ಬಾಬಾಬುಡಾನ್‌ಗಿರಿಯನ್ನು ಭಾರತದ 2ನೆ ಅಯೋಧ್ಯೆ ಮಾಡುವ ಹುನ್ನಾರ: ತೀಸ್ತಾ ಸೆಟಲ್ವಾಡ್

Update: 2017-12-04 17:50 GMT

ಬೆಂಗಳೂರು, ಡಿ.4: ಕರ್ನಾಟಕದ ಸೌಹಾರ್ದ ಪ್ರದೇಶವಾದ ಬಾಬಾ ಬುಡಾನ್ ಗಿರಿಯಲ್ಲಿ ಗೋರಿ ಕೆಡವುದರ ಮೂಲಕ ಭಾರತದ 2ನೆ ಅಯೋಧ್ಯೆ ಮಾಡಲು ಮುಂದಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅಭಿಪ್ರಾಯಿಸಿದ್ದಾರೆ.
ಸೋಮವಾರ ನಗರದ ಸೆಂಟ್ರಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಗೌರಿ ಸ್ಮಾರಕ ಟ್ರಸ್ಟ್ ಘೋಷಣೆ ಹಾಗೂ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಗುಜರಾತ್ ಮಾದರಿ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬಿಜೆಪಿ ಮತ್ತು ಸಂಘ ಪರಿವಾರ ಮುಂದಾಗಿತ್ತು ಎಂದು ಹೇಳಿದರು.

ಗುಜರಾತ್ ಮಾದರಿ ಮುಂದಿಟ್ಟು ಚುನಾವಣೆಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಥವಾಗಿದ್ದರಿಂದ, ರಾಮಮಂದಿರ, ಬಾಬರಿ ಮಸೀದಿ ಹಾಗೂ ಬಾಬಾ ಬುಡಾನ್ ಗಿರಿ ವಿವಾದವನ್ನು ಎಳೆದುಕೊಂಡು ಬರಲಾಗಿದೆ. ಕರ್ನಾಟಕವನ್ನು ಪ್ರಯೋಗಶಾಲೆಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಕೋಮು ಗಲಭೆಗಳನ್ನು ನಡೆಸಿ ಮತಗಳನ್ನು ಕೇಂದ್ರೀಕರಿಸಲು ಮುಂದಾಗಿದ್ದಾರೆ. ಆದರೆ, ನಾವು ಗೋರಿಗಳ ಧ್ವಂಸಕ್ಕೆ ಅವಕಾಶ ನೀಡಬಾರದು, ಕೋಮುವಾದಕ್ಕೆ ವಿರುದ್ಧವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಕುರಿತು ಗಮನ ನೀಡಬೇಕಾದ ಕೇಂದ್ರ ಸರಕಾರ ಅನಗತ್ಯವಾಗಿ ರಾಮಮಂದಿರವನ್ನು ಜಪ ಮಾಡುತ್ತಾ, ಯುವಕರಲ್ಲಿ ಕೋಮುವಾದಿ ಮನೋಭಾವನೆಯನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಗೌರಿ ಲಂಕೇಶ್‌ರನ್ನು ಯಾರು ಕೊಲೆ ಮಾಡಿದ್ದಾರೆ ಹಾಗೂ ಅವರ ಹಿಂದಿರುವ ಶಕ್ತಿಗಳು ಯಾವುದು ಎಂಬುದನ್ನು ರಾಜ್ಯ ಸರಕಾರ ಸಾರ್ವಜನಿಕ ಪಡಿಸಬೇಕು ಎಂದು ಆಗ್ರಹಿಸಿದ ಅವರು, ಜಿಗ್ನೇಸ್ ಮೆವಾನಿ ಗೌರಿ ಪರವಾಗಿ ಮಾತ್ರ ಹೋರಾಟ ಮಾಡಲಿಲ್ಲ. ದಲಿತ, ದಮನಿತರ ಪರವಾಗಿ ಹೋರಾಟ ಮಾಡಿದ್ದಾರೆ. ಹೀಗಾಗಿ, ಗುಜರಾತ್‌ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಆದುದರಿಂದ ಎಲ್ಲರೂ ಅವರ ನೆರವಿಗೆ ನಿಲ್ಲಬೇಕು ಎಂದರು.

ಸಾಹಿತಿ ದೇವನೂರ ಮಹಾದೇವ ಮಾತನಾಡಿ, ದಿನನಿತ್ಯ ಹಲವಾರು ಕೊಲೆಗಳು ನಡೆಯುತ್ತಿರುತ್ತವೆ. ಆದರೆ, ಗೌರಿ ಕೊಲೆಯನ್ನು ಮಾತ್ರ ಯಾಕೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹಲವರು ಕೇಳುತ್ತಿದ್ದಾರೆ. ಆದರೆ, ಇದು ಗೌರಿ ಕೊಲೆಯಷ್ಟೇ ಅಲ್ಲ. ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆದಿರುವ ದಾಳಿ. ಈ ನಿಟ್ಟಿನಲ್ಲಿ ಗೌರಿ ಕೊಲೆ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ನಡೆಯುತ್ತಿರುವ ಚಳವಳಿಗೆ ದಾರಿಯಾಗಿದೆ ಎಂದು ಹೇಳಿದರು.

ಗೌರಿ ಸ್ಮಾರಕ ಟ್ರಸ್ಟ್ ಗೌರಿ ಕೇಂದ್ರಿತವಾಗದೆ, ಗೌರಿ-ಲಂಕೇಶ್‌ರ ವಿಚಾರಗಳ ಕೇಂದ್ರವಾಗಬೇಕು ಮತ್ತು ಅಭಿವ್ಯಕ್ತಿಯ ಕೇಂದ್ರವಾಗಬೇಕು ಎಂದ ಅವರು, ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಅನೇಕ ವೈರತ್ವವನ್ನು ಎದುರಿಸಬೇಕಾಗುತ್ತದೆ. ಅದನ್ನೆಲ್ಲಾ ಮೀರಿ ನಿಲ್ಲಬೇಕು. ಅಲ್ಲದೆ, ಲಂಕೇಶ್‌ರ ಟೀಕೆ-ಟಿಪ್ಪಣಿ ಕೃತಿ ಅಧ್ಯಯನ ವಿಷಯವಾಗಿ, ಈ ಟ್ರಸ್ಟ್ ಅಡಿಯಲ್ಲಿ ಚರ್ಚೆಗಳನ್ನು ಹುಟ್ಟುಹಾಕಬೇಕು ಎಂದು ಅವರು ತಿಳಿಸಿದರು.

ಗೌರಿ ಲಂಕೇಶ್ ಜಿಗ್ನೇಶ್ ಮತ್ತು ಕನ್ನಯ್ಯರನ್ನು ಮಕ್ಕಳು ಎಂದುಕೊಂಡಿದ್ದಳು. ಜಾತಿ, ಪ್ರದೇಶ ಬೇರೆ ಬೇರೆಯಾದರೂ, ಸ್ಥೂಲವಾಗಿ ಒಂದೇ ಸಿದ್ಧಾಂತವಾದರೂ, ಸೂಕ್ಷ್ಮವಾಗಿ ಬೇರೆ ಸಿದ್ಧಾಂತ ಪಾಲಿಸುತ್ತಿದ್ದರು. ಆದರೆ, ವೈಯಕ್ತಿಕ ಸಂಬಂಧಗಳಿಗೆ ಇವು ಯಾವುದೂ ಅಡ್ಡಿಯಾಗಲಿಲ್ಲ ಎಂದ ಅವರು, ಸಮಾನತೆಯನ್ನು ಬಯಸುವ ಎಲ್ಲರೂ ಇದೇ ರೀತಿಯ ಸಂಬಂಧಗಳನ್ನು ಕಟ್ಟಿಕೊಳ್ಳಬೇಕು. ಎಲ್ಲರೂ ಒಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಚಿಂತಕ ಎ.ಕೆ.ಸುಬ್ಬಯ್ಯ, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಮಾಜಿಕ ಹೋರಾಟಗಾರ ಸಿದ್ದಾರ್ಥ ವರದರಾಜನ್, ರೈತ ಸಂಘದ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಲೇಖಕಿ ಕೆ.ನೀಲಾ, ಕವಿತಾ ಲಂಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಂದವರೇ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ್ದಾರೆ. ಆದರೆ, ಸಂಘಪರಿವಾರ ಮತ್ತು ಬಿಜೆಪಿ ಹಂತಕರನ್ನು ರಕ್ಷಣೆ ಮಾಡುತ್ತಿದೆ. ಗೌರಿ ಲಂಕೇಶ್ ಹತ್ಯೆ ಕುರಿತು ದೇಶ-ವಿದೇಶದಲ್ಲಿಯೂ ಖಂಡನೆ ವ್ಯಕ್ತವಾಯಿತು. ಆದರೆ, ಬಿಜೆಪಿ ಮತ್ತು ಸಂಘಪರಿವಾರ ಈ ಕುರಿತು ಒಂದು ಹೇಳಿಕೆ ನೀಡಿಲ್ಲ.
-ಎ.ಕೆ.ಸುಬ್ಬಯ್ಯ, ಚಿಂತಕ

ದೇಶದಲ್ಲಿ ಅಭಿವ್ಯಕ್ತಿ ಮತ್ತು ವೈಯಕ್ತಿಕ ಸ್ವಾತಂತ್ರದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಪದ್ಮಾವತಿ ಚಿತ್ರ ನಿರ್ದೇಶಕನ ತಲೆ ಕಡಿದವರಿಗೆ ಕೋಟಿ ನೀಡುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಕಲಾವಿದರು ತಮಗೆ ಅನಿಸಿದ್ದನ್ನು ನೇರವಾಗಿ ಅಭಿವ್ಯಕ್ತ ಪಡಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರ ಮತ್ತು ದೇಶದಲ್ಲಿ ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಕೊಲೆ ಮಾಡುವವರಿಗೆ ಬೆಂಬಲ ನೀಡುತ್ತಿದ್ದಾರೆ.
-ಸಿದ್ದಾರ್ಥ ವರದರಾಜನ್, ಸಾಮಾಜಿಕ ಕಾರ್ಯಕರ್ತ

ಸಮಾಜದಲ್ಲಿ ಹಣದ ಮೇಲೆ ವ್ಯವಹಾರ ನಡೆಯುತ್ತಿದೆ. ಎಲ್ಲದಕ್ಕೂ ಹಣ ಹಣ ಎಂದು ಮುಂದೆ ಹೋಗುತ್ತಿದ್ದೇವೆ. ಚಪ್ಪಲಿ ಬಿಡುವ ಜಾಗದಲ್ಲಿ ಇರಬೇಕಾದ ಹಣವಿಂದು ಅಡುಗೆ ಮನೆ ಪ್ರವೇಶ ಮಾಡಿರುವುದು ದುರಂತ. ಗೌರಿ ಲಂಕೇಶ್ ಪತ್ರಿಕೆ ಆರಂಭವಾದ ನಂತರ ಕನಿಷ್ಟ ಐದು ಸಾವಿರ ಜನರು ವಾರ್ಷಿಕ ಚಂದಾದಾರರಾಗಿ ನೋಂದಣಿ ಮಾಡಿಕೊಳ್ಳಬೇಕು.
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News