ಕಂಠೀರವ ಕ್ರೀಡಾಂಗಣದಲ್ಲಿನ ಬ್ಯಾರಿಕೇಡ್ ತೆರವುಗೊಳಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಡಿ. 6: ನಗರದ ಕಂಠೀರವ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟ್ರಾಕ್ ಸುತ್ತ ಅಳವಡಿಸಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ವೌಖಿಕ ನಿರ್ದೇಶನ ನೀಡಿದೆ.
ಸಿಂಥೆಟಿಕ್ ಟ್ರಾಕ್‌ಗೆ ಅಥ್ಲೀಟ್‌ಗಳ ಪ್ರವೇಶ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಅಶ್ವಿನಿ ನಾಚಪ್ಪ ಸೇರಿ 17 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ನ್ಯಾಯಪೀಠ, ಬುಧವಾರ ಈ ವೌಖಿಕ ನಿರ್ದೇಶನ ನೀಡಿತು. ಈ ವೇಳೆ, ಪ್ರತಿವಾದಿಗಳಾದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜೆಎಸ್‌ಡಬ್ಲೂ ಬೆಂಗಳೂರು ುಟ್‌ಬಾಲ್ ಕ್ಲಬ್ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು.
ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ವಿವಿಧ ಕ್ರೀಡೆಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದರೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅಥ್ಲೀಟ್‌ಗಳ ಪ್ರವೇಶ ನಿರ್ಬಂಧಿಸಿರುವುದರಿಂದ ಅವರ ನಿತ್ಯದ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ನಿರ್ದೇಶಿಸಬೇಕೆಂದು ಕೋರಿದರು.
ಇದಕ್ಕೆ ಸರಕಾರದ ಪರ ವಕೀಲರು, ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.
ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ನಮ್ಮ ಗಮನಕ್ಕೆ ತನ್ನಿ. ಆಗ ನ್ಯಾಯಾಲಯವೇ ಈ ಕುರಿತು ಆದೇಶ ಹೊರಡಿಸಲಿದೆ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿತು.