×
Ad

ಡಾ.ಕಾಮಿನಿರಾವ್ ನಿವಾಸದ ಮೇಲೆ ಐಟಿ ದಾಳಿ

Update: 2017-12-02 21:45 IST

ಬೆಂಗಳೂರು, ಡಿ. 2: ಖ್ಯಾತ ವೈದ್ಯೆ ಡಾ.ಕಾಮಿನಿರಾವ್ ಅವರ ನಿವಾಸ ಹಾಗೂ ಅವರ ಮಾಲಕತ್ವದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, 1.40 ಕೋಟಿ ರೂ.ನಗದು, 3.5 ಕೆಜಿ ಚಿನ್ನಾಭರಣ, ಕೋಟ್ಯಂತರ ರೂ. ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ರಶೀದಿಗಳು, ವಿದೇಶಿ ಕರೆನ್ಸಿ ಸೇರಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ 100 ಕೋಟಿ ರೂ.ಗಳಷ್ಟು ಅಘೋಷಿತ ಆದಾಯ ಇರುವುದು ಗೊತ್ತಾಗಿತ್ತು. ಗರಿಷ್ಠ ಮೊತ್ತದ ನೋಟು ರದ್ದತಿಯ ಬಳಿಕವೂ ಅನಧಿಕೃತ ಹೆಚ್ಚಿನ ಮೊತ್ತದ ಹಣಕಾಸಿನ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿತ್ತು.

ಕಾಮಿನಿರಾವ್ ನಿವಾಸ ಹಾಗೂ ಅವರ ಒಡೆತನದ ಆಸ್ಪತ್ರೆ, ಐದು ಡಯಾಗ್ನೆಸ್ಟಿಕ್ ಸೆಂಟರ್‌ಗಳ ಮೇಲೆ ಮೂರು ದಿನಗಳ ಹಿಂದೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಡಯಾಗ್ನೆಸ್ಟಿಕ್ ಸೆಂಟರ್‌ಗಳಿಂದ ವೈದ್ಯರು ಕಮಿಷನ್ ಪಡೆಯುತ್ತಿದ್ದರು. ಎಂಆರ್‌ಐ ಸ್ಕಾನಿಂಗ್‌ಗೆ ಶೇ.35 ಹಾಗೂ ಸಾಮಾನ್ಯ ತಪಾಸಣೆಗೆ ಶೇ.20ರಷ್ಟು ಕಮಿಷನ್ ಪಡೆಯುತ್ತಿದ್ದು, ಆ ಮೊತ್ತವನ್ನು ವೃತ್ತಪರ ವೆಚ್ಚದಲ್ಲಿ ಸೇರಿಸುತ್ತಿರುವುದು ಪರಿಶೀಲನೆಯಿಂದ ಬಯಲಾಗಿದೆ.

ಲ್ಯಾಬ್‌ಗಳಲ್ಲಿನ ಕೆಲ ಸಿಬ್ಬಂದಿಗಳು ಕಮಿಷನ್ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದು, ವೈದ್ಯರಿಗೆ ಮುಚ್ಚಿದ ಲಕೋಟೆಯಲ್ಲಿ ರೋಗಿಯ ಹೆಸರು, ಶಿಫಾರಸ್ಸು ಮಾಡಿದ ವೈದ್ಯನ ಹೆಸರು, ಪರೀಕ್ಷೆಯ ವಿವರ ಸಂಗ್ರಹಿಸಿರುವ ಶುಲ್ಕ ಎಲ್ಲ ವಿವರಗಳನ್ನು ಒಳಗೊಂಡ ರಶೀದಿ ಜೊತೆಗೆ ಹಣವನ್ನು ಲಕೋಟೆಯಲ್ಲಿಟ್ಟು ನೀಡುತ್ತಿದ್ದುದು ತಿಳಿದು ಬಂದಿದೆ ಎಂದು ಐಟಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News