×
Ad

ಶೇ.97 ಅತ್ಯಾಚಾರ ಪ್ರಕರಣಗಳಲ್ಲಿ ಪರಿಚಿತರು, ಸಂಬಂಧಿಕರೇ ಆರೋಪಿಗಳು: ಎನ್‌ಸಿಬಿ ವರದಿ ಬಹಿರಂಗ

Update: 2017-12-04 23:18 IST

  ಇಂದೋರ್,ಡಿ.4: ಬಹುತೇಕ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಬಾಲಕಿಯರು ಹಾಗೂ ಮಹಿಳೆಯರು ತಮ್ಮದೇ ಬಂಧುಗಳು ಹಾಗೂ ಪರಿಚಯಸ್ಥರಿಂದಲೇ ಲೈಂಗಿಕ ಶೋಷಣೆಗೊಳಗಾಗಿದ್ದಾರೆಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ತಿಳಿಸಿದೆ.

2016ರಲ್ಲಿ ದಾಖಲಾದ ಶೇ.94.6ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆ ಅಥವಾ ಬಾಲಕಿಯ ಸಹೋದರ, ತಂದೆ, ತಾತ,ಪುತ್ರ ಅಥವಾ ಪರಿಚಯಯಸ್ಥರೇ ಆರೋಪಿಗಳಾಗಿದ್ದಾರೆಂದು ಎನ್‌ಸಿಬಿ ವರದಿಯ ದತ್ತಾಂಶಗಳು ಬಹಿರಂಗಪಡಿಸಿವೆ.

    2016ರಲಿ ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ (ಪೊಕ್ಸೊ) ಹಾಗೂ ಸೆಕ್ಷನ್ 376 ಸೇರಿದಂತೆ ಭಾರತೀಯ ಅಪರಾಧ ದಂಡಸಂಹಿತೆಯ ಇತರ ಸೆಕ್ಷನ್‌ಗಳಡಿ ದೇಶದಲ್ಲಿ ಒಟ್ಟು 38,947 ಪ್ರಕರಣಗಳು ದಾಖಲಾಗಿವೆ. ಈ 38,947 ಪ್ರಕರಣಗಳ ಪೈಕಿ 36,859ರಲ್ಲಿ ಆರೋಪಿಗಳು ಅತ್ಯಾಚಾರ ಸಂತ್ರಸ್ತೆಯರಿಗೆ ಸಂಬಂಧಿಕರು ಎಂದು ವರದಿ ಹೇಳಿದೆ.

630 ಪ್ರಕರಣಗಳಲ್ಲಿ ಸಂತ್ರಸ್ತೆಯರು, ತಮ್ಮ ತಾತ,ತಂದೆ, ಸಹೋದರ ಹಾಗೂ ಪುತ್ರರಿಂದ ಅತ್ಯಾಚಾರಕ್ಕೊಳಗಾಗಿದ್ದರೆ, 1087 ಪ್ರಕರಣಗಳಲ್ಲಿ ಆರೋಪಿಗಳು ಪರಿಚಯಸ್ಥರು ಅಥವಾ ಬಂಧುಗಳಾಗಿದ್ದಾರೆ.

 2174 ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಯರ ಬಂಧುಗಳಾಗಿದ್ದರೆ, 10,520 ಪ್ರಕರಣಗಳಲ್ಲಿ ನೆರೆಹೊರೆಯವರು ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ. ಉಳಿದಂತೆ 600 ಪ್ರಕರಣಗಳಲ್ಲಿ ಸಂತ್ರಸ್ತೆಯ ಉದ್ಯೋಗದಾತರು ಹಾಗೂ ಸಹ ಉದ್ಯೋಗಿಗಳು ಅತ್ಯಾಚಾರ ಆರೋಪಿಗಳಾಗಿದ್ದಾರೆ.

  2016ರಲ್ಲಿ 557 ಪ್ರಕರಣಗಳಲ್ಲಿ ಆರೋಪಿಗಳು, ಸಂತ್ರಸ್ತೆಯ ಸಹಜೀವನ ಸಂಗಾತಿಗಳು (ಲಿವ್‌ಇನ್‌ಪಾರ್ಟನರ್), ಪತಿ ಅಥವಾ ಮಾಜಿ ಪತಿಯಾಗಿದ್ದಾರೆ. ಅದೇ ರೀತಿ 10,068 ಪ್ರಕರಣಗಳಲ್ಲಿ ಆರೋಪಿಯು ಮದುವೆಯ ಭರವಸೆ ನೀಡಿ, ಅತ್ಯಾಚಾರವೆಸಗಿದ್ದಾನೆಂದು ದತ್ತಾಂಶಗಳು ತಿಳಿಸಿವೆ. ಉಳಿದ 11,223 ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಯ ಪರಿಚಿತರೆಂದು ಅದು ಹೇಳಿದೆ.

ವರದಿಯ ಅಂಕಿಅಂಶಗಳ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ. ಬಾಲ್ಯದಿಂದಲೇ ಗಂಡುಮಕ್ಕಳಿಗೆ ಸ್ತ್ರೀಯರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ಶಿಕ್ಷಣ ನೀಡುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

ಅಂತರ್ಜಾಲದಲ್ಲಿ ಸುಲಭವಾಗಿ ದೊರೆಯುವ ಅಶ್ಲೀಲ ದೃಶ್ಯಗಳು, ಸಾಹಿತ್ಯಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅವರ ಮೊಬೈಲ್‌ಪೋನ್ ಹಾಗೂ ಕಂಪ್ಯೂಟರ್‌ಗಳ ಮೇಲೆ ನಿಗಾವಿರಿಸಬೇಕೆಂದು ರೇಖಾ ಶರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News