ವಸು ಅವರ ಕೊನೆಯ ಉಪನ್ಯಾಸ

Update: 2017-12-09 10:39 GMT

ಇತಿಹಾಸ ಬರಹಗಾರ್ತಿ ಹಾಗೂ ಯುವ ಸಂಶೋಧಕಿಯಾಗಿದ್ದ ದಿವಂಗತ ಡಾ.ವಸು ಮಳಲಿಯವರ ವ್ಯಕ್ತಿತ್ವ, ಚಿಂತನೆ ಹಾಗೂ ಕೊಡುಗೆಗಳ ಬಗ್ಗೆ ಡಾ.ರಹಮತ್ ತರೀಕೆರೆಯವರ ವಿಶ್ಲೇಷಣಾತ್ಮಕ ಲೇಖನ

ವಸು ಮಳಲಿ ಅವರೊಮ್ಮೆ ಪಿಎಚ್.ಡಿ., ಅಧ್ಯಯನಕ್ಕಾಗಿ ಆಯ್ಕೆಯಾಗಿರುವ ಸಂಶೋಧನಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಲು(ಅಕ್ಟೋಬರ್ 13, 2014) ಕನ್ನಡ ವಿಶ್ವವಿದ್ಯಾನಿಲಯಕ್ಕೆ ಬಂದಿದ್ದರು. ಅದು ಅವರು ನಮ್ಮಲ್ಲಿ ಮಾಡುತ್ತಿರುವ ಕೊನೆಯ ಉಪನ್ಯಾಸವೆಂಬ ಕಲ್ಪನೆ ನಮಗ್ಯಾರಿಗೂ ಇರಲಿಲ್ಲ. ಬೇನೆಯುಂಡೂ ಉಂಡು ಅವರ ದೇಹ ಕರಗುತ್ತಿದ್ದುದು ಸ್ಪಷ್ಟವಾಗಿತ್ತು. ಆದರೆ ಅವರ ಮುಖ ಮಾತ್ರ ಎಂದಿನ ಚೆಂದದ ನಗುವನ್ನು ಬಿಟ್ಟುಕೊಟ್ಟಿರಲಿಲ್ಲ. ಅವರು ಒಂದು ಗಂಟೆಯ ಕಾಲ ತನ್ಮಯವಾಗಿಯೂ ಚಿಂತನಪ್ರಚೋದಕವಾಗಿಯೂ ಮಾತನಾಡಿದರು. ಅವರ ವಿದ್ವತ್ ವ್ಯಕ್ತಿತ್ವದಲ್ಲಿ ಸರಳತೆ, ಸೂಕ್ಷ್ಮಗ್ರಹಿಕೆ, ಒಳನೋಟ, ವೈಚಾರಿಕ ಸ್ಪಷ್ಟತೆ, ಸಾಮಾಜಿಕ ಬದ್ಧತೆ, ಸರಳವೆನಿಸುವ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವ ಸಹನೆ, ಜಟಿಲವಾದ ವಿಷಯವನ್ನೂ ತಿಳಿಯಾಗಿ ವಿವರಿಸಬಲ್ಲ ಕುಶಲತೆಗಳಿದ್ದವು.

ಹಾಗೆ ಕಂಡರೆ ವಸು ತಮ್ಮ ಜೀವಿತದಲ್ಲಿ ಬರೆದಿದ್ದು ಹೆಚ್ಚೇನಿಲ್ಲ. ಅವರಿಗಿದ್ದ ವಿದ್ವತ್ತನ್ನು ಸೂಚಿಸಬಲ್ಲ ಪ್ರಾತಿನಿಧಿಕ ಕೃತಿ ನನ್ನ ಪ್ರಕಾರ ಇನ್ನೂ ಪ್ರಕಟವಾಗಿಲ್ಲ. ಆದರೆ ಅವರು ತಮ್ಮ ಉಪನ್ಯಾಸ ಮತ್ತು ಚರ್ಚೆಗಳ ಮೂಲಕ ಹುಟ್ಟಿಸುತ್ತಿದ್ದ ವೈಚಾರಿಕ ಸಂಚಲನಕ್ಕೆ ನೂರಾರು ನಿದರ್ಶನಗಳಿವೆ. ಬಹುಶಃ ಅವರು ತಮ್ಮ ತಿಳುವಳಿಕೆಯನ್ನು, ತೋಂಡಿ ಸಂಪ್ರದಾಯದಲ್ಲಿ ನಂಬಿಕೆಯಿಟ್ಟಿದ್ದ ಕಿ.ರಂ.ನಾಗರಾಜ ಅವರಂತೆ, ಉಪನ್ಯಾಸ-ಚರ್ಚೆಗಳಂತಹ ಮೌಖಿಕ ವಿಧಾನದಲ್ಲೇ ಹೆಚ್ಚು ಹಂಚಿಕೊಳ್ಳುವುದಕ್ಕೆ ನಿರ್ಧರಿಸಿದಂತೆ ತೋರುತ್ತದೆ. ಇದಕ್ಕೆ ತಕ್ಕಂತೆ ಅವರೊಬ್ಬ ಪ್ರಭಾವಶಾಲಿ ವಾಗ್ಮಿಯಾಗಿದ್ದರು ಮತ್ತು ಮೌಖಿಕ ಇತಿಹಾಸದ ಮೇಲೆ ಸಂಶೋಧನೆಯನ್ನೂ ಮಾಡಿದ್ದರು. ಕನ್ನಡ ವಿಶ್ವವಿದ್ಯಾನಿಲಯದ ಅಂದಿನ ಉಪನ್ಯಾಸದಲ್ಲಿ ಅವರು ಮೌಖಿಕ ಆಕರಗಳ ಸಾಧ್ಯತೆ, ಬಹುಶಿಸ್ತೀಯ ವಿಧಾನಗಳ ಮಹತ್ವ, ಪಶ್ಚಿಮದ ಅಧ್ಯಯನ ವಿಧಾನಗಳನ್ನು ಕುರುಡು ಅನುಸರಣೆ ಮಾಡುತ್ತಿರುವ ಅಪಾಯ ಮತ್ತು ಸಂಶೋಧನೆಗಿರಬೇಕಾದ ರಾಜಕೀಯಪ್ರಜ್ಞೆ ಮತ್ತು ಆ್ಯಕ್ಟವಿಸಂ ಬಗ್ಗೆ ಪ್ರಸ್ತಾಪಿಸಿದರು. ಈ ಅಂಶಗಳು ಅವರ ವಿದ್ವತ್ತಿನ ಸಾಮಾನ್ಯ ಲಕ್ಷಣಗಳೂ ಆಗಿದ್ದವು. ಹೀಗಾಗಿ ವಸು ಅವರ ಪ್ರಾತಿನಿಧಿಕ ಎನ್ನಬಹುದಾದ ಈ ಉಪನ್ಯಾಸದ ನೆಪದಲ್ಲಿ ಅವರ ವಿದ್ವತ್ತಿನ ತಾತ್ವಿಕತೆಯನ್ನು ವಿಶ್ಲೇಷಿಸಬಹುದು. ವಸು ಅವರಲ್ಲಿ ಸಾಂಪ್ರದಾಯಿಕ ಚರಿತ್ರೆಯ ವಿದ್ವಾಂಸರಲ್ಲಿ ಅಷ್ಟಾಗಿ ಕಾಣದ ಒಂದು ಗುಣವಿತ್ತು.

ಅದೆಂದರೆ ಸಾಹಿತ್ಯಕ ಆಕರಗಳನ್ನು ಬಳಸುತ್ತ ಇತಿಹಾಸ ರಚನೆ ಮಾಡುವುದು. ಇದು ಎಸ್.ಶೆಟ್ಟರ್, ಎಸ್. ಚಂದ್ರಶೇಖರ್ ಮುಂತಾದವರಲ್ಲಿಯೂ ಇದೆ. ಆದರೆ ವಸು ಇನ್ನೂ ಕೆಲಹೆಜ್ಜೆ ಮುನ್ನಡೆದು ಮೌಖಿಕ ಸಾಹಿತ್ಯದ ಆಕರಗಳನ್ನು ಅನುಸಂಧಾನಿಸುತ್ತಿದ್ದರು. ಹೀಗಾಗಿ ಲಿಖಿತ ಸಾಹಿತ್ಯವನ್ನಷ್ಟೇ ಆಕರವಾಗಿಸಿಕೊಂಡ ಚಾರಿತ್ರಿಕ ಸಂಶೋಧನೆಗಳಲ್ಲಿ ಸಿಗದ ನೋಟಗಳು ಅವರ ಬರಹ ಮತ್ತು ಉಪನ್ಯಾಸಗಳಲ್ಲಿ ಕಾಣುತ್ತಿದ್ದವು. ತಮ್ಮೂರಿನ ಗ್ರಾಮದೇವತೆಯಾದ ಮಳಲಿ ಗಿಡ್ಡಮ್ಮನ ಮೇಲಿನ ಹಾಡುಗಳನ್ನಿಟ್ಟುಕೊಂಡು ಅವರು ಚರಿತ್ರೆಯನ್ನು ಕಟ್ಟಲು ಮಾಡಿದ ಯತ್ನವನ್ನು ಇಲ್ಲಿ ಸ್ಮರಿಸಬಹುದು. ವಸು ಅವರು ಮಂಟೆಸ್ವಾಮಿ ಹಾಗೂ ಮಾದೇಶ್ವರ ಕಾವ್ಯಗಳನ್ನು ಮತ್ತೆಮತ್ತೆ ಉಲ್ಲೇಖಿಸುತ್ತಿದ್ದರು. ಈ ಮೂಲಕ ಆಳುವ ವರ್ಗದ ಕಥನವಾಗಿಯೇ ಚಾಲ್ತಿಯಲ್ಲಿರುವ ಚರಿತ್ರೆಯ ಶಾಸ್ತ್ರವನ್ನು ಸಮುದಾಯಗಳ ಸಂಕಥನವನ್ನಾಗಿ ರೂಪಾಂತರಿಸಲು ಅವರು ಯತ್ನಿಸುತ್ತಿದ್ದರು. ಈ ಆಶಯದಲ್ಲಿಯೇ ಅವರ ‘ತಿರುಳ ಬಿಟ್ಟು ಸಿಪ್ಪೆ ಮೆಲ್ಲುವ ಪರಿ’ ಲೇಖನ ರೂಪುಗೊಂಡಂತಿದೆ. ಮೌಖಿಕ ಪರಂಪರೆಯ ಶೋಧದ ಮೂಲಕ ಹುಟ್ಟುವ ತಿಳುವಳಿಕೆಯನ್ನು ಜನತೆಯ ಪ್ರಜ್ಞೆಯ ಭಾಗವಾಗಿ ಕಸಿಗೊಳಿಸಬೇಕೆಂಬುದು ಅವರ ಕಳಕಳಿಯಾಗಿತ್ತು. ಹಾಗೆಂದು ಅವರಲ್ಲಿ ಜನಪದ ವಿದ್ವಾಂಸರಲ್ಲಿ ಸಾಮಾನ್ಯವಾಗಿ ಕಾಣುವ ಅವಿಮರ್ಶಾತ್ಮಕ ಆರಾಧನೆಯಿರಲಿಲ್ಲ. ಜಾನಪದದಲ್ಲಿಯೂ ಹೇಗೆ ಸ್ತ್ರೀ ಮತ್ತು ದಲಿತ ವಿರೋಧಿ ನಿಲುವುಗಳು ಅಡಗಿಕೊಂಡಿವೆ ಎಂಬ ಎಚ್ಚರವಿತ್ತು. ವಸು ಅವರು ಜನತೆಯ ಕಣ್ಣೋಟದಲ್ಲಿ ಚರಿತ್ರೆ ಕಟ್ಟುವುದಕ್ಕಾಗಿ ಅವರು ವಿಭಿನ್ನ ಕ್ಷೇತ್ರದ ಆಕರಗಳನ್ನು ಹುಡುಕುತ್ತಿದ್ದರು.

ತಮ್ಮ ಒಂದೇ ಉಪನ್ಯಾಸ ಅಥವಾ ಬರಹದಲ್ಲಿ ಅವರು ಮಳಲಿ ಗಿಡ್ಡಮ್ಮ, ಮಂಟೆಸ್ವಾಮಿ, ಅಕ್ಕಮಹಾದೇವಿ, ಕುವೆಂಪು, ಅಲ್ಲಮಪ್ರಭು, ಬುದ್ಧ ಮುಂತಾದವರ ಬಗ್ಗೆ ಚರ್ಚಿಸಬಲ್ಲವರಾಗಿದ್ದರು. ಅಂದಿನ ಉಪನ್ಯಾಸದಲ್ಲಿ ಕೂಡ ಅವರು ಮಂಟೆಸ್ವಾಮಿ ಕಾವ್ಯದಲ್ಲಿ ಬರುವ ನೀಲಗಾರರು ಪದದಲ್ಲಿರುವ ನೀಲಿಬಣ್ಣ ಏನನ್ನು ಸೂಚಿಸುತ್ತಿದೆ, ಆಕಾಶವನ್ನೇನು?, ಹಾಗಿದ್ದರೆ ಈ ಆಕಾಶ ಬೌದ್ಧರ ಶೂನ್ಯವನ್ನು ಅಥವಾ ಶರಣರು ಹೇಳುವ ಬಯಲು ತತ್ವವನ್ನು ಸೂಚಿಸುತ್ತಿರಬಹುದೇ- ಮುಂತಾದ ಪ್ರಶ್ನೆಗಳನ್ನು ಎತ್ತಿದರು. ಅವರ ಪ್ರಕಾರ, ಅಲ್ಲಮ ಕೇವಲ ವಚನಕಾರನಲ್ಲ, ಒಬ್ಬ ದಾರ್ಶನಿಕ. ನಾಗಾರ್ಜುನ ಅರ್ಥವಾಗದೆ ಅಲ್ಲಮ ಅರ್ಥವಾಗುವುದಿಲ್ಲ. ಬುದ್ಧ ಅರ್ಥವಾಗದೆ ನಾಗಾರ್ಜುನ ಅಲ್ಲಮ ಮಂಟೆಸ್ವಾಮಿ ಇಬ್ಬರೂ ಅರ್ಥವಾಗುವುದಿಲ್ಲ. ಅಶೋಕ ಅರ್ಥವಾಗದೆ ಭಾರತದ ಮೊದಲ ಪೊಲಿಟಿಕಲ್ ಫಿಲಾಸಫರ್ ಬುದ್ಧ ಅರ್ಥವಾಗುವುದಿಲ್ಲ. ವಸು ಅವರ ವಿಶೇಷತೆಯೆಂದರೆ, ತಮ್ಮ ಅಧ್ಯಯನ ಮತ್ತು ಅನುಭವದಲ್ಲಿ ಪಡೆದುಕೊಂಡ ಮಾಹಿತಿಯನ್ನು ಅರ್ಥಪೂರ್ಣವಾಗಿ ಲಿಂಕ್ ಮಾಡಿ ವಿಶ್ಲೇಷಿಸುವುದು. ಮೇಲ್ನೋಟಕ್ಕೆ ಅವರ ಉಪನ್ಯಾಸವು ಬಿಡಿ ಘಟನೆಗಳನ್ನು ಕೋದ ಹಾರದಂತೆ ಕಂಡರೂ, ಅದರೊಳಗೊಂದು ತಾತ್ವಿಕ ಪ್ರಮೇಯ ಹೊಮ್ಮಿಕೊಂಡು ಬರುತ್ತಿತ್ತು. ಅವರ ಅಂಕಣಗಳ ಹೆಸರಾಗಿದ್ದ ‘ಕಳ್ಳು-ಬಳ್ಳಿ’ಯ ರೂಪಕವೇ ಅವರ ಜಾನಪದ ಪ್ರಜ್ಞೆಯನ್ನೂ ಶಾಸ್ತ್ರಗಳ ನಡುವೆ ತುಂಡರಿಸಲಾಗದೆ ಇರುವ ಸಂಬಂಧ ಪ್ರಜ್ಞೆಯನ್ನೂ ಒಟ್ಟಾರೆ ಸಂಶೋಧನೆಯಲ್ಲಿರುವ ಮಾನವೀಯ ತುಡಿತಗಳನ್ನು ಧ್ವನಿಸುತ್ತದೆ. ವಸು ಅವರಿಗೆ ಸಂಶೋಧಕರು ಬೌದ್ಧಿಕವಾದ ಸೀಮೋಲ್ಲಂಘನೆ ಮಾಡದೆ, ದಾಟಲಾಗದ ಗೆರೆಗಳನ್ನು ಎಳೆದುಕೊಂಡು ಸಂಶೋಧನೆಯನ್ನು ಕುಬ್ಜಗೊಳಿಸಿಕೊಳ್ಳುವ ಬಗ್ಗೆ ಕಳವಳ ವಿತ್ತು. ಕರ್ನಾಟಕದ ಸಮಾಜ ವಿಜ್ಞಾನಗಳ ಸಂಶೋಧನೆ ತನ್ನ ಏಕ ಶಿಸ್ತೀಯತೆಯಿಂದ ಸೊರಗಿದೆಯೆಂದೂ ಅದು ಬಹುಶಿಸ್ತೀಯ ವಿಧಾನಗಳಿಂದ ಮರುಹುಟ್ಟು ಪಡೆಯಬೇಕಿದೆಯೆಂದೂ, ಸಮಾಜದಲ್ಲಿರುವ ಅಸ್ಪಶ್ಯತೆಯ ಮನೋಭಾವವು ಸಂಶೋಧನೆ ಯಲ್ಲಿಯೂ ಇದೆಯೆಂದೂ ಅವರು ಭಾವಿಸಿದ್ದರು. ಅವರು ಈ ಸಮಸ್ಯೆಯನ್ನು ‘ಸಮಾಜ ವಿಜ್ಞಾನ: ಗಾಳ ನುಂಗಿದ ಮೀನು’ ಲೇಖನದಲ್ಲಿ ವಿಶ್ಲೇಷಿಸಿದ್ದರು ಕೂಡ. ಸಂಶೋಧನೆಯು ಹಲವು.

ವಸು ಅವರಿಗೆ ಕರ್ನಾಟಕದ ಸಂಶೋಧಕರು, ಪಶ್ಚಿಮದ ವಸಾಹತುಶಾಹಿ ಸಂಶೋಧನೆಯ ಮಾದರಿಗಳನ್ನು ಯಾಂತ್ರಿಕವಾಗಿ ಅನುಸರಿಸುತ್ತಿರುವ ಬಗ್ಗೆ ಶಾನೆ ಆಕ್ರೋಶವಿತ್ತು. ಈ ಕುರುಡು ಅನುಸರಣೆಯ ಸೋಂಕನ್ನು ವಿಶ್ವವಿದ್ಯಾನಿಲಯಗಳು ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ದಾಟಿಸುತ್ತ ಅವರ ಚೈತನ್ಯಕ್ಕೆ ಮಂಕು ಹಿಡಿಸುತ್ತಿವೆಯೆಂದೂ; ವಿಶ್ವವಿದ್ಯಾನಿಲಯದ ಶಿಕ್ಷಕ ಸಮುದಾಯ ತನ್ನ ಸಾಂಸ್ಕೃತಿಕ ಹೊಣೆಗಾರಿಕೆ ಮರೆತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿದೆಯೆಂದೂ ಅವರು ಬೇಸರಿಸುತ್ತಿದ್ದರು. ವಸು ಅವರ ವಿಶೇಷತೆಯಿದ್ದುದೇ ಚರಿತ್ರೆಯನ್ನು ತಮ್ಮ ಕಾಲದ ಬದುಕನ್ನು ಅರ್ಥಮಾಡಿಕೊಳ್ಳುವ ಜ್ಞಾನವನ್ನಾಗಿ ಪರಿವರ್ತಿಸುವಲ್ಲಿ; ಚರಿತ್ರೆಯನ್ನು ಸಮಕಾಲೀನ ಪ್ರಜ್ಞೆಯಲ್ಲಿ ನೋಡುತ್ತ ಅದನ್ನು ಸ್ಥಗಿತ ಗತದ ಚೌಕಟ್ಟಿನಿಂದ ಬಿಡಿಸುವುದು. ಹೀಗಾಗಿಯೇ ಅವರೊಬ್ಬ ಚರಿತ್ರೆಕಾರರಿಗಿಂತ ಮಿಗಿಲಾಗಿ ಸಮಾಜ ಶಾಸ್ತ್ರಜ್ಞರಂತೆ ತೋರುತ್ತಿದ್ದರು. ಮೈಸೂರು ರಾಜ್ಯವನ್ನಾಳಿದ ಜಯಚಾಮರಾಜೇಂದ್ರ ಒಡೆಯರ್ ಬಗ್ಗೆ ಪಿಎಚ್.ಡಿ. ಮಾಡಿದ ವಸು ಜನತೆಯ ಮೂಲಕ ಚರಿತ್ರೆಯನ್ನು ನೋಡುವ ವಿಧಾನಕ್ಕೆ ಹೊರಳಿಕೊಂಡವರು ಎಂಬುದು ಗಮನಾರ್ಹ. ಎಲ್ಲ ಬಗೆಯ ಆಲಕ್ಷಿತ ಮತ್ತು ದಮನಿತ ಗುರುತುಗಳ ಪರವಾಗಿ, ಎಲ್ಲ ಅಧಿಕಾರಸ್ಥ ರಚನೆಗಳಿಗೆ ಪ್ರತಿರೋಧದ ನೆಲೆಯಲ್ಲಿ ನಿಂತು ಅವರು ಚಿಂತನೆ ಮಾಡುತ್ತಿದ್ದರು. ಇದಕ್ಕೆ ಅವರು ಬೌದ್ಧದರ್ಶನ, ರೈತರು, ತೃತೀಯಲಿಂಗಿಗಳು, ಜಾನಪದ, ಮೌಖಿಕ ಪರಂಪರೆ, ಕನ್ನಡ ಭಾಷಾಮಾಧ್ಯಮ, ಕೆಳಜಾತಿಗಳು, ಉರ್ದು, ವೇಶ್ಯೆಯರು ಮುಂತಾದ ವಿಷಯಗಳ ಬಗ್ಗೆ ಬರೆದಿರುವ ಅಂಕಣ ಬರಹಗಳು ಪುರಾವೆಯಂತಿವೆ. ವಸು ಪರ್ಯಾಯಗಳ ಹುಡುಕಾಟವು ಅವರ ನೋಟ ಕ್ರಮದಲ್ಲಿ ಮಾತ್ರವಲ್ಲದೆ, ಅದನ್ನು ಅಭಿವ್ಯಕ್ತಿಸುವ ಭಾಷೆಯ ವಿಷಯದಲ್ಲಿಯೂ ಇತ್ತು. ಶಂಕರಪ್ಪ ತೋರಣಗಲ್ ಎಂಬ ಅಷ್ಟೇನು ಪ್ರಸಿದ್ಧರಲ್ಲದ ಲೇಖಕರು ಸಿಂಧೂ ಸಂಸ್ಕೃತಿಯ ಮೇಲೆ ರಚಿಸಿರುವ ಪುಸ್ತಕದಲ್ಲಿ ಇತಿಹಾಸಪೂರ್ವದ ಕಾಲವನ್ನು ‘ಹಿಂಚಿನ ಕಾಲ’ ಎಂದು ಬಳಸಿದ್ದನ್ನು ಉಲ್ಲೇಖಿಸುತ್ತ, ವಿಶ್ವವಿದ್ಯಾನಿಲಯದ ವಿದ್ವಾಂಸರು ಹೇಗೆ ಸಂಸ್ಕೃತ ಪರಿಭಾಷೆಗಳಿಗೆ ಜೋತು ಬಿದ್ದಿದ್ದಾರೆಂಬುದನ್ನು ತಮ್ಮ ಉಪನ್ಯಾಸದಲ್ಲಿ ವಿಮರ್ಶಿಸಿದರು. ಸಂಶೋಧನೆಗೆ ಕನ್ನಡದಲ್ಲಿ ಸೂಕ್ತ ಶಬ್ದಗಳಿಲ್ಲ ಎಂದು ಆಪಾದಿಸುವವರು ಸಂಸ್ಕೃತ ಪದಗಳ ಬಳಕೆಯ ಮೂಲಕ ರಾಜಕಾರಣ ಮಾಡುವುದನ್ನು ಅವರು ಟೀಕಿಸಿದರು. ಕನ್ನಡದ್ದೇ ಆದ ಸಂಶೋಧನ ವಿಧಾನವನ್ನು ಅಥವಾ ಕರ್ನಾಟಕದ್ದೇ ಆದ ಇತಿಹಾಸ ರಚನಾಶಾಸ್ತ್ರವನ್ನು ರೂಪಿಸುವುದಕ್ಕೆ ಅವರು ತವಕಿಸುತ್ತಿದ್ದರು.

‘ಕನ್ನಡದೊಳ್ ಭಾವಿಸಿದ ಜನಪದಂ’ ಕೃತಿಯ ಸಂಪಾದಕೀಯದಲ್ಲಿ ಈ ಆಶಯ ವ್ಯಕ್ತವಾಗಿದೆ: ‘‘ಕರ್ನಾಟಕದ ಚರಿತ್ರೆಯನ್ನು ಕನ್ನಡದೊಳ್ ಭಾವಿಸಬೇಕಾಗಿದೆ. ಏಕೆಂದರೆ ಅದರ ಚರಿತ್ರೆ ಇರುವುದೇ ಕಾಲಕಾಲಕ್ಕೆ ಬದಲಾದ ಸೀಮೆಯಲ್ಲಿ. ‘ಭಾವಿಸಿದ’ ಎನ್ನುವುದು ಚರಿತ್ರಕಾರನ ‘ಕನ್‌ಸ್ಟ್ರಕ್ಟ್’ ಎಂಬ ಅಭಿವ್ಯಕ್ತಿಗೆ ತೀರ ಸಮೀಪವಾಗಿ ಕಾಣುತ್ತದೆ. ಭಾವಿಸಿದ ಜನಪದರನ್ನು ಎನ್ನುವುದು ಸಹ ಇತ್ತೀಚಿನ ಚರ್ಚೆಗಳಲ್ಲಿ ಕಾಣಸಿಗುವ ಇಮ್ಯಾಜಿನ್ಡ್ ಕಮ್ಯುನಿಟಿಯ ಅರ್ಥವನ್ನು ಸೂಚಿಸುತ್ತದೆ. ಕರ್ನಾಟಕ ಚರಿತ್ರೆ ಈ ಪ್ರದೇಶದಲ್ಲಿ ವಾಸಿಸುತ್ತಾ ತಾವು ಒಂದು ಎಂದು ಭಾವಿಸಿಕೊಂಡು ಬದುಕುವ ಜನರ ಚರಿತ್ರೆಯಾಗಿದೆ. ತಮ್ಮತನವನ್ನು ಕಟ್ಟಿಕೊಳ್ಳುವ ಪ್ರಯತ್ನ ಅದೇ ಸಂದರ್ಭದಲ್ಲಿ ಅದು ರಾಜಕೀಯವಾಗಿಯೂ ಸಂದೇಶವನ್ನು ನೀಡುತ್ತದೆ. ಮಾರ್ಗಕಾರ ಎರಡು ನದಿಗಳ ನಡುವೆ ಬದುಕಿದ ‘ಜನರನ್ನು’ ಅಂದರೆ ಜನಪದರನ್ನು ನಾಡಾಗಿ ಗುರುತಿಸಿದ್ದಾನೆಯೇ ಹೊರತು ರಾಜಪ್ರಭುತ್ವದ ಹಿನ್ನೆಲೆಯಲ್ಲಿ ಉದ್ದೇಶಿಸುತ್ತಿಲ್ಲ. ಆದ್ದರಿಂದ ಶೀರ್ಷಿಕೆ ಪುಸ್ತಕದ ಆಶಯ ಮಾತ್ರವಾಗಿರದೆ ಈ ನಾಡಿನ ಜನಪದರ ಚರಿತ್ರೆ(ಪೀಪಲ್ಸ್ ಹಿಸ್ಟರಿ) ಕಟ್ಟುವ ಸಂಶೋಧಕರ ಕೈದೀವಟಿಗೆಯಾಗಬೇಕೆಂಬ ಮಹದಾಸೆ.’’ ವಸು ಅವರಿಗೆ ಭಾರತದ ಸಮಾಜವನ್ನು ಬಹುತ್ವದಲ್ಲಿಯೇ ಗ್ರಹಿಸಬೇಕೆಂಬ ತವಕವಿತ್ತು. ಅವರ ಈ ಬಹುಶಿಸ್ತೀಯತೆ ಬಹುಮಾಧ್ಯಮೀಯತೆಯಾಗಿ ಕೂಡ ವಿಸ್ತರಣೆ ಪಡೆಯುತ್ತಿತ್ತು. ಸಾಹಿತ್ಯದಿಂದ ಚರಿತ್ರೆ, ಚರಿತ್ರೆಯಿಂದ ಜನಪದಕ್ಕೆ, ಇವೆರಡರಿಂದ ಸಂಗೀತಕ್ಕೆ ಹೊರಳುವ ಬಗ್ಗೆ ಅವರು ತಮ್ಮ ಉಪನ್ಯಾಸದಲ್ಲಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅವರ ನಿಧನಾ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡ ಫೋಟೊಗಳಲ್ಲಿ, ಅವರು ಕ್ಯಾಮರಾ ಮೂಲಕ ನೋಡುತ್ತಿರುವ ಫೋಟೊ ಕೂಡ ಒಂದಾಗಿದ್ದು, ಅದು ಮಾರ್ಮಿಕವೆನಿಸುತ್ತದೆ. ಇದು ಅಕ್ಷರ ರೂಪದಲ್ಲಿರುವ ಬರಹದಾಚೆಗೆ ಹೋಗಿ ದೃಶ್ಯ ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರ ಸೃಜನಶೀಲತೆಯ ರೂಪಾಂತರದ ಸಂಕೇತದಂತಿದೆ. ಲೇಖಕ ತೇಜಸ್ವಿಯವರು ಕ್ಯಾಮರಾ ಮೂಲಕ ತಮ್ಮ ಬರಹಕ್ಕೆ ಹೊಸ ಆಯಾಮ ಪಡೆಯುತ್ತಿದ್ದಂತೆ, ಛಾಯಾಗ್ರಹಣದ ಮೂಲಕ ತಮ್ಮ ಚಿಂತನೆ, ಮಾತು ಮತ್ತು ಬರಹಗಳಿಗೆ ಹೊಸ ಸ್ತರವನ್ನು ಜೋಡಿಸಿ ಕೊಳ್ಳುತ್ತಿದ್ದರು. ಹೀಗಾಗಿಯೇ ಅವರ ಬರಹ ಮತ್ತು ಮಾತುಗಳಲ್ಲಿ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವ, ಕಂಡ ಸಾಮಾನ್ಯ ದೃಶ್ಯವನ್ನೂ ರೂಪಕವಾಗಿಸಿ, ಅದನ್ನು ಹಲ ಅರ್ಥಗಳು ಹೊಮ್ಮುವಂತೆ ಸೃಜನಶೀಲವಾಗಿ ಬೆಳೆಸುವ ಮತ್ತು ಆ ಮೂಲಕ ಗಹನವಾದ ತಾತ್ವಿಕತೆಯನ್ನು ಹೊಮ್ಮಿಸುವ ಕಾರ್ಯ ಸಾಧ್ಯವಾಯಿತು ಅನಿಸುತ್ತದೆ.

ಸಂಶೋಧನೆಯಲ್ಲಿ ನಿರಚನ ವಿಧಾನದ (ಡಿ-ಕನ್‌ಸ್ಟ್ರಕ್ಷನ್) ಬಗ್ಗೆ ಮಾತಾಡುತ್ತ, ಕಟ್ಟಿಕೊಂಡಿರುವ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಒಡೆಯುವುದು ಮೂಲತಃ ನಿರಚನೆಯ ಕಾರ್ಯವಾಗಿದೆಯೆಂದೂ, ಅದನ್ನು ಭಾರತದಲ್ಲಿ ವೈದಿಕ ವ್ಯವಸ್ಥೆಯನ್ನು ಒಡೆಯುವ ಮೂಲಕ ಮಾಡಿದವನು ಬುದ್ಧನೆಂದೂ ಅವರು ತಮ್ಮ ಅಂದಿನ ಉಪನ್ಯಾಸದಲ್ಲಿ ಹೇಳಿದರು. ಭಾರತದ ವೈದಿಕ ವ್ಯವಸ್ಥೆಯು ಹಾಗೂ ಬಲಪಂಥೀಯ ರಾಜಕಾರಣವು ಬುದ್ಧನಿಗೆ ಸಂಬಂಧಿಸಿದ ನೆನಪುಗಳನ್ನು ಅಳಿಸಿಹಾಕುತ್ತಿರುವುದನ್ನು ಅವರು ಪ್ರಸ್ತಾಪಿಸಿದರು. ಅವರಿಗೆ ತಮ್ಮ ಕಾಲದ ಪ್ರಗತಿಪರ ಸಂಶೋಧಕರಿಗೂ ಬುದ್ಧನ ದರ್ಶನಗಳಿರುವ ಪಾಲಿ ಭಾಷೆಯ ಬಗ್ಗೆ ಇರುವ ಅಜ್ಞಾನದ ಬಗ್ಗೆ ವಿಷಾದವಿತ್ತು. ಅವರ ಪ್ರಕಾರ, ನಮ್ಮ ಬಹಳಷ್ಟು ಸಂಶೋಧಕರು ಭಾರತದ ಮುಖ್ಯ ಜ್ಞಾನವಾಹಿನಿಯಾಗಿದ್ದ ಬೌದ್ಧದರ್ಶನವನ್ನೇ ಸ್ಪರ್ಶಿಸಲಿಲ್ಲ. ಅವರ ಈ ನಿರಾಶೆ ಸನ್ನತಿಯ ಬಗ್ಗೆ ಅವರು ಬರೆದ ‘ಕನ್ನಡಿಗರಿಗೂ ಬೇಡವಾದ ಬುದ್ಧ’ ಲೇಖನದಲ್ಲಿಯೂ ವ್ಯಕ್ತವಾಗಿದೆ. ಅವರು ಅಲ್ಲಮನಲ್ಲಿ, ಅಂಬೇಡ್ಕರ್‌ರಲ್ಲಿ ಅಥವಾ ಮಂಟೇಸ್ವಾಮಿಯಲ್ಲಿ ರೂಪಾಂತರದಲ್ಲಿರುವ ಬೌದ್ಧ ಚಿಂತನೆಗಳನ್ನು ಮುಟ್ಟಲು ಯತ್ನಿಸುತ್ತಿದ್ದರು; ವೈಯಕ್ತಿಕವಾಗಿ ಅವರ ಮತ್ತು ನನ್ನ ಒಡನಾಟವು ಬಹುಶಃ ನಾನು ಸೂಫಿಗಳು ಮತ್ತು ನಾಥರ ಮೇಲೆ ಮಾಡಿದ ಸಂಶೋಧನೆಯ ಮೂಲಕ ಏರ್ಪಟ್ಟಿತು ಎಂದು ಕಾಣುತ್ತದೆ. ವಿಶೇಷವೆಂದರೆ, ಸಾಹಿತ್ಯ ವಿದ್ಯಾರ್ಥಿಯಾದ ನನ್ನ ಜತೆ ಅವರು ಧರ್ಮ ಮತ್ತು ದಾರ್ಶನಿಕ ಪಂಥಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತಿದ್ದರು; ಮಹಿಳಾ ಸೂಫಿಗಳ ಕುರಿತು ನನ್ನಿಂದ ಒಂದು ಲೇಖನವನ್ನೂ ಬರೆಯಿಸಿದ್ದರು. ಸಾಹಿತ್ಯ ಪರಿಷತ್ತಿಗಾಗಿ ಅವರು ಸಂಪಾದಿಸುತ್ತಿದ್ದ ಸಮಾಜ ವಿಜ್ಞಾನಗಳ ಸಂಪುಟಕ್ಕೆ ಧರ್ಮಗಳ ಮೇಲೆ ನಾನು ಲೇಖನ ಬರೆಯಬೇಕೆಂದು ಆಜ್ಞಾಪಿಸಿದ್ದರು.

ಇದಕ್ಕೆ ಪ್ರತಿಯಾಗಿ ನಾನು ಸಮಾಜವಿಜ್ಞಾನದ ಕುರಿತು ಅವರಿಂದ ಸಾಹಿತ್ಯದ ವಿಷಯದಲ್ಲಿ ಚಿಂತನೆ ಪಡೆದುಕೊಳ್ಳುತ್ತಿದ್ದೆ. ಇದಕ್ಕೆ ಕಾರಣ, ನಾವಿಬ್ಬರೂ ಕನ್ನಡ ಸಂಶೋಧನೆ ಮಾನವಿಕ ಮತ್ತು ಸಮಾಜವಿಜ್ಞಾನದ ಎಲ್ಲೆಕಟ್ಟುಗಳನ್ನು ಬೆರೆಸುವ ಬಹುಶಿಸ್ತೀಯ ಅಧ್ಯಯನಗಳಿಗೆ ತೆರೆದುಕೊಂಡ ಕಾಲದವರಾಗಿದ್ದುದು ಇರಬಹುದು. ವಸು ಬರಹ ಮತ್ತು ಮಾತುಗಳಲ್ಲಿ ಅವರ ವೈಚಾರಿಕ ಚಿಂತನೆ, ದಮನಿತರ ಬಗೆಗಿನ ಬುದ್ಧಾನುಕಂಪ, ವಿದ್ವತ್ತು, ಚಳವಳಿಗಾರಿಕೆಗಳು ಏಕೀಭವಿಸಿದ್ದವು. ಹೊಸ ತಲೆಮಾರಿನ ಸಂಶೋಧಕರಿಗೆ ಮಾತ್ರವಲ್ಲ, ಪತ್ರಿಕೆ ಓದುವ ಸಾಮಾನ್ಯ ಓದುಗರಿಗೂ ತಮ್ಮ ಚಿಂತನೆ ಮುಟ್ಟಿಸುವ ಸರಳತೆಯನ್ನು ಅವರು ಸಾಧಿಸಿದ್ದರು. ಅವರು ತಮ್ಮ ಉಪನ್ಯಾಸದಲ್ಲಿ ಬುದ್ಧನ ಸಾವಿಲ್ಲದ ಮನೆಯ ಸಾಸಿವೆಯ ಪ್ರಕರಣ ಉಲ್ಲೇಖಿಸಿದ್ದು ಈ ದೃಷ್ಟಿಯಿಂದ ಧ್ವನಿಪೂರ್ಣ ಅನಿಸುತ್ತಿದೆ. ಸರಳವಾದ ನಿದರ್ಶನಗಳ ಮೂಲಕ ಲೋಕದ ಕಟುಸತ್ಯವನ್ನು ತಿಳಿಯಪಡಿಸಿದ ಬುದ್ಧನ ಸರಳತೆ ಅವರಿಗೆ ಪ್ರಿಯವಾಗಿತ್ತು. ಅವರ ಅಂದಿನ ಉಪನ್ಯಾಸದಲ್ಲಿದ್ದ ತುರ್ತು ಕಾಳಜಿ ಸರಳತೆ ಸ್ಪಷ್ಟತೆಗಳು, ಪಾಂಡಿತ್ಯದಿಂದ ಮಾತ್ರ ಬಂದಿರಲಿಲ್ಲ; ಸಾವನ್ನು ಗೆಲ್ಲಲು ಅಥವಾ ಅದನ್ನು ಮುಂದೂಡಲು ಅವರು ಮಾಡುತ್ತಿದ್ದ ಸೆಣಸಾಟದಿಂದಲೂ ಬಂದಿದ್ದವು ಎಂದು ಈಗ ಅನಿಸುತ್ತಿದೆ. ತೀರಿಕೊಳ್ಳುವ ಮುನ್ನ ತನ್ನಿಂದ ಲೋಕಕ್ಕೆ ಏನಾದರೂ ಉಪಯುಕ್ತವಾದುದನ್ನು ಮಾಡಬಹುದೇ ಎಂಬ ತವಕದಲ್ಲಿ ಅವರು ಕೊನೆಯ ಕ್ಷಣವನ್ನೂ ಉತ್ಕಟವಾಗಿ ಬದುಕುತ್ತಿದ್ದರು ಎಂಬಂತೆ ಅವರ ಉಪನ್ಯಾಸವಿತ್ತು. ಆದರೆ ಪರ್ಯಾಯಗಳನ್ನು ಹುಡುಕುತ್ತಿದ್ದ ಚಿಂತಕಿಯಾಗಿದ್ದ, ಕನ್ನಡಕ್ಕೆ ಕೈದೀವಟಿಗೆಯಾಗಿ ಇನ್ನೂ ಎಷ್ಟೋ ಕಾಲದವರೆಗೆ ತಿಳುವಳಿಕೆಯ ಬೆಳಕು ಕೊಡುವ ಕಸುವಿದ್ದ, ದನಿಯಿಲ್ಲದವರಿಗೆ ದನಿಯಾಗಲು ಹವಣಿಸುತ್ತಿದ್ದ, ಜನಪರ ಚಳವಳಿಗಳ ಸಂಗಾತಿಯಾಗಿದ್ದ ವಸು, ತಮ್ಮ ಕನಸು ಮತ್ತು ಚಿಂತನೆಗಳನ್ನು ಇನ್ನೂ ಹಂಚಿಕೊಳ್ಳುತ್ತಿರುವ ಹೊತ್ತಲ್ಲಿ, ವಿದ್ವಾಂಸ ಡಿ.ಆರ್. ನಾಗರಾಜ್ ಅವರಂತೆ ಚಿಕ್ಕವಯಸ್ಸಿನಲ್ಲೇ ನಿರ್ಗಮಿಸಿದ್ದು, ಸದಾ ದುಗುಡವಾಗಿ ಕಾಡುತ್ತದೆ.

Writer - ಡಾ. ರಹಮತ್ ತರೀಕೆರೆ

contributor

Editor - ಡಾ. ರಹಮತ್ ತರೀಕೆರೆ

contributor

Similar News