತಿಳಿಸುತ್ತಾಳೆ. ಅದರ ಪ್ರಕಾರ ಕೊಡಗಿನಲ್ಲಿ ಇಗ್ಗುತಪ್ಪನಿಂದಲೇ ಈ ಹಬ್ಬ ಪ್ರಾರಂಭವಾಯಿತೆಂದು ಎಲ್ಲರೂ ನಂಬುತ್ತಾರೆ.

                    ಇಗ್ಗುತಪ್ಪ ದೇವಸ್ಥಾನ

ಕೊಡಗಿನಲ್ಲಿ ಮೂಲ ಇಗ್ಗುತಪ್ಪ ದೇವಾಲಯ ಇಗ್ಗುತಪ್ಪ ‘ಮಲ್ಮ’ ಎಂಬ ಸ್ಥಳದಲ್ಲಿದೆ, ಇಲ್ಲಿ ದೇವಾಲಯವಿಲ್ಲ. ಮರಗಳ ಮಧ್ಯೆ ಒಂದು ಶಿಲಾಕೃತಿಯ ರೂಪದಲ್ಲಿ ಇಗ್ಗುತಪ್ಪ ಆರಾಧನೆಗೆ ಒಳಪಡುತ್ತಾನೆ. ಅಲ್ಲದೇ ನಾಲ್ಕುನಾಡು, ನೆಲಜಿ, ಪೇರೂರು, ಪಾಡಿ ಎಂಬ ಸ್ಥಳಗಳಲ್ಲಿ ಇಗ್ಗುತಪ್ಪನ ದೇವಾಲಯಗಳಿವೆ. ಆದರೆ ಕಕ್ಕಬ್ಬೆಯ ಪಾಡಿ ಇಗ್ಗುತಪ್ಪ ದೇವಾಲಯ ಅತ್ಯಂತ ಪ್ರಸಿದ್ಧವಾದದ್ದು ಮತ್ತು ಈ ದೇವಾಲಯದ ಮುಖ್ಯ ತಕ್ಕರು ಮತ್ತು ಕಣಿಯರು (ಪಾರಂಪರಿಕ ಜ್ಯೋತಿಷಿಗಳು) ಸೇರಿ ಹುತ್ತರಿ ಹಬ್ಬದ ದಿನಾಂಕ, ಮುಹೂರ್ತವನ್ನು ನಿರ್ಧರಿಸುತ್ತಾರೆ. ಮೊದಲಿಗೆ ಈ ಇಗ್ಗುತಪ್ಪ ದೇವಾಲಯದಲ್ಲಿ ಕದಿರು ತೆಗೆಯಲಾಗುತ್ತದೆ. ಅಲ್ಲಿ ಮೊದಲ ಪೂಜೆ ಮತ್ತು ನೈವೇದ್ಯ ನೆರವೇರುತ್ತದೆ. ಇದನ್ನು ‘ದೇವಪೊಳ್ದ್’ ಎಂದು ಕರೆಯುತ್ತಾರೆ. ಮರುದಿನ ಊರಿನಲ್ಲಿ ನಡೆಯುವ ಹುತ್ತರಿ ಹಬ್ಬವನ್ನು ‘ನಾಡುಪೊಳ್ದ್’ ಎಂದು ಕರೆಯುತ್ತಾರೆ. ಇಗ್ಗುತಪ್ಪನನ್ನು ಕೊಡಗಿನಲ್ಲಿ ಮಳೆ, ಬೆಳೆ ದೇವರಾಗಿ ಪೂಜಿಸುತ್ತಾರೆ. ಇಗ್ಗುತಪ್ಪ ಎಂದರೆ ಸುಬ್ರಹ್ಮಣ್ಯ. ಈ ದೇವರನ್ನು ಈಶ್ವರ (ಒಡೆಯ) ಇಗ್ಗುತಪ್ಪ, ಸುಬ್ರಾಯ ಎಂದು ಕೂಡ ಕರೆಯುತ್ತಾರೆ. ಪಾಡಿಯಲ್ಲಿ ಲಿಂಗಾಧಾರಿಯಾದ ಈ ಇಗ್ಗುತಪ್ಪನ್ನು ಪೂಜಿಸುತ್ತಾರೆ. ಕದಿರು ಕೊಯ್ಯುವ ಸಂದರ್ಭದಲ್ಲಿ ‘‘ಇಗ್ಗುತಪ್ಪ ದೇವಂಡಾ, ಕೋಲಾಟ, ಕೊಪ್ಪ ಪೊಯಿಲೇ ಪೊಯಿಲೇ. ಬೆಳೆದೇವ ಶ್ರೀ ಇಗ್ಗುತಪ್ಪ ದೇವಂಡ ಹುತ್ತರಿ ಕೋಲಾಟ ಪೊಯಿಲೆ ಪೊಯಿಲೆ’’ ಎಂದು ಹಾಡುತ್ತಾರೆ.

‘ಕದಿರು’ ಎಂದರೆ ಭತ್ತದ ಕಟ್ಟು. ಕದಿರು ಕೊಯ್ಯಲು ಹೋಗುವ ದಿನ ‘ಐನ್ ಮನೆ’ಗೆ ಕುಟುಂಬದ ಎಲ್ಲರೂ ಬಂದು ಸೇರುತ್ತಾರೆ. ಇಂದು ವಿಭಕ್ತ ಕುಟುಂಬಗಳಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ಐನ್ ಮನೆ ವಿಶಿಷ್ಟವಾಗಿದ್ದು, ಇಡೀ ಕುಟುಂಬವನ್ನು ಒಂದೆಡೆ ಸೇರಿಸುವಲ್ಲಿ ಅವರ ಮಧ್ಯೆ ಸಾಮರಸ್ಯ ಒಗ್ಗಟ್ಟನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಅಂದು ಹಬ್ಬದ ಒಂದು ವಾರದ ಮೊದಲೇ ಮನೆ, ಕಣ ಎಲ್ಲವನ್ನೂ ಸ್ವಚ್ಛಗೊಳಿಸಿ, ಸುಣ್ಣಬಣ್ಣವನ್ನು ಹೊಡೆದು ಸಿಂಗರಿಸಿರುತ್ತಾರೆ. ಹಬ್ಬದ ದಿನ ಐನ್ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿರುವ ‘ತೂಕ್‌ಬೊಳಕ್’ (ತೂಗುವ ದೀಪ) ಕೆಳಗೆ ಹೊಸ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಕುಂಬಳಿ ಎಲೆ, ಕಾಡುಗೇರು ಎಲೆ, ಹಲಸಿನ ಎಲೆ ಈ ಐದು ಎಲೆಗಳನ್ನು ಹಾಗೂ ಅಚ್ಚನಾರನ್ನು ಇರಿಸಿರುತ್ತಾರೆ. ಈ ಐದು ಎಲೆಗಳನ್ನು ಒಂದರ ಮೇಲೆ ಒಂದು ಇಟ್ಟು ನಾರಿನಿಂದ ಕಟ್ಟಲಾಗಿರುತ್ತದೆ. ಇದನ್ನು ‘ನೆರೆಕಟ್ಟುವುದು’ ಎನ್ನುತ್ತಾರೆ. ಹೊಸ ಕುಕ್ಕೆಯಲ್ಲಿ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರು ಅಕ್ಕಿಯನ್ನು ಸೇರಿಸಿ ತುಂಬುತ್ತಾರೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡುತ್ತಾರೆ. ಜೊತೆಗೆ ಕುಡುಗೋಲು ‘ತಳಿಯಕ್ಕಿ ಬೊಳ್ಚ’ ಮೂರು ವೀಳ್ಯದೆಲೆ ಮೂರು ಅಡಿಕೆಯನ್ನು ಇಡಲಾಗುತ್ತದೆ. ಆ ಎಲ್ಲಾ ವಸ್ತುಗಳನ್ನು ತೂಕ್ ಬೊಳಕ್‌ನ ಕೆಳಗಡೆ ದೇವರ ಮುಂದೆ ಇಟ್ಟಿರುತ್ತಾರೆ. ಅದರ ಮುಂದೆ ರಂಗೋಲಿಯನ್ನು ಹಾಕಿರುತ್ತಾರೆ. ನಂತರ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಫಲಾಹಾರ ಸೇವಿಸಿ ಕದಿರು ತೆಗೆಯಲು ಗದ್ದೆಗೆ ಹೋಗುತ್ತಾರೆ. ಮೊದಲೇ ಸಿದ್ಧಪಡಿಸಿದ ‘‘ಕುತ್ತಿ’’ಯನ್ನು ಕುಟುಂಬದ ಹಿರಿಯರು ತಲೆ ಮೇಲೆ ಹೊತ್ತಿರುತ್ತಾರೆ ಮತ್ತು ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯುವ ಕುಡುಗೋಲನ್ನು ಕದಿರು ತೆಗೆಯುವ ವ್ಯಕ್ತಿಯ ಕೈಗೆ ನೀಡುತ್ತಾರೆ. ನಂತರ ಮನೆಯ ಹಿರಿಯರು, ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದುಡಿ ಬಾರಿಸುತ್ತಾ, ಹಾಡುತ್ತಾ ಗದ್ದೆಗೆ ತೆರಳುತ್ತಾರೆ. ಕದಿರು ತೆಗೆಯುವ ಗದ್ದೆಯನ್ನು ಮೊದಲೇ ಸಿಂಗರಿಸಿರುತ್ತಾರೆ. ಅಲ್ಲಿ ತಲುಪಿದ ನಂತರ ಹಾಲು, ಜೇನು ಮೊದಲಾದವುಗಳನ್ನು ಕದಿರಿನ ಬುಡಕ್ಕೆ ಸುರಿಯುತ್ತಾರೆ. ಐದು ಎಲೆಗಳ ಕಟ್ಟನ್ನು ಕದಿರಿನ ಬುಡಕ್ಕೆ ಕಟ್ಟುತ್ತಾರೆ. ನಂತರ ಸಾಂಪ್ರದಾಯಿಕವಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸುತ್ತಾರೆ. ದೇವರನ್ನು ಪ್ರಾರ್ಥಿಸಿ ಬೆಸ ಸಂಖ್ಯೆಯಲ್ಲಿ ಕದಿರನ್ನು ಕುಯ್ದು ಕುಕ್ಕೆಯಲ್ಲಿ ಇಡಲಾಗುತ್ತದೆ. ಕದಿರನ ಒಂದೊಂದು ಕಟ್ಟನ್ನು ಆಲುಮರದ ಎಲೆಯಿಂದ ಸುತ್ತಿ ಕದಿರನ್ನು ಕಟ್ಟಿ ಕುಕ್ಕೆಯಲ್ಲಿಡುತ್ತಾರೆ. ಈ ಸಮಯದಲ್ಲಿ ಪಟಾಕಿಯನ್ನು ಸಿಡಿಸಿ ಪೊಲಿ ಪೊಲಿ ದೈವ ಎಂದು ಎಲ್ಲರೂ ಕೂಗುತ್ತಾರೆ. ನಂತರ ಕುಕ್ಕೆಯನ್ನು ತಲೆ ಮೇಲೆ ಹೊತ್ತು ಪೊಲಿ ಪೊಲಿ ದೈವ ಎಂದು ಕೂಗುತ್ತಾ ಮನೆಗೆ ಬರುತ್ತಾರೆ. ಮನೆಗೆ ಬಂದ ನಂತರ ಕದಿರು ಕುಯ್ದವನ ಕಾಲು ತೊಳೆದು ಹಾಲು ನೀಡಿ, ಧಾನ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುತ್ತಾರೆ, ಬರುವಾಗ ಕೈಮಡಕ್ಕೆ ಕಟ್ಟುತ್ತಾ ಬರುತ್ತಾರೆ. ನೆಲ್ಲಕ್ಕಿ ನಡುಬಾಡೆಗೆ ಬಂದು ಚಾಪೆ ಮೇಲೆ ಇಟ್ಟು ಮನೆಯ ಎಲ್ಲಾ ಬಾಗಿಲು ಮುಖ್ಯ ವಸ್ತುಗಳಿಗೆ ಇದನ್ನು ಕಟ್ಟುತ್ತಾರೆ. ನಂತರ ಹೊಸ ಅಕ್ಕಿ ಪಾಯಸ ಮಾಡಿ ಮನೆಯ ಸದಸ್ಯರೆಲ್ಲ ಊಟ ಮಾಡುತ್ತಾರೆ. ಮರುದಿನ ಊರಿನ ನಾಡ್‌ಮಂದ್ (ಮೈದಾನ) ನಲ್ಲಿ ಊರಿನವರೆಲ್ಲಾ ಸೇರಿ ಸಾಂಪ್ರದಾಯಿಕ ಕೋಲಾಟ, ‘ಪರೆಯಕಳಿ’ಗಳನ್ನು ಆಡಿ ಸಂಭ್ರಮಿಸುತ್ತಾರೆ.

ಈ ಹುತ್ತರಿ ಹಬ್ಬ ಕೊಡಗಿಗೆ ವಿಶಿಷ್ಟವಾದ ಹಬ್ಬವಾಗಿದ್ದು ಪಂಜೆಮಂಗೇಶರಾಯರು ‘ಹುತ್ತರಿ ಹಾಡು’ ಎಂಬ ಪದ್ಯ ರಚಿಸಿ ಕೊಡಗಿನ ಪ್ರಕೃತಿ ಜನಜೀವನದ ಸೌಂದರ್ಯವನ್ನು ಬಣ್ಣಿಸಿದ್ದಾರೆ. ವಿಪರ್ಯಾಸವೆಂದರೆ ಕೊಡವ ಸಮುದಾಯದವರು ಇತ್ತೀಚಿನ ದಿನ ಗಳಲ್ಲಿ ತಮ್ಮ ಶ್ರೀಮಂತ ಪರಂಪರೆಯ ನೆಲೆಬೀಡಾದ ಕೊಡಗನ್ನು ತೊರೆದು ಗಣನೀಯ ಸಂಖ್ಯೆಯಲ್ಲಿ ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಕೃಷಿಯ ಏರಿಳಿತ, ವಿಲಾಸಿ ಜೀವನದ ಆಕರ್ಷಣೆ ಇತ್ಯಾದಿ. ಇದರಿಂದಾಗಿ ಕೊಡವರ ನಾಡು ಎಂದು ಕರೆಸಿಕೊಳ್ಳುತ್ತಿರುವ ಕೊಡಗಿನಲ್ಲಿ ಕೊಡವ ಸಮುದಾಯದ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಭತ್ತದ ಬೆಳೆಯು ಕೂಡ ಇತ್ತೀಚೆಗೆ ಕಡಿಮೆಯಾಗಿದ್ದು ಆ ಜಾಗದಲ್ಲಿ ವಾಣಿಜ್ಯ ಬೆಳೆಗಳು ಕಾಲಿಟ್ಟಿವೆ. ಕೃಷಿ ಕಾರ್ಮಿಕರ ಕೊರತೆ, ವಾಣಿಜ್ಯ ಬೆಳೆಗಳ ಆಕರ್ಷಣೆ ಅಲ್ಲದೇ ಇತ್ತೀಚೆಗೆ ವ್ಯಾಪಕವಾಗಿ ಕೊಡಗಿನಲ್ಲಿ ನಡೆಯುತ್ತಿರುವ ಆನೆ ಮಾನವ ಸಂಘರ್ಷದಿಂದಾಗಿ ಬೆಳೆದ ಬೆಳೆ ಕೈಗೆ ಹತ್ತದೆ, ಬೆಳೆಯನ್ನು, ಪ್ರಾಣವನ್ನು ಕಾಪಾಡಿಕೊಳ್ಳುವುದೇ ಹರಸಾಹಸವಾಗಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಮಾನವನ ಅತಿಯಾದ ಆಸೆಯಿಂದ ಭೂಮಿಯ ಕಬಳಿಕೆ ಹೆಚ್ಚಾಗುತ್ತಿದೆ. ಕಾಡು ನಾಡಾಗಿ ಪರಿವರ್ತನೆಯಾಗುತ್ತಿದೆ. ಅಲ್ಲಿರುವ ಕಾಡುಪ್ರಾಣಿಗಳಿಗೆ ಆಹಾರದ ಕೊರತೆಯಾದಂತೆ ತೋಟಗಳಿಗೆ ಲಗ್ಗೆ ಇಟ್ಟು ಫಸಲನ್ನು ಹಾಳುಮಾಡುವ, ಜೀವ ಹಾನಿ ಮಾಡುವ ಸಂಗತಿಗಳು ಕೊಡಗಿನಲ್ಲಿ ಸಾಮಾನ್ಯವಾಗಿದೆ. ಇರುವ ಅಂಗೈ ಅಗಲ ಕಾಡಿನಲ್ಲಿ ಸರಿಯಾದ ಆಹಾರ, ನೀರು ಸಿಗದೆ ಕಾಡು ಪ್ರಾಣಿಗಳು ತೋಟಗಳನ್ನೇ ತಮ್ಮ ಅವಾಸಸ್ಥಾನವನ್ನಾಗಿಸಿಕೊಂಡಿದೆ. ಇದರಿಂದ ಕೆಲವರು ಗದ್ದೆಗಳನ್ನು ತೋಟವನ್ನಾಗಿ ಪರಿವರ್ತನೆ ಮಾಡಿದರೆ, ಇನ್ನು ಕೆಲವರು ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಹುತ್ತರಿ ಹಬ್ಬದ ಸಾಂಪ್ರದಾಯಿಕ ಆಚರಣೆಯನ್ನು ಕೈಬಿಡಬಾರದು ಎಂಬ ಕಾರಣಕ್ಕೆ ಮನೆಯ ಮುಂದೆ ಒಂದು ಸಣ್ಣ ಜಾಗದಲ್ಲಿ ಭತ್ತವನ್ನು ಬೆಳೆದು ಈ ಹಬ್ಬ ಆಚರಿಸುತ್ತಾರೆ. ಇಲ್ಲವೆ ಮೊದಲೇ ಕದಿರನ್ನು ತೆಗೆದುಕೊಂಡು ಮನೆಯ ಹೊರಗಡೆ ನೀರಿನಲ್ಲಿಟ್ಟು ಹಬ್ಬದ ದಿನ ಮನೆತುಂಬಿಸುತ್ತಾರೆ. ಇನ್ನು ಕೆಲವು ಸಂಪ್ರದಾಯಸ್ಥರು ಭತ್ತದ ಗದ್ದೆಯಲ್ಲಿ ಆಚರಣೆಗಾಗಿ ಭತ್ತ ಬೆಳೆದರೂ ಅದನ್ನು ಕೊಯ್ಯಲು ಕೂಡ ಆತಂಕದಲ್ಲಿ ಹೋಗಿ ಪೂಜಿಸಿ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತ ಕೊಡವರು ವಲಸೆ ಹೋಗುತ್ತಿದ್ದಂತೆ ಬೆಂಗಳೂರು ಮತ್ತು ಇತರೆ ಭಾಗದ ಶ್ರೀಮಂತರು ತೋಟಗಳನ್ನು ಖರೀದಿಸಿ ಅಪರೂಪಕ್ಕೆ ಬಂದು ಭೇಟಿ ನೀಡುವ ವಿಲಾಸಿ ತಾಣವನ್ನಾಗಿ ಕೊಡಗನ್ನು ಮಾರ್ಪಡಿಸಿದ್ದಾರೆ. ಪ್ರಕೃತಿಯನ್ನು ಪೂಜಿಸುವ ಸಂಕೇತವಾದ ಹುತ್ತರಿ ಹಬ್ಬದ ಮುಖ್ಯ ಭತ್ತದ ಪೈರು ಎಂದೋ ಕಣ್ಮರೆಯಾಗಿದೆ. ಇಂದು ಈ ಭೂಮಿಯೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧವಿರದ ಕೇವಲ ವ್ಯವಹಾರಿಕವಾದ ಈ ಭೂಮಿಯ ಹೊಸ ಮಾಲಕನಿಗೆ ಭೂಮಿ, ತಾಯಿಯೂ ಆಗಬೇಕಿಲ್ಲ, ಪೂಜಿಸುವ ಮನೋಭಾವವಂತು ಇಲ್ಲವೇ ಇಲ್ಲ. ಈ ನಿಟ್ಟಿನಲ್ಲಿ ಹಲವಾರು ಕೊಡವ ಸಂಘಟನೆಗಳು, ಕೊಡವರ ವಲಸೆಯನ್ನು ತಡೆಹಿಡಿಯಲು ಕೊಡವರ ಮನ ಒಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದು ಎಷ್ಟರ ಮಟ್ಟಿಗೆ ಸಫಲವಾಗುವುದೋ ನೋಡಬೇಕಿದೆ.

►ಹಬ್ಬಕ್ಕಾಗಿ ಹಾತೊರೆಯುವ ಮತ್ತೊಂದು ವರ್ಗ

ಹುತ್ತರಿ ಹಬ್ಬವು ಕೊಡಗಿನ ಕೃಷಿ ಕುಟುಂಬಗಳಿಗೆ ಸಂಭ್ರಮವನ್ನು, ಸಂತಸವನ್ನು ನೀಡುವ ಹಬ್ಬವಾಗಿದೆ. ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕುಟುಂಬಗಳು ಈ ಹಬ್ಬವನ್ನು ವಿಜೃಂಭಣೆಯಿಂದ ಆಚಸುತ್ತಾ ಬಂದಿವೆ. ಕೊಡಗಿನಲ್ಲಿ ಎರಡು ವರ್ಗಗಳನ್ನು ನಾವು ಪ್ರಧಾನವಾಗಿ ಕಾಣಬಹುದು ಅವುಗಳೆಂದರೆ ಒಂದು ಕೃಷಿಯಲ್ಲಿ ನಿರತರಾಗಿರುವ ಭೂಮಾಲಕ ವರ್ಗ. ಮತ್ತೊಂದು ಕೃಷಿ ಕಾಯಕದಲ್ಲಿ ಇವರಿಗೆ ಸಹಾಯಕರಾಗಿರುವ ಕಾರ್ಮಿಕ ವರ್ಗ. ಕೊಡಗಿನಲ್ಲಿ ಹಿಂದಿನಿಂದಲೂ ಜಮ್ಮದಾಳುಗಳ ಪದ್ಧತಿಯಿದೆ. ಇಲ್ಲಿ ಜಮ್ಮದಾಳುಗಳು ಪರಂಪರಾಗತ ವಾಗಿ ಕಾರ್ಮಿಕರಾಗಿ ಬದುಕುತ್ತಾ ಬಂದವರು, ಇವರಿಗೂ ಒಡೆಯರಿಗೂ ಅವಿನಾಭಾವವಾದ ತಲೆಮಾರು ಗಳ ನಂಟಿದೆ. ಹಬ್ಬದ ದಿನ ಬೆಳಗ್ಗೆ ಈ ಕಾರ್ಮಿಕರು ಮಾಲಕರ ಮನೆಗೆ ಹೋಗಿ ಸಂಪ್ರದಾಯದಂತೆ ತೆಂಗಿನಕಾಯಿ, ಅಕ್ಕಿ, ಬಾಳೆಹಣ್ಣು, ತಂಬಿಟ್ಟು ಹುಡಿ, ಹುತ್ತರಿ ಗೆಣಸು, ಪಟಾಕಿಯನ್ನು ಪಡೆದುಕೊಂಡು ತಮ್ಮ ಮನೆಗಳಿಗೆ ಬರುತ್ತಾರೆ. ತಮ್ಮ ಮನೆಗಳಲ್ಲಿ ಪಟಾಕಿ ಹಚ್ಚಿ ಹಬ್ಬದುಡುಗೆಯನ್ನು ಸವಿಯುತ್ತಾರೆ. ರಾತ್ರಿ ಮಾಲಕರ ಮನೆಗೆ ಹೋಗಿ ಹಬ್ಬದ ವಿಶೇಷ ಔತಣವನ್ನು ಉಂಡು ಸಂಭ್ರಮಿಸುತ್ತಾರೆ.

ಇದು ಭೂಮಿಯಿರುವ, ಭೂಮಿಯೊಂದಿಗೆ ಪರೋಕ್ಷ ಸಂಬಂಧವನ್ನು ಹೊಂದಿರುವ ಒಂದು ವರ್ಗದ ನೋಟವಾದರೆ, ಶತಮಾನಗಳಿಂದ ಭೂಮಿಯಿಂದ ವಂಚಿತರಾದ, ಭೂಮಿಯ ಕನಸು ಕಾಣುತ್ತಿರುವ, ಸುಗ್ಗಿಯ ಸಂಭ್ರಮವನ್ನು ಅನುಭವಿಸಲು ಆಸೆಗಣ್ಣಿನಿಂದ ನೋಡುತ್ತಿರುವ ಇನ್ನೊಂದು ವರ್ಗವಿದೆ. ಇವರಿಗೂ, ಭೂಮಿಗೂ, ಕೃಷಿಗೂ ಯಾವುದೇ ಸಂಬಂಧವಿಲ್ಲ. ಒಂದೆಡೆ ಹುತ್ತರಿಯು ಸಡಗರದಲ್ಲಿ ಮುಳುಗಿದ್ದರೆ ಅದರ ಅರಿವೇ ಇಲ್ಲದ ಮತ್ತೊಂದು ವರ್ಗವಿದೆ. ಈ ವರ್ಗ ಭೂಮಿಯನ್ನು ಪಡೆಯಲು ಕೊಡಗಿನಲ್ಲಿ ಹೋರಾಟ, ಪ್ರತಿಭಟನೆಗಳನ್ನು ನಡೆಸುತ್ತಿವೆ. ಈ ಭೂಮಿ ನಮ್ಮ ಜನ್ಮ ಸಿದ್ಧ ಹಕ್ಕು ಇದನ್ನು ಪಡೆದೇ ಪಡೆಯುತ್ತೇವೆ ಎಂದು ಶತಾಯಗತಾಯ ಹೋರಾಡುತ್ತಿರುವವರು ಒಂದು ಕಡೆಯಾದರೆ, ಸರಕಾರದ ಅಂಧ ನೀತಿ, ನಿಯಮ, ಕಾನೂನುಗಳ ಹೆಸರಿನಲ್ಲಿ ಅಂಗೈ ಅಗಲ ಜಾಗ ಪಡೆಯಲು ಸತಾಯಿಸುವ ಹಾಗೂ ಭೂಮಿ ನಿಮ್ಮಂಥವರಿಗಲ್ಲ ಎಂಬ ಧೋರಣೆಯನ್ನು ಹೊಂದಿರುವ ಅಧಿಕಾರಿ ವರ್ಗ ಮತ್ತೊಂದು ಕಡೆ. ಶತಶತಮಾನಗಳ ಕಾಲ ಪ್ರಕೃತಿಯೊಡನೆ ಬೆರೆತು ಬದುಕಿ ಅದರಿಂದಲೇ ಪರಕೀಯತೆಯನ್ನು ಅನುಭವಿಸುತ್ತಿರುವ ಒಂದು ವರ್ಗ. ಈ ಗುಲಾಮಗಿರಿಯಿಂದ ಹೊರಬಂದು ಸ್ವತಂತ್ರವಾಗಿ ಹಾಗೂ ಸ್ವಾವಲಂಬನೆಯಿಂದ ಬದುಕಬೇಕು ಎಂಬ ಆಶಯದಿಂದ ಭೂಮಿಯನ್ನು ಪಡೆಯಲು ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ ಹೋರಾಟವನ್ನು ಕೈಗೊಂಡಿದ್ದು ಅದಕ್ಕೆ ಸಿಕ್ಕಿದ ಜಯ ಮಾತ್ರ ಮೂರು ಸೆಂಟ್‌ಜಾಗ. ಇಷ್ಟರಲ್ಲೇ ತೃಪ್ತಿಪಡಬೇಕಾದಂತಹ ದುರದೃಷ್ಟವಂತರಿವರು. ಕೆಲವರು ಇದರಿಂದಲೂ ವಂಚಿತರು. ಆದರೂ ಭೂಮಿ ಪಡೆದೇ ತೀರಬೇಕೆಂಬ ಈ ಹೋರಾಟ ನಿಂತಿಲ್ಲ. ಈ ಭೂಮಿ ಹೋರಾಟಗಳು ಇವರಿಗೆ ಭೂಮಿ ಸಿಗುವಂತೆ ಮಾಡುವುದೇ? ಕೊಡಗಿನ ಅಧಿಕಾರಿ ವರ್ಗ, ರಾಜಕಾರಣಿಗಳು, ಉಳ್ಳವರು ಇವರ ಬೇಡಿಕೆಗೆ ಓಗೊಟ್ಟು ಇವರಿಗೆ ಭೂಮಿಯನ್ನು ದೊರಕಿಸಿಕೊಡಲು ಸಹಕರಿಸುವರೇ? ಅವರು ಕೂಡ ತಮ್ಮಂತೆ ಹುತ್ತರಿ ಹಬ್ಬವನ್ನು ಸಂಭ್ರಮಿಸಲು ಅವಕಾಶ ಮಾಡಿಕೊಡುವರೇ? ಕಾದು ನೋಡಬೇಕಿದೆ.

Writer - ಎಚ್.ಎಂ. ಕಾವೇರಿ

contributor

Editor - ಎಚ್.ಎಂ. ಕಾವೇರಿ

contributor

Similar News