ಟಿಪ್ಪು ಸುಲ್ತಾನನ ಕೃಷಿ ನೀತಿ: ಸಾಮಾಜಿಕ ಅರಣ್ಯ ಮತ್ತು ಪರಿಸರ

Update: 2017-12-02 17:58 GMT

ಟಿಪ್ಪು ಸುಲ್ತಾನನಿಗೆ ಕಾಡುಗಳಿಂದ ಇರುವ ಆರ್ಥಿಕ ಪ್ರಾಮುಖ್ಯತೆಯ ಬಗ್ಗೆ ಅರಿವಿತ್ತು. ತೇಗ ಮತ್ತು ಗಂಧದ ಮರಗಳನ್ನು ವ್ಯವಸ್ಥಿತವಾಗಿ ಬೆಳೆಸಬೇಕೆಂದು ಫರ್ಮಾನುಗಳನ್ನು ಹೊರಡಿಸಿದ್ದ. ಹೀಗೆ ಬೆಳೆಸಿದ ಮರಗಳು ಸರಕಾರದ ಖರ್ಚಿನಲ್ಲಿ ಆರೈಕೆ ಪಡೆಯುತ್ತಿದ್ದವು. ಕಾಡುಗಳ ಸಂರಕ್ಷಣೆ, ಕಾಡುಗಳನ್ನು ಬೆಳೆಸುವುದರ ಬಗ್ಗೆ ಅನೇಕ ಕಾನೂನುಗಳನ್ನು ಮಾಡಿದ್ದ.

ಆದೇಶ ಸಂಖ್ಯೆ 22

ತಾಲೂಕಿನ ಕಾಡುಗಳಲ್ಲಿ ಸಿಗುವ ಧೂಪ, ಮೇಣ ಮುಂತಾದ ಉಪ ಉತ್ಪನ್ನಗಳನ್ನು ಕಾರ್ಮಿಕರು ಸಂಗ್ರಹಿಸಿ ಅದನ್ನು ಉರಗಮ್ ಪಟ್ಟಣಕ್ಕೆ ತಾಲೂಕು ಕಚೇರಿಯ ಮೂಲಕವೇ ಕಳಿಸಬೇಕು. ತಾಲೂಕಿನಲ್ಲಿ ಯಾವುದಾದರೂ ಸೂಕ್ತ ಪ್ರದೇಶವನ್ನು ಆರಿಸಿ ಅಲ್ಲಿ ಈ ಉಪಉತ್ಪನ್ನಗಳನ್ನು ಒದಗಿಸುವ 2,000 ಮರಗಳನ್ನು ನೆಡಬೇಕು.

ಆದೇಶ ಸಂಖ್ಯೆ 23

ಪಕ್ವ ಹಾಗೂ ಹಳೇ ಗಂಧದ ಮರಗಳನ್ನು ಅದರ ಬೇರು ಮತ್ತು ಟೊಂಗೆಗಳ ಸಮೇತ ಕಡಿದವುಗಳನ್ನು ತೂಕ ಮಾಡಿ ತಾಲೂಕು ಕಚೇರಿಯ ಮೂಲಕ ಉರಗಮ್ ಪಟ್ಟಣಕ್ಕೆ ಕಳಿಸಬೇಕು. ಹೆಚ್ಚಿನ ಗಂಧದ ಮರಗಳನ್ನು ಬೆಳೆಯಬೇಕು. ಪ್ರತಿಯೊಂದು ಕುಟುಂಬವು ಗಂಧದ ಮರವನ್ನು ನೆಡಬೇಕು. ನದಿ ದಂಡೆಯ ಮೇಲೆ, ಹೊಂಡ ಕೆರೆಗಳ ಬದಿಯಲ್ಲಿ ಅವುಗಳನ್ನು ಬೆಳೆಯಬೇಕು. ಈ ಮರಗಳನ್ನು ಸರಕಾರದ ಅನುಮತಿ ಇಲ್ಲದೆ ಯಾರಾದರೂ ಕತ್ತರಿಸಿದರೆ ಅಂಥವನಿಗೆ 500 ರೂ. ದಂಡ ವಿಧಿಸಲಾಗುತ್ತದೆ.

ಆದೇಶ ಸಂಖ್ಯೆ 24

ತೇಗ ಮತ್ತು ಅಕೇಷಿಯಾ ಮರಗಳು ಫಿರಂಗಿ ಪೀಠಕ್ಕೆ ಅಗತ್ಯವಿರುವುದರಿಂದ ಈ ಮರಗಳನ್ನು ಸುಲ್ತಾನನ ಆದೇಶ ಪಡೆದು ಕಡಿಯಬೇಕು. ತೇಗದ ಬೀಜಗಳು ಲಭ್ಯವಾದಾಗಲೆಲ್ಲ ಅವುಗಳನ್ನು ನದಿ, ತೊರೆ, ಹಳ್ಳ ಮತ್ತು ಬೆಟ್ಟಗಳ ಮೇಲೆ ಎಚ್ಚರಿಕೆಯಿಂದ ಬಿತ್ತಿ ಅವುಗಳ ಆರೈಕೆ ಮಾಡಿ.

Similar News