×
Ad

ಆದಾಯ ತೆರಿಗೆ ಇಲಾಖೆ ವಶಕ್ಕೆ ಒಪ್ಪಿಸಲು ಹೈಕೋರ್ಟ್ ನಿರ್ದೇಶನ

Update: 2017-12-06 21:36 IST

ಬೆಂಗಳೂರು, ಡಿ.6: ವಿಧಾನಸೌಧ ಆವರಣದಲ್ಲಿ ತಪಾಸಣೆ ವೇಳೆ ವಕೀಲ ಎಚ್.ಎಂ.ಸಿದ್ಧಾರ್ಥ ಕಾರಿನಲ್ಲಿ ದೊರೆತಿದ್ದ 1.97 ಕೋಟಿ ರೂ.ಗಳನ್ನು ಆದಾಯ ತೆರಿಗೆ ಇಲಾಖೆ (ಐಟಿ) ವಶಕ್ಕೆ ಒಪ್ಪಿಸುವಂತೆ ವಿಧಾನಸೌಧ ಠಾಣಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ವಕೀಲ ಸಿದ್ಧಾರ್ಥ ಕಾರಿನಲ್ಲಿ ಸಿಕ್ಕಿರುವುದು ದೊಡ್ಡ ಮೊತ್ತದ ಹಣ. ಆ ಹಣಕ್ಕೆ ದಾಖಲೆಗಳಿಲ್ಲ. ಹೀಗಾಗಿ, ಅದು ಎಲ್ಲಿಂದ ಬಂತು, ಯಾರಿಗೆ ಸೇರಿದೆ, ಅವರು ಆದಾಯ ತೆರಿಗೆ ಪಾವತಿ ಮಾಡಿದ್ದಾರೆಯೇ ಅಥವಾ ಇಲ್ಲವೇ, ತೆರಿಗೆ ವಂಚಿಸಿದ ಹಣ ಇದಾಗಿದೆಯೇ ಎಂಬುದರ ಕುರಿತು ಪರಿಶೀಲಿಸಬೇಕಿದೆ. ಹೀಗಾಗಿ ಹಣವನ್ನು ನಮಗೆ ನೀಡಬೇಕು. ಹಣದ ಮೂಲದ ಬಗ್ಗೆ ತನಿಖೆ ನಾವು ನಡೆಸುತ್ತೇವೆ ಎಂದು ಕೋರಿ ಐಟಿ (ತನಿಖಾ ವಿಭಾಗ) ಇಲಾಖೆಯ ಉಪ ನಿರ್ದೇಶಕ ಎಸ್.ಜನಾರ್ದನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಬುಧವಾರ ಅರ್ಜಿ ವಿಚಾರಣೆ ವೇಳೆ ಸಿದ್ಧಾರ್ಥ ಪರ ವಕೀಲರು ಸಹ ಹಣವನ್ನು ಐಟಿ ಇಲಾಖೆಯ ವಶಕ್ಕೆ ನೀಡಲು ಒಪ್ಪಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಸಿದ್ಧಾರ್ಥ ಕಾರಿನಲ್ಲಿ ದೊರೆತಿರುವ 1.97 ಕೋಟಿ ರೂ.ಗಳನ್ನು ಐಟಿ ಇಲಾಖೆ ವಶಕ್ಕೆ ಒಪ್ಪಿಸಬೇಕು ಎಂದು ವಿಧಾನಸೌಧ ಠಾಣಾ ಪೊಲೀಸರಿಗೆ ನಿರ್ದೇಶಿಸಿತು.

ಒಂದೊಮ್ಮೆ ಹಣ ಪತ್ತೆಯಾಗಿರುವ ವಿಚಾರವಾಗಿ ಸಿದ್ಧಾರ್ಥ ವಿರುದ್ಧ ದಾಖಲಿಸಿರುವ ಆರೋಪಗಳನ್ನು ಸಾಬೀತಪಡಿಸುವಲ್ಲಿ ವಿಧಾನಸೌಧ ಠಾಣಾ ಪೊಲೀಸರು ಸಫಲವಾದರೆ, ಐಟಿ ಇಲಾಖೆಯು ಈ 1.97 ಕೋಟಿ ರು.ವನ್ನು ಪೊಲೀಸರಿಗೆ ಬಡ್ಡಿ ಸಮೇತ ನೀಡಬೇಕು. ಈ ಕುರಿತು ಪೊಲೀಸರು ಹಾಗೂ ಐಟಿ ಇಲಾಖೆ ಒಪ್ಪಂದ (ಇಂಡೆಮೆನಿಟಿ ಬಾಂಡ್) ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಇದೇ ವೇಳೆ ತಿಳಿಸಿದೆ.

ಪ್ರಕರಣವೇನು: 2016ರ ಅ.21ರಂದು ಸಿದ್ಧಾರ್ಥ ಅವರ ವೋಕ್ಸ್ ವ್ಯಾಗನ್ ಕಾರು ವಿಧಾನಸೌಧದ ಪಶ್ಚಿಮದ್ವಾರದ ಮೂಲಕ ಆಗಮಿಸಿದಾಗ ಸ್ಥಳದಲ್ಲಿದ್ದ ಭದ್ರತಾ ಪೊಲೀಸರು ತಪಾಸಣೆಗೊಳಪಡಿಸಿದ್ದರು. ಕಾರಿನ ಡಿಕ್ಕಿಯಲ್ಲಿ ಸುಮಾರು 1.97 ಕೋಟಿ ನಗದು ಪತ್ತೆಯಾಗಿತ್ತು. ವಿಧಾನಸೌಧ ಠಾಣಾ ಪೊಲೀಸರು ಕಾರು ಹಾಗೂ ಹಣ ಜಪ್ತಿ ಮಾಡಿ ತನಿಖೆ ಕೈಗೊಂಡಿದ್ದರು. ಹಣದ ಮೂಲ ಪತ್ತೆ ಮಾಡುವ ಉದ್ದೇಶದಿಂದ ಸಿದ್ದಾರ್ಥ್ ಅಗತ್ಯ ದಾಖಲೆ ನೀಡಿದರೂ, ಹಣ ಹಿಂದಿರುಗಿಸದಂತೆ ಐಟಿ ಇಲಾಖೆ, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅದನ್ನು ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದ್ದರಿಂದ ಐಟಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News