ಬೆಂಗಳೂರು : ರೌಡಿಗೆ ಗುಂಡೇಟು

Update: 2017-12-04 18:27 GMT

ಬೆಂಗಳೂರು, ಡಿ.4: ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ಪೊಲೀಸರು ಗುಂಡು ಹಾರಿಸಿ ರೌಡಿಶೀಟರ್ ಅಶ್ವತ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಬೆಳಗ್ಗೆ ಮರಿಯಪ್ಪನಪಾಳ್ಯದ ವೃತ್ತದಲ್ಲಿ ಅಣ್ಣಿಯಪ್ಪ ಎಂಬವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ರೌಡಿಶೀಟರ್ ಅಶ್ವತ್ಥ್  ಬೆದರಿಸಿ ಮೊಬೈಲ್, ನಗದು ಕಸಿದು ಪರಾರಿಯಾಗುತ್ತಿದ್ದಾನೆ ಎನ್ನಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ರಾಜಗೋಪಾಲನಗರ ಹಾಗೂ ಆರ್‌ಎಂಸಿ ಯಾರ್ಡ್ ಪೊಲೀಸರು ನಾಕಾಬಂದಿ ಮಾಡಿ ಕಾರ್ಯಾಚರಣೆಗೆ ಮುಂದಾದರು. ಆರೋಪಿ ಅಶ್ವತ್ ಇಲ್ಲಿನ ಖೋಡೆ ಕನ್ವೆನ್‌ಷನ್ ಹಾಲ್ ಬಳಿಯ ಕಿರಿದಾದ ರಸ್ತೆಯಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಆರ್‌ಎಂಸಿ ಯಾರ್ಡ್ ಎಸ್ಸೈಗಳಾದ ಮುಹಮ್ಮದ್ ಮುಕ್ರಮ್, ರಘು ಪ್ರಸಾದ್, ಪೇದೆ ಆಕಾಶ್ ಸೇರಿ ಐದು ಮಂದಿಯ ತಂಡ ಕಾರ್ಯಾಚರಣೆ ಕೈಗೊಂಡಿದೆ.

ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಅಶ್ವತ್ಥ್ ಮಾರಕಾಸ್ತ್ರಗಳಿಂದ ಪೇದೆ ಆಕಾಶ್ ಅವರ ಕೈಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಎಸ್ಸೈ ಮುಹಮ್ಮದ್ ಮುಕ್ರಮ್ ಅವರು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಕೇಳದೆ ಓಡಿಹೋಗುತ್ತಿದ್ದ ಅಶ್ವತ್ಥ್‌ನನ್ನು ಹಿಡಿಯಲು ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ಅಶ್ವತ್ಥ್‌ನನ್ನು ಬಂಧಿಸಿ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಗಾಯಗೊಂಡ ಪೇದೆ ಆಕಾಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಸಂದ್ರದ ನಿವಾಸಿಯಾಗಿರುವ ದರೋಡೆಕೋರ ಅಶ್ವತ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಜಗೋಪಾಲನಗರ ಠಾಣಾ ರೌಡಿಪಟ್ಟಿಯಲ್ಲಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News