ಜೀವಪಲ್ಲಟಗಳ ಆತ್ಮಕಥನ

Update: 2017-12-09 12:05 GMT

ಸಮಾಜ ಹಾಗೂ ಪರಿಸರದ ಕುರಿತಾಗಿ ಅನೇಕ ವಾದ ವಿವಾದಗಳನ್ನು ಇಂದಿನ ಸಂದರ್ಭದಲ್ಲಿ ಟಿ.ಎಸ್. ವಿವೇಕಾನಂದರು ಮಂಡಿಸುವ ಹಾಗೂ ವಿಶ್ಲೇಷಿಸುವ ವಿಧಾನ ತುಂಬಾ ವಾಸ್ತವವಾದದ್ದು. ಬಹುತೇಕರ ಬರವಣಿಗೆಗಳಲ್ಲಿ ಕಾಣುವ ತುಡಿತ ಹಂಬಲಗಳು ಇವರಲ್ಲಿ ಅನುಭವದ ಮೂಲಕ ಬಂದಿರುವುದು ಮತ್ತು ಅದನ್ನು ನೋಡುವ ಕ್ರಮದಲ್ಲಿ ಇವರಿಗಿರುವ ಒಳನೋಟ ಈ ಬರಹಗಳಲ್ಲಿರುವುದನ್ನು ಕಾಣಬಹುದು ತೀರಾ ಸರಳಗೊಂಡಿರುವ ಹಲವಾರು ಪ್ರಶ್ನೆಗಳು ಹಾಗೂ ಸಾಮಾನ್ಯೀಕರಣಗೊಂಡಿರುವ ಹಲವಾರು ಪರಿಕಲ್ಪನೆಗಳು ಉದಾಹರಣೆಗೆ-ಪರಿಸರವಾದ, ಚಳವಳಿ, ನಿರುದ್ಯೋಗ, ಪರಿಸರ ಮಾಲಿನ್ಯ. ಇತ್ಯಾದಿಗಳು ಇಂದಿನ ವ್ಯವಸ್ಥೆಯಲ್ಲಿ ಎಷ್ಟು ಅಶಕ್ತಗೊಂಡಿವೆಯೋ....ಇದಕ್ಕೆ ಕಾರಣ, ಅದರ ಪರಿಣಾಮಗಳ ಭೀಕರತೆಗಳನ್ನು ತಿಳಿಸುತ್ತಾ ಈ ಎಲ್ಲಾ ಪರಿಕಲ್ಪನೆಗಳಿಗೆ ಹೊಸ ಚೈತನ್ಯ ತುಂಬಿದಂತಿದೆ.

ಭಾರತದಂತಹ ಬಹು ವಿಧದ, ಸಮಾಜ ಸಂಸ್ಕೃತಿಯ ದೇಶದಲ್ಲಿ ಪ್ರತಿಯೊಂದು ಸಮಸ್ಯೆ ಒಂದು ಹಂತದವರೆಗೆ.. ಮುಂದೆ ಅದು ಬೇರೆಯದೇ ಆದ ಸ್ವರೂಪ ಪಡೆದುಕೊಳ್ಳಬಹುದು,ಹಾಗೆಯೇ ಸ್ಥಳ, ಕಾಲ ಬದಲಾದಂತೆ ವೈವಿಧ್ಯವೂ ಬದಲಾವಣೆಯೂ ಆಗಬಹುದು. ಇಲ್ಲಿ ಯಾವುದೇ ಸಮಸ್ಯೆಯನ್ನು ವಿವರಿಸಲು ಅನೇಕ ಗೊಂದಲಗಳಿರುತ್ತವೆ ಈ ಎಲ್ಲಾ ಗೊಂದಲಗಳನ್ನು ಅತಿ ಸೂಕ್ಷ್ಮವಾಗಿ ಬಿಡಿಸಿ ನಮ್ಮ ಕಣ್ಣೆದುರಿತ್ತಿದ್ದಾರೆ ಲೇಖಕರು..

ಸಾಮಾನ್ಯರ ಪರ ಇರುವಂತಹ ದನಿ ಎಂತಹದ್ದು? ಇದು ಇಂದಿನ ರಾಜಕಾರಣಿಗಳು ಹಾಗೂ ಸಮಾಜ ಸುಧಾರಕರ ಭಾಷಣಗಳಲ್ಲಿ ಉದ್ಯೋಗ, ಸವಲತ್ತು, ಇತ್ಯಾದಿಗಳಿಂದ ಕೂಡಿದ್ದರೆ ಜೀವ ಪಲ್ಲಟಗಳ ಆತ್ಮಕಥನದಲ್ಲಿ ಸಾಮಾನ್ಯರ ಬವಣೆ ಯಾವ ಸ್ವರೂಪದಲ್ಲಿ ಇದೆ ಎಂಬುದನ್ನು ಹಾಗೂ ಇದಕ್ಕೆ ನಮ್ಮ ಪ್ರಭುತ್ವಗಳು ಹೇಗೆ ವರ್ತಿಸುತ್ತಿವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಚರ್ಚಿಸಿದ್ದಾರೆ. ಸೆಗಣಿ ಮಾರಿದರೆ ಪರಿಸರ ವಿರೋಧಿ, ಸಾಫ್ಟ್‌ವೇರ್ ಮಾರಿದರೆ? ಎಂಬುದರಲ್ಲಿ ಈ ಚರ್ಚೆ ಬಹಳ ಗಂಭೀರ ಸ್ವರೂಪದಲ್ಲಿ ಗ್ರಾಮೀಣ ಭಾಗದ ಜನರ ಉದ್ಯೋಗ ಜಾಗತೀಕರಣದ ಪ್ರಭಾವಕ್ಕೆ ಒಳಗಾಗುವುದರ ಮೂಲಕ ಹೇಗೆ ಆ ಉದ್ಯೋಗದ ಸ್ವರೂಪ ಬದಲಾಗುತ್ತದೆ ಎಂಬುದನ್ನು ಗಮನಿಸಬೇಕಾದದ್ದು.

ರಾಜಕೀಯದ ಕುರಿತು; ರಾಜಕೀಯ ಸಿದ್ದಾಂತಗಳು, ರಾಜಕೀಯ ಪಕ್ಷಗಳ ತಾತ್ವಿಕತೆ, ಜನರಲ್ಲಿ ಉಂಟುಮಾಡುವ ಅರಿವು ಎಂತಹದ್ದು ಎಂಬುದನ್ನು ಭಾ.ಜ.ಪ. ಹಾಗೂ ಸಂಘ ಪರಿವಾರದ ಹಿನ್ನೆಲೆಯನ್ನು ಹೇಳುತ್ತಾ ವಿವರಿಸುವ ಅನೇಕ ವಿಷಯಗಳು ಈ ಹೊತ್ತಿಗೆಯಲ್ಲಿವೆ. ಬ್ಯೂರೊಕ್ರಸಿಯ ಅವ್ಯವಸ್ಥೆ ಅವುಗಳ ಕಾರ್ಯತಂತ್ರಗಳ ಅವೈಜ್ಞಾನಿಕತೆಗಳನ್ನು ಕುಮರಿ ಬೇಸಾಯ, ಕೈಸುಡುತ್ತಿರುವ ಕರೆಂಟಿಗೆ ಖಾಸಗೀಕರಣವೊಂದೇ ಮಾರ್ಗ, ಇವುಗಳಲ್ಲಿ ಜನರಿಗೆ ಉಪಯೋಗವಾಗದಂತಹ ಹಾಗೂ ಕಷ್ಟವಾಗುವಂತಹ ತೀರ್ಮಾನಗಳ ಬಗ್ಗೆ ತಿಳಿಸಿದ್ದಾರೆ. ಮುಖ್ಯವಾಗಿ ಪರಿಸರದ ಬಗೆಗಿನ ಹಾಗೂ ಸಾಮಾನ್ಯರ ಬಗೆಗಿನ ಸೂಕ್ಷನೋಟದ ಗ್ರಹಿಕೆ ಇವರಲ್ಲಿದೆ.

ಪರಿಸರವಾದ, ಪರಿಸರದ ಚಳವಳಿಗಳು ಇಂದಿನ ವ್ಯವಸ್ಥೆ ಯನ್ನು ಎದುರಿಸಲು ಯಾಕೆ ವಿಫಲವಾಗಿವೆ ಪ್ರತ್ಯೇಕವಾಗಿ ಕರ್ನಾಟಕದ ಪರಿಸರ ಚಳವಳಿಗಳು ಚಳವಳಿಯ ಸ್ವರೂಪ ಕಳೆದುಕೊಂಡಿರುವುದೇಕೆ ಎಂಬುದನ್ನು ಪ್ಲಾಚಿಮಡ ಹಾಗೂ ಪಾಕಿಸ್ತಾನದ ಪರಿಸರ ಚಳವಳಿಗಳೊಂದಿಗೆ ವಿವರಿಸುತ್ತಾರೆ.

ಬುಡಕಟ್ಟು ಜನರು, ರೈತರು, ಇವರಲ್ಲಿರುವ ಪರಿಸರ ಕಾಳಜಿ ಮತ್ತು ಇವರ ಮೇಲೆ ಹೊರಿಸಲಾಗುವಂತಹ ಪರಿಸರ ವಿರೋಧಿ ಆಪಾದನೆ ಕುರಿತೂ ಸಹ ವಿವರಿಸುತ್ತಾರೆ. ನಾವು ಕಳೆದುಕೊಳ್ಳುತ್ತಿರುವ ಜ್ಞಾನದ ಮಹತ್ವ ಅದೂ ಪರಿಸರದ ಬಗೆಗಿನ ಸಾಂಪ್ರದಾಯಿಕ ಜ್ಞಾನ ಅದರ ಬಗೆಗಿನ ಸಾಮಾನ್ಯರಿಗಿದ್ದ ಅರಿವು ಹಾಗೆಯೇ ಇಂದಿನ ವೈಜ್ಞಾನಿಕ ಆಧುನಿಕತೆಯ ಅವಾಂತರಗಳ ಕುರಿತು ಮುಗಿಲಿನ ಶಕುನದಲ್ಲಿ ಮಳೆಯ ಜಾತಕ ಎಂಬ ಪ್ರಬಂಧದಲ್ಲಿ ಹಲವಾರು ಉದಾಹರಣೆಗಳೊಂದಿಗೆ ಮಂಡಿಸಿದ್ದಾರೆ.

ಕೇವಲ ಗಿಡ ನೆಟ್ಟರೆ ಪರಿಸರ ಸಂರಕ್ಷಣೆಯಲ್ಲ, ಪರಿಸರ ನಮಗೆ ಕೊಟ್ಟಿರುವ ಬೆಟ್ಟ-ಗುಡ್ಡ, ಕಲ್ಲು, ಮಣ್ಣು ಸೇರಿದಂತೆ ಪ್ರತಿಯೊಂದನ್ನೂ ಸಂರಕ್ಷಿಸುವುದೇ ಪರಿಸರ ಸಂರಕ್ಷಣೆ ಎಂಬುದು ಇವರ ಮಾತಿನ ತಾತ್ಪರ್ಯ..

ಸರಕಾರದ ಯೋಜನೆಗಳು ಪರಿಸರದ ದೃಷ್ಟಿಯಲ್ಲಿ ಹೇಗೆ ವಿಫಲವಾಗಿವೆ ಹಾಗೂ ಅವುಗಳ ವಿಫಲತೆಗಳಿಗೆ ಕಾರಣಗಳೇನು ಎಂಬುದನ್ನು ಬಹಳ ವಾಸ್ತವವಾಗಿ ಹೇಳಿದ್ದಾರೆ. ಹಾಗೆಯೇ ನಮ್ಮ ದೇಶದ ಲೆಕ್ಕಪತ್ರಗಳ ಪಾಲನೆ ಮತ್ತು ಯೋಜನೆಗಳ ಅನುಷ್ಠಾನದಲ್ಲಿರುವ ವ್ಯತ್ಯಾಸಗಳನ್ನು ಲೆಕ್ಕಪತ್ರಗಳು ವರದಿಗಳು ಎಲ್ಲವೂ ಆಶಾದಾಯಕವಾಗಿದ್ದರೂ ವಾಸ್ತವದ ಸ್ಥಿತಿ ಭಯಭೀತಿಗೊಳಿಸುವಷ್ಟು ಹಾಳಾಗಿರುವುದನ್ನು ತಿಳಿಸುವ ಅನೇಕ ಉದಾಹರಣೆಗಳಿವೆ. ಸಾರಿಸ್ಕಾದ ಹುಲಿ ಸಂರಕ್ಷಣೆ ಯೋಜನೆ, ದೇಶದಲ್ಲಿನ ಪರಿಸರ ಸಂರಕ್ಷಣೆಯ ಅಂಗವಾಗಿ ಅರಣ್ಯ ಯೋಜನೆಗಳು ಮತ್ತು ಅನೇಕ ವರದಿಗಳಲ್ಲಿ ತುಂಬಾ ಆಶಾದಾಯಕವಾಗಿರುವ ಫಲಿತಾಂಶವನ್ನು ಕೊಡುವ ಸರಕಾರವನ್ನು ಮೋಸಮಾಡುವ ಬ್ಯೂರೋಕ್ರಸಿ ವ್ಯವಸ್ಥೆಯನ್ನು ವಿವರಿಸುತ್ತಾರೆ.

ಸರಕಾರದ ಯೋಜನೆಗಳ ಕುರಿತು ಜನರಲ್ಲಿರಬಹುದಾದ ಭ್ರಮಾಲೋಕವನ್ನು ಇವರ ಲೇಖನಗಳು ಒಡೆದು ನಮ್ಮನ್ನು ವಾಸ್ತವದ ಸ್ಥಿತಿಗೆ ತರುತ್ತವೆ. ಇನ್ನುಳಿದ ರಾಜಕೀಯ ಸಾಮಾಜಿಕ, ಶೈಕ್ಷಣಿಕ ಚಿಂತನೆಗಳು ಸಾಮಾನ್ಯರಲ್ಲಿ ಹುಟ್ಟಿಸಿರುವ ಅನೇಕ ಬಗೆಯ ದ್ವಂದ್ವಗಳಿಗೆ ಲೇಖಕರು ಉತ್ತರಿಸಿದ್ದಾರೆ.

ಜಾಗತೀಕರಣದ ಗಂಭೀರ ಸಮಸ್ಯೆಗಳು, ಸರಕಾರದ ರೀತಿ ನೀತಿಗಳ ದೃಷ್ಟಿಕೋನಗಳು, ಅನೇಕ ತತ್ವಗಳ ಹಿನ್ನೆಲೆಗಳು ಮತ್ತು ಇವುಗಳ ಉದ್ದೇಶ, ಕಾರ್ಯತಂತ್ರಗಳು ಸಾಮಾನ್ಯರಿಗೆ, ಬುಡಕಟ್ಟು ಜನರಿಗೆ, ರೈತರಿಗೆ, ಪರಿಸರಕ್ಕೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬ ವಾಸ್ತವವನ್ನು ಸರಳ ನಿರೂಪಣೆಯೊಂದಿಗೆ ತಿಳಿಸಿದ್ದಾರೆ

ಹಾಗೆಯೇ ಲೇಖಕರ ಸರಳ ಅಭಿವ್ಯಕ್ತಿ ಶೈಲಿಯಲ್ಲಿರುವ ಬರವಣಿಗೆಯ ವಿಷಯದ ಗಾಂಭೀರ್ಯತೆ ಹಾಗೂ ಬೆರೆತಿರುವ ಹಾಸ್ಯ ಓದುಗರಿಗೆ ಇಷ್ಟವಾಗುವಂತಿದೆ.

    ಟಿ.ಎಸ್. ವಿವೇಕಾನಂದ

Writer - ಆರ್. ಗೋಪಾಲಕೃಷ್ಣ.

contributor

Editor - ಆರ್. ಗೋಪಾಲಕೃಷ್ಣ.

contributor

Similar News