ರಾಹುಲ್ ಗಾಂಧಿಯ ಪ್ರಶ್ನೆಗೆ ಉತ್ತರಿಸುವಷ್ಟು ಸಮಯ ಮೋದಿಗಿಲ್ಲ...ಅ

Update: 2017-12-03 18:57 GMT

ಮಾನ್ಯರೆ,

ರಾಹುಲ್ ಗಾಂಧಿ ಹಿಂದಿನ ಒಂದು ವಾರದಿಂದ ಗುಜರಾತ್‌ನ ಜನರ ಜ್ವಲಂತ ಸಮಸ್ಯೆಗಳಿಗೆ ಸಂಬಂಧಪಟ್ಟ ವಿಷಯದ ಕುರಿತು ದಿನಕ್ಕೊಂದು ಪ್ರಶ್ನೆ ಮೋದಿಗೆ ಕೇಳುತ್ತಿದ್ದಾರೆ. ಆದರೆ ರಾಹುಲ್‌ರ ಪ್ರಶ್ನೆಗೆ ಉತ್ತರಿಸುವಷ್ಟು ಸಮಯ ಮೋದಿಗೆ ಇಲ್ಲ. ಕಾರಣ ಅವರು ದಿನಾಲೂ 18 ಗಂಟೆ ದೊಡ್ಡ ದೊಡ್ಡ ಐತಿಹಾಸಿಕ ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಈವರೆಗೆ ಅವರು ಗಾಂಧಿ-ನೆಹರೂ ಕುಟುಂಬದ ಬಗ್ಗೆ ಎಷ್ಟೊಂದು ದೊಡ್ಡ ಸಂಶೋಧನೆಗಳನ್ನು ಮಾಡಿದ್ದಾರೆಂದರೆ 1976ರಲ್ಲಿ ಇಂದಿರಾ ಗಾಂಧಿ ಮೊರ್ಬಿಯಲ್ಲಿ ಹೇಗೆ ಮೂಗಿಗೆ ಕರ್ಚೀಫ್ ಹಿಡಿದರು,

1952ರಲ್ಲಿ ರಾಹುಲ್ ಗಾಂಧಿಯ ಮುತ್ತಜ್ಜ ನೆಹರೂ ಏಕೆ ಸೋಮನಾಥಕ್ಕೆ ಹೋಗಲಿಲ್ಲ?, ನೆಹರೂ ಹೇಗೆ ಸಿಗರೇಟ್ ಸೇದುತ್ತಿದ್ದರು?, ರಾಹುಲ್‌ರ ಅಜ್ಜ ಫಿರೋಝ್ ಗಾಂಧಿ ಪಾರ್ಸಿ ಧರ್ಮದ ಪದ್ಧತಿಯಂತೆ ಸೊಂಟದ ಸುತ್ತ ಜನಿವಾರ ಧರಿಸುತ್ತಿದ್ದರೇ? ಅಥವಾ ವೈದಿಕ ಪದ್ಧ್ದತಿಯಂತೆ ಹೆಗಲಿನ ಸುತ್ತ ಜನಿವಾರ ಧರಿಸುತ್ತಿದ್ದರೇ?, ಪ್ರಿಯಾಂಕಾ ಮದುವೆಯಲ್ಲಿ ರಾಹುಲ್ ಯಾವ ರೀತಿ ಜನಿವಾರ ಧರಿಸಿದ್ದರು?, 1975ರ ತುರ್ತು ಪರಿಸ್ಥಿತಿಯ ಸಮಯ ಇಂದಿರಾ ಗಾಂಧಿ ಎಷ್ಟು ಸಾರಿ ಕೆಮ್ಮಿದರು, ಸೀನಿದರು, ತಲೆ ಬಾಚಿದರು, ಸೆರಗು ಸರಿಮಾಡಿಕೊಂಡರು, ಬಟ್ಟೆಗೆ ಯಾವ ವಿದೇಶಿ ಸೆಂಟ್ ಹಾಕಿಕೊಂಡಿದ್ದರು, ಕಣ್ಣಿಗೆ ಯಾವ ಕಪ್ಪು ಕನ್ನಡಕ ಹಾಕಿಕೊಂಡಿದ್ದರು ಎಂಬಿತ್ಯಾದಿ ಸಂಶೋಧನೆಗಳಲ್ಲಿ ಮೋದೀಜಿ ಭಯಂಕರ ಬ್ಯುಸಿ ಆಗಿದ್ದಾರೆ.

ಹಾಗಾಗಿ ಗುಜರಾತ್ ಜನತೆಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳಾದ ಇಪ್ಪತ್ತು ವರ್ಷಗಳಲ್ಲಿ ಹತ್ತು ಸಾವಿರ ರೈತರ ಆತ್ಮಹತ್ಯೆ, ಗುಜರಾತ್‌ನ ಈಗಿನ 60 ಲಕ್ಷ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ, ಗುಜರಾತ್‌ನ 20 ಲಕ್ಷ ಸಣ್ಣ ಉದ್ಯಮಿಗಳು ಹಾಗೂ ವ್ಯಾಪಾರಿಗಳು ನೋಟು ರದ್ದತಿಯಿಂದ ದಿವಾಳಿ ಎದ್ದಿದ್ದು, ಗುಜರಾತ್ ವಿದ್ಯುತ್ ನಿಗಮದಲ್ಲಿರುವ ಭಯಂಕರ ಭ್ರಷ್ಟಾಚಾರ, ಗ್ರಾಮೀಣ ಪ್ರದೇಶದಲ್ಲಿ ಈಗಲೂ ದಿನನಿತ್ಯ ಹತ್ತು ಗಂಟೆ ಪವರ್ ಕಟ್ ಮುಂತಾದ ತೀವ್ರ ಆರ್ಥಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ರಾಹುಲ್‌ರ ‘ದಡ್ಡ’ ಪ್ರಶ್ನೆಗಳಿಗೆ ಉತ್ತರಿಸುವಷ್ಟು ಸಮಯಾವಕಾಶ ಪ್ರಚಂಡ ಸಂಶೋಧಕ ನರೇಂದ್ರ ಮೋದಿಗೆ ಇಲ್ಲ. ನೆಹರೂ-ಗಾಂಧಿ ಕುಟುಂಬದ ಬಗ್ಗೆ ಹಾಗೂ ಬಾಲ್ಯದಲ್ಲಿಯ ತನ್ನದೇ ಕುಟುಂಬದ ಬಗ್ಗೆ ಅವರು ಇನ್ನೂ ಅನೇಕ ಸಂಶೋಧನೆ ಮಾಡುವುದು ಬಾಕಿ ಇದೆಯಂತೆ... ಅದನ್ನು ಮೋದಿ 2019 ಲೋಕಸಭಾ ಚುನಾವಣೆಯ ಒಳಗೆ ಮಾಡಿ ಮುಗಿಸಬೇಕು ತಾನೇ. 

Writer - - ಜಿ. ರವಿಕಿರಣ ರೈ, ಮಂಗಳೂರು

contributor

Editor - - ಜಿ. ರವಿಕಿರಣ ರೈ, ಮಂಗಳೂರು

contributor

Similar News