ಆಧಾರ್ ಕಾರ್ಡ್: ಅಂಚೆಯ ಮೂಲಕ ವಿಳಾಸ ಬದಲಾವಣೆ ಮಾಡುವುದು ಹೇಗೆ ?

Update: 2017-12-06 10:24 GMT

  ಹಲವಾರು ಅಗತ್ಯ ಕಾರ್ಯಗಳಿಗಾಗಿ ಆಧಾರ್ ಉಲ್ಲೇಖ ಅಥವಾ ಜೋಡಣೆ ಈಗ ಕಡ್ಡಾಯವಾಗಿದೆ. ಬ್ಯಾಂಕ್ ಖಾತೆಗಳು, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ, ಮೊಬೈಲ್ ಫೋನ ಬಳಕೆ, ಪಡಿತರ ವಿತರಣೆ ಇತ್ಯಾದಿಗಳು ಇವುಗಳಲ್ಲಿ ಸೇರಿವೆ. ಆಧಾರ್ ಕಡ್ಡಾಯದ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಲು ಸರಕಾರವು ಉದ್ದೇಶಿಸಿದೆ. ಹೀಗಾಗಿ ಪ್ರತಿಯೊಬ್ಬರೂ ಆಧಾರ ಹೊಂದಿರುವದು ಅಗತ್ಯವಾಗಿದೆ. ಆಧಾರ್ ಹೊಂದಿರುವವರಲ್ಲಿ ಹಲವರು ಉದ್ಯೋಗ ನಿಮಿತ್ತ ಅಥವಾ ಅನ್ಯಕಾರಣಗಳಿಂದಾಗಿ ತಮ್ಮ ವಾಸ್ತವ್ಯವನ್ನು ಬದಲಿಸುತ್ತಿರುತ್ತಾರೆ. ಈಗ ಹೆಚ್ಚಿನ ಕಡೆಗಳಲಿ ವಿಳಾಸದ ಪುರಾವೆಯಾಗಿ ಆಧಾರ್ ಅನ್ನೇ ಕೇಳುತ್ತಿರುವುದರಿಂದ ವಾಸ್ತವ್ಯ ಬದಲಿಸಿದಾಗ ಆಧಾರ್ ಕಾರ್ಡ್‌ನಲ್ಲಿಯೂ ತಿದ್ದುಪಡಿ ಮಾಡುವುದು ಅಗತ್ಯವಾಗಿದೆ. ಆಧಾರ್ ಕೇಂದ್ರಗಳಿಗೆ ತೆರಳಿ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು. ಜೊತೆಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಇಂತಹ ಬದಲಾವಣೆಗಳಿಗಾಗಿ ಕೋರಿಕೆಗಳನ್ನು ಸಲ್ಲಿಸಲು ಅಂಚೆ ಸೇವೆಯ ಸೌಲಭ್ಯವನ್ನೂ ಒದಗಿಸಿದೆ.

ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿಗಳನ್ನು ಅಥವಾ ವಿಳಾಸದ ಅಪಡೇಟ್‌ನ್ನು ಬಯಸುವರು ಯುಐಡಿಎಐನ ಅಧಿಕೃತ ಜಾಲತಾಣದಿಂದ ನಿಗದಿತ ಅರ್ಜಿ ನಮೂನೆಯ ಪ್ರಿಂಟ್‌ಔಟ್ ತೆಗೆದುಕೊಂಡು, ತಿದ್ದುಪಡಿ ಬಯಸಿರುವ ಕ್ಷೇತ್ರ ಸೇರಿದಂತೆ ಎಲ್ಲ ಕಾಲಮ್‌ಗಳನ್ನು ದಪ್ಪಕ್ಷರಗಳಲ್ಲಿ ಭರ್ತಿ ಮಾಡಿ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

ಯುಐಡಿಎಐಯ ಈ ಸೌಲಭ್ಯವನ್ನು ಬಳಸಲು ಆತ/ಆಕೆ ಇತರ ವಿವರಗಳೊಂದಿಗೆ ತನ್ನ ಮೊಬೈಲ್ ಫೋನ್ ಸಂಖ್ಯೆಯನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಕಾಣಿಸುವುದು ಕಡ್ಡಾಯವಾಗಿದೆ.

ನಿಗದಿತ ಅರ್ಜಿ ನಮೂನೆಯಲ್ಲಿ ಎಲ್ಲ ಅಗತ್ಯ ವಿವರಗಳನ್ನು ಸರಿಯಾಗಿ ತುಂಬಿದ ಬಳಿಕ ಅದರ ಅಡಿಭಾಗದಲ್ಲಿರುವ ಘೋಷಣೆಗೆ ಸಹಿ ಮಾಡಬೇಕಾಗುತ್ತದೆ. ಬಳಿಕ ಈ ಅರ್ಜಿಯನ್ನು ವಿಳಾಸ ಬದಲಾವಣೆಗಾಗಿ ಯುಐಡಿಎಐ, ಪೋಸ್ಟ್ ಬಾಕ್ಸ್ ನಂ.99, ಬಂಜಾರಾ ಹಿಲ್ಸ್, ಹೈದರಾಬಾದ್-500034 ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.

ಪಾಸ್‌ಪೋರ್ಟ್, ಬ್ಯಾಂಕ್ ಸ್ಟೇಟ್‌ಮೆಂಟ್/ಪಾಸ್‌ಬುಕ್, ಅಂಚೆ ಕಚೇರಿ ಖಾತೆ ಸ್ಟೇಟ್‌ಮೆಂಟ್/ಪಾಸ್‌ಬುಕ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ವಾಹನ ಚಾಲನೆ ಪರವಾನಿಗೆ, ವಿದ್ಯುತ್, ನೀರಿನ ಮತ್ತು ಸ್ಥಿರ ದೂರವಾಣಿ ಬಿಲ್ ಇತ್ಯಾದಿ ದಾಖಲೆಗಳು ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆಗೆ ಅಗತ್ಯವಾಗಿವೆ. ವಿದ್ಯುತ್, ನೀರಿನ ಮತ್ತು ಸ್ಥಿರ ದೂರವಾಣಿ ಬಿಲ್‌ಗಳು ಮೂರು ತಿಂಗಳುಗಳಿಗಿಂತ ಹಳೆಯದಾಗಿರಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News