ರುಪೇ ಕಾರ್ಡಿಗೂ ವಿಸಾ ಅಥವಾ ಮಾಸ್ಟರ್ ಕಾರ್ಡಿಗೂ ಇರುವ ವ್ಯತ್ಯಾಸ ಗೊತ್ತೇ....?

Update: 2017-12-08 14:27 GMT

ವಿಸಾ ಅಥವಾ ಮಾಸ್ಟರ್ ಕಾರ್ಡ್ ಬಗ್ಗೆ ಮಾತ್ರ ಗೊತ್ತಿದ್ದ ನಾವೂ ಈಗ ರುಪೇ ಕಾರ್ಡ್ ಬಗ್ಗೆ ಕೇಳುತ್ತಿದ್ದೇವೆ. ಆದರೆ ರುಪೇ ಮತ್ತು ವಿಸಾ ಅಥವಾ ಮಾಸ್ಟರ್ ಕಾರ್ಡ್‌ಗಳ  ನಡುವಿನ ವ್ಯತ್ಯಾಸ ಹೆಚ್ಚಿನವರಿಗೆ ಗೊತ್ತಿಲ್ಲ.

ನೀವು ಈಗಾಗಲೇ ವಿಸಾ ಅಥವಾ ಮಾಸ್ಟರ್ ಕಾರ್ಡ್ ಎಂಬ ಒಕ್ಕಣೆಯಿರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರಬಹುದು. ಇವೆರಡೂ ಕಾರ್ಡ್‌ಗಳು ತಮ್ಮದೇ ಸ್ವಂತ ವ್ಯವಸ್ಥೆಗಳು, ನಿಯಮಗಳು, ಪಾವತಿ ವಿಧಾನಗಳು ಮತ್ತು ಲಾಭಗಳನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ ನೆಟ್‌ವರ್ಕ್‌ಗಳಾಗಿವೆ.

 ವಿಸಾ ಮತ್ತು ಮಾಸ್ಟರ್ ಕಾರ್ಡ್ ಇವೆರಡೂ ಜಾಗತಿಕ ಮಾನ್ಯತೆ ಹೊಂದಿರುವ ಅಮೆರಿಕನ್ ಕಂಪನಿಗಳಾಗಿದ್ದು, ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಾರ್ಡ್ ನೆಟ್‌ವರ್ಕ್‌ಗಳಾಗಿವೆ. ಅಮೆರಿಕನ್ ಎಕ್ಸ್‌ಪ್ರೆಸ್, ಅಮೆಕ್ಸ್, ಸಿಟಿಯಂತಹ ಇತರ ಕೆಲವು ಕಾರ್ಡ್ ನೆಟ್‌ವರ್ಕ್‌ಗಳೂ ಇವೆ. ಆದರೆ ಇವೆಲ್ಲವೂ ಜಾಗತಿಕ ಕಾರ್ಡ್ ಕಂಪನಿ ಗಳಾಗಿವೆ.

ಈ ಎಲ್ಲ ಕಂಪನಿಗಳು ನೇರವಾಗಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುವುದಿಲ್ಲ. ಆದರೆ ವಿಶ್ವಾದ್ಯಂತ ವಿವಿಧ ಬ್ಯಾಂಕುಗಳು ಪೇಮೆಂಟ್ ನೆಟ್‌ವರ್ಕ್ ಆಪರೇಟರ್‌ಗಳ ಸಹಯೋಗದೊಂದಿಗೆ ತಮ್ಮ ಕಾರ್ಡ್‌ಗಳನ್ನು ನೀಡುತ್ತವೆ. ಇವು ವಿಸಾ, ಮಾಸ್ಟರ್‌ಕಾರ್ಡ್ ಅಥವಾ ಇತರ ಯಾವುದೇ ಕಾರ್ಡ್‌ಗಳಾಗಿರಬಹುದು. ರುಪೇ ಕೂಡ ವಿಸಾ ಅಥವಾ ಮಾಸ್ಟರ್‌ಕಾರ್ಡ್‌ನಂತೆ ಪೇಮೆಂಟ್ ನೆಟ್‌ವರ್ಕ್ ಆಗಿದೆಯಾದರೂ ಅದು ನಮ್ಮದೇ ಸ್ವಂತ ಆವೃತ್ತಿಯಾಗಿದೆ. ಅದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಮಗಾಗಿಯೇ ಸಿದ್ಧಗೊಳಿಸಿರುವ ಸ್ವದೇಶಿ ಉತ್ಪನ್ನವಾಗಿದೆ ಮತ್ತು ಭಾರತದ ಇಂತಹ ಮೊದಲ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಜಾಲವಾಗಿದೆ. ಭಾರತದಾದ್ಯಂತ ಎಟಿಎಂಗಳು, ಪಿಒಎಸ್ ಸಾಧನಗಳು ಮತ್ತು ಇ-ಕಾಮರ್ಸ್ ಜಾಲತಾಣಗಳು ಈ ಕಾರ್ಡ್‌ನ್ನು ಸ್ವೀಕರಿಸುತ್ತವೆ. ಇದು ಫಿಷಿಂಗ್ ವಿರುದ್ಧ ರಕ್ಷಣೆ ನೀಡುವ ಅತ್ಯಂತ ಸುಭದ್ರ ನೆಟ್ ವರ್ಕ್ ಆಗಿದೆ. ರುಪೇ ‘ರುಪೀ’ ಮತ್ತು ‘ಪೇಮೆಂಟ್’ ಶಬ್ದಗಳಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.

 ಪ್ರಸ್ತುತ ರುಪೇ ದೇಶಾದ್ಯಂತ ಸುಮಾರು 600 ಅಂತರರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯ ಬ್ಯಾಂಕುಗಳ ಸಹಭಾಗಿತ್ವವನ್ನು ಹೊಂದಿದೆ. ಎಸ್‌ಬಿಐ, ಪಿಎನ್‌ಬಿ, ಕೆನರಾ, ಬಿಒಬಿ, ಯುಬಿಐ, ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ, ಎಚ್‌ಡಿಎಫ್‌ಸಿ, ಸಿಟಿಬ್ಯಾಂಕ್ ಎನ್.ಎ. ಮತ್ತು ಎಚ್‌ಎಸ್‌ಬಿಸಿಯಂತಹ ಪ್ರಮುಖ ಬ್ಯಾಂಕುಗಳು ರುಪೇ ಕಾರ್ಡಿಗೆ ಹೆಚ್ಚಿನ ಉತ್ತೇಜನ ನೀಡುತ್ತಿವೆ.

ಭಾರತದಲ್ಲಿ ಆನ್‌ಲೈನ್ ವಹಿವಾಟುಗಳು ದಿನೇದಿನೇ ಹೆಚ್ಚುತ್ತಿದೆ. ದೇಶವು ನಗದು ರಹಿತ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿದ್ದು,ರುಪೇ ಕಾರ್ಡ್ ಬಳಕೆಯೂ ಹೆಚ್ಚುತ್ತಿದೆ.

ರುಪೇ ಕಾರ್ಡಿನ ವೈಶಿಷ್ಟಗಳಲ್ಲಿ ಪ್ರಮುಖವಾದದ್ದೆಂದರೆ ನಾವು ಭಾರತದೊಳಗೇ ವಹಿವಾಟು ನಡೆಸಿದರೆ ಅದರ ವಿವರಗಳು ದೇಶದಿಂದ ಹೊರಗೆ ಹೋಗುವುದಿಲ್ಲ. ನೆಟ್‌ವರ್ಕ್‌ನ್ನು ಪ್ರವೇಶಿಸಲು ಸಂಬಂಧಿತ ಕಂಪನಿಗಳಿಗೆ ಬ್ಯಾಂಕುಗಳು ನೀಡಬೇಕಾದ ಮಾಸಿಕ ಅಥವಾ ತ್ರೈಮಾಸಿಕ ಶುಲ್ಕ ಅತ್ಯಂತ ಕಡಿಮೆ ಅಥವಾ ಶೂನ್ಯವಾಗಿದೆ.

ರುಪೇ ಕಾರ್ಡ್ ಮೂಲಕ ವಹಿವಾಟುಗಳಿಗೆ ಶುಲ್ಕವೂ ಕಡಿಮೆಯಿದೆ. ಉದಾಹರಣೆಗೆ 2,000 ರೂ.ವಹಿವಾಟಿಗೆ ರುಪೇ ವ್ಯವಸ್ಥೆಯಲ್ಲಿ 2.50 ರೂ.ಶುಲ್ಕವಾದರೆ, ವಿಸಾ ಅಥವಾ ಮಾಸ್ಟರ್‌ಕಾರ್ಡ್‌ಗಳಲ್ಲಿ ಇದು 3.25 ರೂ.ಆಗುತ್ತದೆ. ಅಂದರೆ ರುಪೇ ಶುಲ್ಕ ಶೇ.23ರಷ್ಟು ಅಗ್ಗವಾಗಿದೆ.

ಯಾವುದೇ ಇತರ ಕಾರ್ಡಿನಂತೆ ರುಪೇ ಕೂಡ ವಹಿವಾಟು ಮಿತಿಗಳು ಮತ್ತು ಎಟಿಎಂ ಹಣ ಹಿಂದೆಗೆತ ಮಿತಿಗಳನ್ನು ಹೊಂದಿದ್ದು, ಇವು ವಿವಿಧ ಬ್ಯಾಂಕುಗಳಲ್ಲಿ ಬೇರೆ ಬೇರೆ ಯಾಗಿವೆ.

ರುಪೇ ಕಾರ್ಡ್‌ನ್ನು ಹೊಂದಬಯಸುವ ವ್ಯಕ್ತಿ ಅದಕ್ಕಾಗಿ ತನ್ನ ಬ್ಯಾಂಕಿಗೆ ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೆ ಮುನ್ನ ಆ ಬ್ಯಾಂಕ್‌ನಲ್ಲಿ ರುಪೇ ಕಾರ್ಡ್ ಇದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಜನಧನ ಯೋಜನೆಯಡಿ ಎಲ್ಲ ಬ್ಯಾಂಕ್‌ಗಳು ರುಪೇ ಕಾರ್ಡ್‌ನ್ನು ಒದಗಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News