×
Ad

ಸಿಲಿಕಾನ್‌ಸಿಟಿಯಲ್ಲಿ ನಿರ್ಮಾಣವಾಗಿರುವ ಮೇಲ್ಸೇತುವೆಗಳ ವಿವರ ನೀಡಲು ಹೈಕೋರ್ಟ್ ಆದೇಶ

Update: 2017-12-06 21:33 IST

ಬೆಂಗಳೂರು, ಡಿ.6: ಬೆಂಗಳೂರು ನಗರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಮೇಲ್ಸೇತುವೆಗಳ ಎತ್ತರ ಹಾಗೂ ಅಂಕಿ ಅಂಶಗಳ ವಿವರಗಳನ್ನು ನೀಡಲು ಹೈಕೋರ್ಟ್ ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಲು ಕೋರಿ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠದಲ್ಲಿ ಬುಧವಾರ ನಡೆಯಿತು.

ಬಿಬಿಎಂಪಿ ಪರ ವಾದಿಸಿದ ಹಿರಿಯ ವಕೀಲ ಡಿ.ಎನ್.ನಂಜುಂಡರೆಡ್ಡಿ ಅವರು, ಶಿವಾನಂದ ಸರ್ಕಲ್ ಬಳಿ ಮೇಲ್ಸೇತುವೆಯನ್ನು ನಿರ್ಮಿಸಿದರೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಈಗಾಗಲೇ ಇಂಜಿನಿಯರ್ಸ್‌ ತಜ್ಞರ ಸಮಿತಿಯು ವರದಿ ನೀಡಿದೆ. ಈಗ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಮೇಲೆ ಭಾರೀ ವಾಹನ ಓಡಾಟಕ್ಕೆ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಹೆಬ್ಬಾಳ ಮೇಲ್ಸೇತುವೆ ಸೇರಿ ಇನ್ನಿತರ ಮೇಲ್ಸೇತುವೆಗಳ ಎತ್ತರ 5.5 ಮತ್ತು 6 ಮೀಟರ್ ಆಗಿದ್ದರೂ ಆ ರಸ್ತೆಗಳೆಲ್ಲವೂ ರಾಷ್ಟ್ರೀಯ ಹೆದ್ದಾರಿಗಳ ವ್ಯಾಪ್ತಿಗೆ ಬರುತ್ತವೆ ಎಂದು ಪೀಠಕ್ಕೆ ತಿಳಿಸಿದರು.

  ಅರ್ಜಿದಾರರ ಪರ ವಾದಿಸಿದ ವಕೀಲ ಅಶೋಕ್ ಬಿ. ಪಾಟೀಲ್ ಅವರು, ಹೆಬ್ಬಾಳ ಮೇಲ್ಸೇತುವೆ ಸೇರಿ ಮತ್ತಿತರ ಮೇಲ್ಸೇತುವೆಗಳನ್ನು ಭಾರತೀಯ ರಸ್ತೆ ಕಾಂಗ್ರೆಸ್(ಐಆರ್‌ಸಿ) ಮಾರ್ಗಸೂಚಿ ಅನುಸಾರವಾಗಿ ನಿರ್ಮಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

  ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಮೇಲ್ಸೇತುವೆಗಳ ವಿವರಗಳನ್ನು ನೀಡಲು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News