ದಿಲ್ಲಿಯ ವಾಯು ಮಾಲಿನ್ಯ ತಪಾಸಣೆಗೆ ಐಸಿಸಿ ನಿರ್ಧಾರ

Update: 2017-12-08 18:40 GMT

ಹೊಸದಿಲ್ಲಿ, ಡಿ.8: ವಾಯು ಮಾಲಿನ್ಯದಿಂದ ಸುದ್ದಿಯಾಗಿರುವ ಹೊಸದಿಲ್ಲಿಯ ಫಿರೋಝ್ ಶಾ ಕೋಟ್ಲಾ ಮೈದಾನ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯ ಆಯೋಜಿಸಲು ಶಕ್ತವಾಗಿತ್ತೇ ಎಂಬ ಬಗ್ಗೆ ತಜ್ಞ ವೈದ್ಯರು ಪರೀಕ್ಷೆ ನಡೆಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ದಿಲ್ಲಿ ವಾಯುಮಾಲಿನ್ಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

  ‘‘ಯಾವ ಪರಿಸ್ಥಿತಿಯಲ್ಲಿ ದಿಲ್ಲಿ ಟೆಸ್ಟ್ ಪಂದ್ಯ ನಡೆದಿದೆ ಎಂದು ಐಸಿಸಿ ತಪಾಸಣೆ ನಡೆಸಲಿದೆ. ಮುಂದಿನ ದಿನಗಳಲ್ಲಿ ಅವಶ್ಯವೆನಿಸಿದರೆ ವೈದ್ಯಕೀಯ ಸಮಿತಿಯ ಮಾರ್ಗದರ್ಶನವನ್ನು ಪಡೆಯುತ್ತೇವೆ’’ ಎಂದು ಐಸಿಸಿ ತಿಳಿಸಿದೆ. ಬುಧವಾರ ಡ್ರಾನಲ್ಲಿ ಕೊನೆಗೊಂಡಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಶ್ರೀಲಂಕಾ ಆಟಗಾರರು ಮುಖಕ್ಕೆ ಮಾಸ್ಕ್ ಧರಿಸಿ ಆಡಿದ್ದರು. ಉಭಯ ತಂಡಗಳ ಬೌಲರ್‌ಗಳು ಮೈದಾನದಲ್ಲಿ ವಾಂತಿ ಮಾಡಿಕೊಂಡಿದ್ದರು. ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿ ಕಂಡುಬರುವ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸದೇ ಇರಲು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೇಲೆ ಪರಿಣಾಮಬೀರಬಲ್ಲ ಯಾವುದೇ ವೈದ್ಯಕೀಯ ವಿಚಾರದ ಬಗ್ಗೆ ಐಸಿಸಿ ವೈದ್ಯಕೀಯ ಸಮಿತಿಯು ಐಸಿಸಿ ಕಾರ್ಯನಿರ್ವಾಹಕರಿಗೆ ಶಿಫಾರಸು ಮಾಡಬಹುದು. ಐಸಿಸಿ ಟೂರ್ನಿಗಳನ್ನು ಆಯೋಜಿಸುವ ಆತಿಥೇಯ ರಾಷ್ಟ್ರಗಳ ವೈದ್ಯಕೀಯ ಯೋಜನೆಗಳ ಬಗ್ಗೆ ‘‘ಮೌಲ್ಯಮಾಪನ’’ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News