ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿ

Update: 2017-12-08 18:36 GMT

ಮಾನ್ಯರೆ,
ಅತ್ಯಂತ ಭಯಾನಕ ಕಾಯಿಲೆಗಳಲ್ಲಿ ಒಂದಾಗಿರುವ ಏಡ್ಸ್ ರೋಗ ರಾಜ್ಯದ ಜನರಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ.ಆದರೆ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತ ವಾಗಿರುವುದರಿಂದ ಏಡ್ಸ್ (ಎಚ್‌ಐವಿ) ಪೀಡಿತ ರೋಗಿಗಳು ಹೆಚ್ಚಾಗಿ ಕಂಡುಬರುತ್ತಿದ್ದಾರೆ. ಅಲ್ಲದೆ ಈ ಭಾಗದ ಜನರಲ್ಲಿ ಹೆಚ್ಚಿನ ಮಂದಿ ಏಡ್ಸ್ ಪ್ರಮಾಣ ಹೆಚ್ಚಿರುವ ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ದುಡಿಯಲು ವಲಸೆ ಹೋಗಿ ಅನೈತಿಕ ಲೈಂಗಿಕ ಸಂಪರ್ಕ ಹೊಂದುವ ಸಂದರ್ಭಗಳಲ್ಲಿ ಯಾವುದೇ ರೀತಿಯ ಸುರಕ್ಷಿತ ಕ್ರಮಗಳನ್ನು ಬಳಸದೆ ಇರುವುದರಿಂದಾಗಿ ಈ ಪ್ರದೇಶಗಳಲ್ಲಿ ಈ ಮಾರಕ ಕಾಯಿಲೆಗೆ ಯುವ ಸಮೂಹ ಅಧಿಕವಾಗಿ ಬಲಿಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಎಚ್‌ಐವಿ ಸೋಂಕಿತರಲ್ಲಿ ದೇಶಕ್ಕೆ ಐದನೆಯ ಸ್ಥಾನದಲ್ಲಿದ್ದ ಕರ್ನಾಟಕ ಈಗ ಎಂಟನೇ ಸ್ಥಾನ ಪಡೆದುಕೊಂಡಿದೆಯಾದರೂ ಕಳೆದ ಹತ್ತು ವರ್ಷಗಳಿಂದ ಇಲ್ಲಿಯವರೆಗೂ ಹಲವಾರು ಸಾವಿರ ಮಂದಿ ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಆದ್ದರಿಂದ ನಮ್ಮ ರಾಜ್ಯದಿಂದ ಈ ಏಡ್ಸ್ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರಕಾರ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೆ, ಏಡ್ಸ್ ರೋಗಿಗಳ ಕುರಿತು ಸಾರ್ವಜನಿಕರು ಹಲವಾರು ತಪ್ಪುಕಲ್ಪನೆಗಳನ್ನು ಹೊಂದಿದ್ದು ಎಚ್‌ಐವಿ ಪೀಡಿತರನ್ನು ಕೀಳರಿಮೆಯಿಂದ ನೋಡುತ್ತಾರೆ. ಏಡ್ಸ್ ರೋಗಿಗಳು ಕೂಡಾ ಸಮಾಜದ ಎಲ್ಲಾ ಜನರ ನಡುವೆ ಎಲ್ಲರಂತೆ ಬಾಳಲು ಅವರ ಬದುಕಿಗೆ ಆತ್ಮ ಸ್ಥೈರ್ಯ ತುಂಬಿ ಅವರು ಉಲ್ಲಾಸದ ಮತ್ತು ಸಂತಸದ ಜೀವನ ನಡೆಸಲು ಸರಕಾರ ಅವಕಾಶ ಮಾಡಿಕೊಡಬೇಕಾಗಿದೆ.

Writer - -ಎಂ.ಕೆ.ಬೋರಗಿ, ಸಿಂಧಗಿ

contributor

Editor - -ಎಂ.ಕೆ.ಬೋರಗಿ, ಸಿಂಧಗಿ

contributor

Similar News