ಮುಂಬೈಗೆ ಕಾಲಿಟ್ಟ ಒಖಿ: ಶಾಲೆಗಳಿಗೆ ರಜೆ ಘೋಷಣೆ

Update: 2017-12-04 17:52 GMT

ಮುಂಬೈ, ಡಿ.4: ದಕ್ಷಿಣ ರಾಜ್ಯಗಳಲ್ಲಿ ಅವಾಂತರ ಸೃಷ್ಟಿಸಿದ್ದ ಒಖಿ ಚಂಡಮಾರುತ ಸದ್ಯ ಮುಂಬೈಯತ್ತ ಪಯಾಣ ಬೆಳೆಸಿದ್ದು ಸೋಮವಾರ ರಾತ್ರಿಯಿಂದ ದೇಶದ ವಾಣಿಜ್ಯ ರಾಜಧಾನಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಂಬೈ ವೀಕ್ಷಣಾಲಯ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಸ್ವೀಕರಿಸಿರುವ ಮಹಾರಾಷ್ಟ್ರ ಸರಕಾರ ಮಂಗಳವಾರದಂದು ಮುಂಬೈ ಹಾಗೂ ಸುತ್ತಮುತ್ತಲ ಪ್ರದೇಶಗಳಾದ ಸಿಂಧುದುರ್ಗ್, ರತ್ನಗಿರಿ, ಥಾಣೆ, ರಾಯ್‌ಘಡ್ ಮತ್ತು ಪಾಲ್ಗಡ್ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಚಂಡಮಾರುತದ ಪರಿಣಾಮವಾಗಿ ಸಮುದ್ರದಲ್ಲಿ ರಕ್ಕಸ ಅಲೆಗಳು ಏಳುವ ಸಾಧ್ಯತೆಗಳಿರುವ ಕಾರಣ ಜನರು ಸಮುದ್ರ ಕಿನಾರೆಗೆ ತೆರಳದಂತೆ ಬೃಹನ್ಮುಂಬೈ ನಗರಪಾಲಿಕೆಯ ವಿಪತ್ತು ನಿರ್ವಹಣಾ ವಿಭಾಗ ಎಚ್ಚರಿಸಿದೆ. ತೀರ ಪ್ರದೇಶಗಳಲ್ಲಿ ಗಂಟೆಗೆ 50-70 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಸದ್ಯ ಒಖಿ ಚಂಡಮಾರುತವು ಮುಂಬೈಯಿಂದ 670 ಕಿ.ಮೀ ನೈಋತ್ಯದಲ್ಲಿದ್ದು ಈಶಾನ್ಯ ದಿಕ್ಕಿಗೆ ಚಲಿಸುತ್ತಿದೆ. ಇದರಿಂದ ಮಂಗಳವಾರ ರಾತ್ರಿ ಸೂರತ್ ಸುತ್ತಮುತ್ತಲ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು ಮುಂಬೈಯಲ್ಲಿ ತೀವ್ರ ಗಾಳಿಮಳೆ ಉಂಟಾಗಬಹುದು. ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯಬಾರದು ಎಂದು ಐಎಂಡಿ ಮುಂಬೈಯ ವಿಜ್ಞಾನಿ ಅಜಯ್ ಕುಮಾರ್ ತಿಳಿಸಿದ್ದಾರೆ. ಪ್ರಸ್ತುತ ಹವಾಮಾನ ವೈಪರಿತ್ಯದಿಂದ ಕಳೆದ ವಾರ 18 ಡಿಗ್ರಿಯಿದ್ದ ತಾಪಮಾನ ಈ ವಾರ 23-25 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಎಂದು ಅಜಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News