ನೀವು ಸಾಹಸಿಯಲ್ಲದಿದ್ದರೆ ಈ ರಸ್ತೆಗಳಲ್ಲಿ ವಾಹನ ಚಲಾಯಿಸಬೇಡಿ...

Update: 2017-12-04 10:35 GMT

ಭಾರತದಲ್ಲಿಯ ಕೆಲವು ಅತ್ಯಂತ ದುರ್ಗಮ ರಸ್ತೆಗಳಲ್ಲಿ ಜೀವವನ್ನು ಕೈಯಲ್ಲೇ ಹಿಡಿದು ಪ್ರಯಾಣಿಸಬೇಕು. ಈ ರಸ್ತೆಗಳಲ್ಲಿ ವಾಹನಗಳನ್ನು ನಡೆಸುವ ಚಾಲಕರ ಎದೆಗುಂಡಿಗೆ ತುಂಬ ಗಟ್ಟಿಯಾಗಿರಬೇಕು. ಒಂದೇ ಒಂದು ಕ್ಷಣ ಮೈಮರೆತರೆ ಇಲ್ಲಿ ಸಾವು ಕಟ್ಟಿಟ್ಟ ಬುತ್ತಿ. ಅಂತಹ ಕೆಲವು ರಸ್ತೆಗಳ ಕುರಿತು ಮಾಹಿತಿಯಿಲ್ಲಿದೆ.....

ರೆಝಿ ಲಾ ಪಾಸ್, ಜಮ್ಮು-ಕಾಶ್ಮೀರ

ಕಾಶ್ಮೀರದ ಸೋನಾಮಾರ್ಗ್‌ನಿಂದ ಒಂಭತ್ತು ಕಿ.ಮೀ.ದೂರದಲ್ಲಿರುವ ಅಪಾಯಕಾರಿ ಯಾಗಿ ಇಕ್ಕಟ್ಟಾಗಿರುವ ಮತ್ತು ಜಾರುವ ಈ ರಸ್ತೆಯು ಸಮುದ್ರಮಟ್ಟದಿಂದ ಸುಮಾರು 3,600 ಮೀ.ಎತ್ತರದಲ್ಲಿದೆ. ರಸ್ತೆಯಲ್ಲಿನ ಧೂಳು ಮತ್ತು ಹಿಮದಿಂದಾಗಿ ವಾಹನಗಳ ಚಕ್ರಗಳು ಜಾರದಂತೆ ಚಲಾಯಿಸುವುದು ಹೆಚ್ಚುಕಡಿಮೆ ಅಸಾಧ್ಯವೇ ಸರಿ. ಭಾರೀ ಹಿಮಪಾತ, ವೇಗವಾಗಿ ಬೀಸುವ ಗಾಳಿ ಮತ್ತು ಆಗಾಗ್ಗೆ ಸಂಭವಿಸುವ ಭೂಕುಸಿತ ಗಳಿಂದಾಗಿ ಇದು ದೇಶದ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲೊಂದಾಗಿದೆ. ಅತ್ಯಂತ ಪ್ರತಿಕೂಲ ಹವಾಮಾನದಿಂದಾಗಿ ಈ ರಸ್ತೆಯನ್ನು ಆಗಾಗ್ಗೆ ಮುಚ್ಚಲಾಗುತ್ತದೆ.

ಝುಲುಕ್ ಲೂಪ್ಸ್, ಪೂರ್ವ ಸಿಕ್ಕಿಂ

ಇದನ್ನು ಓಲ್ಡ್ ಸಿಲ್ಕ್ ರೂಟ್ ಎಂದೂ ಕರೆಯಲಾಗುತ್ತದೆ. ಝುಲುಕ್‌ಗೆ ಪ್ರಯಾಣಿಸುವುದಿದ್ದರೆ ಬೆರಗಿನಿಂದ, ಭೀತಿಯಿಂದ ಅವಡುಗಚ್ಚಿಸುವ ಈ ರಸ್ತೆಯಲ್ಲಿ ಸಾಗಲು ಅತ್ಯಂತ ಅನುಭವಿ,ನಿಪುಣ ಚಾಲಕ ಬೇಕೇ ಬೇಕು. ಇಲ್ಲಿಯ ಪ್ರಕೃತಿ ದೃಶ್ಯಗಳು ನೀವು ಪ್ರತ್ಯಕ್ಷ ಕಂಡರೂ ನಂಬಲಾಗದಷ್ಟು ರುದ್ರಮನೋಹರವಾಗಿವೆ.

ಖಾರ್ದುಂಗ್ ಲಾ ಪಾಸ್, ಲಡಾಖ್

 ವಿಶ್ವ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಸೇರಿರುವ ಖಾರ್ದುಂಗ್ ಲಾ ಪಾಸ್ ವಾಹನಗಳು ಸಂಚರಿಸಬಲ್ಲ ವಿಶ್ವದ ಅತ್ಯಂತ ಎತ್ತರದ ರಸ್ತೆ ಎಂಬ ಹೆಗ್ಗಳಿಕೆ ಪಡೆದಿದೆ. ಸಮುದ್ರ ಮಟ್ಟದಿಂದ 5602 ಮೀ.ಎತ್ತರದಲ್ಲಿರುವ ಈ ರಸ್ತೆಯು ಲಡಾಖ್‌ನ ಲೇಹ್‌ನಿಂದ ಮಧ್ಯ ಏಷ್ಯಾದ ಕಶ್ಗರ್‌ವರೆಗೂ ಚಾಚಿಕೊಂಡಿದೆ. ಅನುಭವಿ ಚಾಲಕರು ಮಾತ್ರ ಈ ರಸ್ತೆಯಲ್ಲಿ ಸಾಗಲು ಸಾಧ್ಯ. ಇಲ್ಲಿಯ ಹವಾಮಾನವು ಈ ರಸ್ತೆಯನ್ನು ವಾಹನ ಚಾಲನೆಗೆ ಅತ್ಯಂತ ಕಠಿಣವಾಗಿಸಿದೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಪ್ರತಿ ವರ್ಷ ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ಈ ರಸ್ತೆಯನ್ನು ಮುಚ್ಚಲಾಗುತ್ತದೆ.

ಕಿಷ್ತವಾರ್ ಕೈಲಾಷ್ ರಸ್ತೆ, ಕಾಶ್ಮೀರ

ಇಕ್ಕಟ್ಟಾದ, ರಭಸದ ಗಾಳಿಯಿಂದ ಕೂಡಿದ ಈ ರಸ್ತೆಯಲ್ಲಿ ಸುಮಾರು 100 ಮೈಲುಗಳವರೆಗೆ ಬದಿಯಲ್ಲಿ ಯಾವುದೇ ಸುರಕ್ಷತಾ ತಡೆಗಳಿಲ್ಲ. ಕಣ್ಣು ಹೊರಳಿಸಿದರೆ ಸಾವಿರಾರು ಅಡಿ ಆಳದ ಪ್ರಪಾತಗಳೇ ಇಲ್ಲಿ ಕಾಣುತ್ತವೆ. ರಾತ್ರಿಯಲ್ಲಿ ಬಿಡಿ... ಹಗಲಿನಲ್ಲಿಯೂ ವಾಹನ ಚಾಲನೆ ಸುಲಭವಲ್ಲ.

ಕಿನ್ನಾವುರ್ ರಸ್ತೆ, ಹಿಮಾಚಲ ಪ್ರದೇಶ

 ತರಾಂಡ ಧಂಕ್ ಹೆಸರಿನ ಎತ್ತರದ ಪ್ರದೇಶದಲ್ಲಿ ಭಾರೀ ಬಂಡೆಯೊಂದನ್ನು ಕೊರೆದು ಈ ರಸ್ತೆಯನ್ನು ನಿರ್ಮಿಸಲಾಗಿದ್ದು, ಈಗಾಗಲೇ ಹಲವಾರು ಜೀವಗಳನ್ನು ಬಲಿತೆಗೆದುಕೊಂಡಿದೆ. ಕಣ್ಣು ಮಿಟುಕಿಸುವಷ್ಟರಲ್ಲಿ ವಾಹನಗಳು ಪಕ್ಕದಲ್ಲಿಯೇ ಹರಿಯುವ ಬಸ್ಪಾ ನದಿಗೆ ಉರುಳಿ ಕೊಚ್ಚಿಕೊಂಡು ಹೋಗಬಹುದು. ಬಂಡೆಗಲ್ಲುಗಳನ್ನು ಕೊರೆದು ಮಾಡಲಾಗಿರುವ ಬ್ಲೈಂಡ್ ಟರ್ನ್‌ಗಳು ಅತ್ಯಂತ ಅಪಾಯಕಾರಿಯಾಗಿದ್ದು, ಚಲಿಸುತ್ತಿರುವ ವಾಹನಗಳು ಆಗಾಗ್ಗೆ ಪರಸ್ಪರ ಡಿಕ್ಕಿ ಹೊಡೆದುಕೊಳ್ಳುತ್ತಿರುತ್ತವೆ.

ನಾಥು ಲಾ ಪಾಸ್, ಸಿಕ್ಕಿಂ

14,000 ಅಡಿ ಎತ್ತರದಲ್ಲಿರುವ ಈ ರಸ್ತೆಯು ಭಾರತ ಮತ್ತು ಚೀನಾ ನಡುವೆ ಗಡಿ ವ್ಯಾಪಾರದ ಕೊಂಡಿಯಾಗಿದೆ. ಚಳಿಗಾಲದಲ್ಲಿ ಭಾರೀ ಭೂಕುಸಿತ ಮತ್ತು ಹಿಮಪಾತಗಳಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಆಗಾಗ್ಗೆ ಸ್ಥಗಿತಗೊಳ್ಳುತ್ತಲೇ ಇರುತ್ತದೆ. ಭಾರತ ಮತ್ತು ಚೀನಾ ನಡುವೆ ಈ ರಸ್ತೆಯಿರುವುದರಿಂದ ಮಿಲಿಟರಿ ವಾಹನಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಈ ಪಾಸ್‌ಗೆ ಭೇಟಿ ನೀಡಲು ಸೂಕ್ತ ಪರವಾನಿಗೆಯ ಅಗತ್ಯವಿದ್ದು, ಅದನ್ನು ಗ್ಯಾಂಗ್‌ಟಕ್‌ನಲ್ಲಿ ಪಡೆದುಕೊಳ್ಳಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News