×
Ad

ಸುಲಭವಾಗಿ ಹಣ ಗಳಿಸಬೇಕೆಂಬ ಮನೋಭಾವ ಜಗತ್ತಿನ ದೊಡ್ಡ ಸಮಸ್ಯೆ: ಕೇಂದ್ರ ಸಚಿವ ಅನಂತಕುಮಾರ್

Update: 2017-12-02 20:48 IST

ಬೆಂಗಳೂರು, ಡಿ. 2: ಅತ್ಯಂತ ಸುಲಭವಾಗಿ ಹಣ ಗಳಿಸಬೇಕೆನ್ನುವ ಮನೋಭಾವ ಆಧುನಿಕ ಜಗತ್ತಿನ ದೊಡ್ಡ ಸಮಸ್ಯೆಯಾಗಿದೆ ಎಂದು ಕೇಂದ ಸಚಿವ ಅನಂತಕುಮಾರ್ ಹೇಳಿದ್ದಾರೆ.

ಶನಿವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯ ಆಯೋಜಿಸಿದ್ದ ಭಗವದ್ಗೀತೆ, ಆಧುನಿಕ ಸಮಸ್ಯೆಗಳಿಗೆ ಪುರಾತನ ಪರಿಹಾರ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಶ್ರಮಪಡದೆ ದಿಢೀರ್ ದೊಡ್ಡ ಮೊತ್ತದ ಹಣ ಗಳಿಸಬೇಕು ಎನ್ನುವುದು ಈಗಿನ ಸಮಸ್ಯೆ ಎಂದರು.

ಭಗವದ್ಗೀತೆಯಲ್ಲಿ ಹೇಳಿದಂತೆ ನಿಷ್ಠೆಯಿಂದ ಕೆಲಸವನ್ನು ಮಾಡುತ್ತಾ ಹೋದರೆ ಎಲ್ಲವೂ ಸಿಗುತ್ತದೆ. ಆದರೆ, ಈಗಿನ ಜಗತ್ತಿನಲ್ಲಿ ಕೆಲಸ ಮಾಡದೇ ಎಲ್ಲವೂ ಬೇಕು ಎನ್ನುವ ಮನೋಭಾವನೆ ಹೆಚ್ಚಾಗಿದೆ ಎಂದು ಅನಂತಕುಮಾರ್ ತಿಳಿಸಿದರು.

ಯಾವುದೇ ಕೆಲಸವನ್ನೂ ಮಾಡದೆ ಹಣ ಬಂದರೆ ಅದು ಒಳ್ಳೆಯ ಹಣವಲ್ಲ. ಅದು ಭಯೋತ್ಪಾದನೆ ಕೃತ್ಯದಿಂದ ಬಂದ ಹಣ ಆಗಿರಬಹುದು, ಭ್ರಷ್ಟಾಚಾರದ ಹಣವೂ ಇರಬಹುದು. ಅದು ಭವಿಷ್ಯದಲ್ಲಿ ಕಷ್ಟ ತರುವ ಹಣ. ಅದರ ಬದಲು ಕಠಿಣ ಪರಿಶ್ರಮದಿಂದ ದುಡಿದರೆ ಒಳ್ಳೆಯ ಹಣ ತಾನೇ ತಾನಾಗಿ ದೊರೆಯುತ್ತದೆ ಎಂದರು.

ಭಗವದ್ಗೀತೆ ಇಡೀ ಜಗತ್ತಿನ ಬದುಕಿನ ಗ್ರಂಥ. ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ, ಶ್ರದ್ಧೆಯಿಂದ ಮಾಡುತ್ತಾ ಹೋದರೆ ಎಲ್ಲವೂ ಸಿಗುತ್ತದೆ ಎಂದ ಅವರು, ಭಗವದ್ಗೀತೆಯ ಸಾರವನ್ನು ಅರ್ಥ ಮಾಡಿಕೊಂಡು ಬದುಕಿದರೆ ಈಗಿನ ಸಮಸ್ಯೆಗಳಿಗೆ ಪರಿಹಾರ ದೊರೆತು ಬದುಕು ಸುಲಭ ಎಂದರು.

ಸಮಾರಂಭದಲ್ಲಿ ಈಶ್ವರೀ ವಿಶ್ವವಿದ್ಯಾಲಯದ ಮುಖ್ಯಸ್ಥ ರಾಜಯೋಗಿ ಬ್ರಿಜ್ ಮೋಹನ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಕೆ.ಮೃತ್ಯುಂಜಯ, ಗೋಕಾಕ್‌ನ ಅಂಬಾ ದರ್ಶನ ಪೀಠದ ನಾರಾಯಣ ಶರಣರು, ಬ್ರಹ್ಮಕುಮಾರಿ ಅಂಬಿಕಾ, ಪದ್ಮಾ, ಸರೋಜಾ, ಬಸವರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News