ಬೆಂಗಳೂರು : ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ವಿರೋಧ
ಬೆಂಗಳೂರು, ಡಿ.7: ಟೈಮ್ಸ್ ಕ್ರಿಯೇಷನ್ ಸಂಸ್ಥೆಯು ಡಿ.31ರ ರಾತ್ರಿ ಹಮ್ಮಿಕೊಂಡಿರುವ ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ನಟಿ ಸನ್ನಿ ಲಿಯೋನ್ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದಕ್ಕೆ ಕನ್ನಡ ರಕ್ಷಣಾ ವೇದಿಕೆ ಯುವಸೇನೆ ವಿರೋಧ ವ್ಯಕ್ತಪಡಿಸಿದೆ.
ಗುರುವಾರ ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಕನ್ನಡ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು, ಸನ್ನಿ ಲಿಯೋನ್ ಪ್ರತಿಕೃತಿ ದಹಿಸಿ ಟೈಮ್ಸ್ ಕ್ರಿಯೇಷನ್ ಸಂಸ್ಥೆಯು ಕಾರ್ಯಕ್ರಮ ಕೈಬಿಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಹರೀಶ್, ಟೈಮ್ಸ್ ಕ್ರಿಯೇಷನ್ ಎಂಬ ಜಾಹೀರಾತು ಸಂಸ್ಥೆಯು ಹೊಸ ವರ್ಷಾರಂಭಕ್ಕೆ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನ್‌ಳನ್ನು ಬರಮಾಡಿಕೊಳ್ಳಲು ಉತ್ಸುಕವಾಗಿದೆ. ಬೆಂಗಳೂರು ನಗರದಲ್ಲಿ ವಿವಿಧ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆಲೆಸಿರುವ ಉತ್ತರ ಭಾರತೀಯರು ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೋಜು, ಮಸ್ತಿ, ಮದ್ಯಪಾನ, ಕುಣಿತಗಳ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಪಾಶ್ಚಾತ್ಯ ಸಂಸ್ಕೃತಿಯಾಗಿದೆ. ಇಂತಹ ಕಾರ್ಯಕ್ರಮಗಳು ರಾಜ್ಯಕ್ಕೆ ಮಾರಕವಾಗಿದೆ. ಪ್ರತಿ ಆಚರಣೆಯಲ್ಲಿಯೂ ಪಾಶ್ಚಾತ್ಯರನ್ನು ಅನುಸರಿಸುತ್ತಾ ಹೋದಲ್ಲಿ ದೇಶದ ಯುವ ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.