ಮಂಗಳೂರು ಕಾಂಗ್ರೆಸ್ ಮುಖಂಡರ ಕಾರ್ಯವೈಖರಿಗೆ ವೇಣುಗೋಪಾಲ್ ಮೆಚ್ಚುಗೆ: ರಮಾನಾಥ ರೈ

Update: 2017-12-06 16:11 GMT

ಬೆಂಗಳೂರು, ಡಿ.6: ಮಂಗಳೂರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಕಾರ್ಯವೈಖರಿ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವುದು ಬಿಜೆಪಿಯವರ ಉದ್ದೇಶ. ಕೋಮುಗಲಭೆ ಸೃಷ್ಟಿ ಮಾಡುವ ಮೂಲಕ ಜನರ ಮತ ಪಡೆಯುವ ಬಿಜೆಪಿಯವರ ತಂತ್ರ ಈ ಬಾರಿ ಕೆಲಸ ಮಾಡುವುದಿಲ್ಲ ಎಂದು ರಮಾನಾಥ ರೈ ಹೇಳಿದರು.

ಡಿ.12ಕ್ಕೆ ಮಂಗಳೂರಿನಲ್ಲಿ ಸಾಮರಸ್ಯ ನಡಿಗೆ ಹಮ್ಮಿಕೊಂಡಿದ್ದೇವೆ. ಇದರಲ್ಲಿ ಹತ್ಯೆ ಪ್ರಕರಣಗಳಲ್ಲಿ ಶಾಮೀಲಾಗಿರುವ ಹಿಂದೂಪರ ಸಂಘಟನೆಗಳು ಹಾಗೂ ಪಿಎಫ್‌ಐ ಸಂಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ: ಸರಕಾರ ನನಗೆ ಕಾರು ನೀಡಿದೆ. ಅದಕ್ಕೆ ಒಬ್ಬ ಚಾಲಕನನ್ನು ನೀಡಿದೆ. ಅವರನ್ನು ಬಿಟ್ಟು ವಾಹನ ಚಲಾಯಿಸಿದ್ದಲ್ಲದೆ, ಭದ್ರತೆಗಾಗಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗೂ ತಳ್ಳಿಕೊಂಡು ಮುನ್ನುಗ್ಗುವುದು ತಪ್ಪಲ್ಲವೇ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ವಿರುದ್ಧ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News