ಲೈಂಗಿಕ ಶಿಕ್ಷಣ

Update: 2017-12-09 12:59 GMT

ಭಾಗ 4

ಲೈಂಗಿಕ ದೌರ್ಜನ್ಯ, ವ್ಯಸನ ಅಥವಾ ಗೀಳು ಯಾವುದೇ ಆಗಲಿ, ವ್ಯಕ್ತಿಗಳ ವಿಷಯದಲ್ಲಿ ಬರಿಯ ದೇಹಕ್ಕೆ ಸಂಬಂಧಿಸಿರುವುದು ಮಾತ್ರವಲ್ಲದೇ ಶಾಶ್ವತವಾದ ಮಾನಸಿಕ ಮತ್ತು ಭಾವನಾತ್ಮಕ ವ್ಯಕ್ತಿತ್ವದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂಬುದನ್ನು ಎಂದಿಗೂ ಮರೆಯಲೇಬಾರದು.

►ಸುರಕ್ಷತೆಗೆ ಲೈಂಗಿಕ ಶಿಕ್ಷಣ

ಬೆಂಕಿ ಮತ್ತು ಮೊನಚಾದ ವಸ್ತುಗಳಿಂದ, ಎತ್ತರವಾದ ಅಥವಾ ಜಾರಿಕೆಯ ಸ್ಥಳದಲ್ಲಿ, ರಸ್ತೆಯಲ್ಲಿ ನಡೆಯುವಾಗ ಅಥವಾ ವಾಹನಗಳಲ್ಲಿ ಓಡಾಡುವ ಸಂದರ್ಭಗಳಲ್ಲಿ, ಅಪರಿಚಿತ ವ್ಯಕ್ತಿಗಳು ಕಳ್ಳತನ ಅಥವಾ ಮೋಸಗೊಳಿಸಲು ಬಂದಾಗ ಎಚ್ಚರಿಕೆಯನ್ನು ತೆಗೆದುಕೊಳ್ಳಲು ಮಕ್ಕಳಿಗೆ ಪಾಠ ಮಾಡಬೇಕಾದಂತೆ ಲೈಂಗಿಕತೆಯ ವಿಚಾರದಲ್ಲಿಯೂ ಕೂಡ ಮಕ್ಕಳಿಗೆ ಅಷ್ಟೇ ಸಹಜವಾಗಿ ಹೇಳಿಕೊಡುವ ಅಗತ್ಯವಿದೆ.

ಮಕ್ಕಳಿಗೆ ಲೈಂಗಿಕ ಶಿಕ್ಷಣದ ಮೊದಲ ಮತ್ತು ಮುಖ್ಯ ಉದ್ದೇಶವೇ ಎಳೆಯ ವಯಸ್ಸಿನಲ್ಲಿ ಲೈಂಗಿಕತೆಯ ಕಾರಣ ಮತ್ತು ಪರಿಣಾಮಗಳಿಂದ ತಮ್ಮನ್ನು ತಾವು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬುದೇ ಆಗಿದೆ. ಲೈಂಗಿಕತೆ ಅಥವಾ ಅದರಷ್ಟೇ ಸೂಕ್ಷ್ಮವಾದ ವಿಷಯವು ಯಾವುದೇ ಆಗಲಿ, ಜೈವಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ತೀವ್ರವಾದ ಪ್ರಭಾವವನ್ನು ಉಂಟುಮಾಡುವುದರಿಂದ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದಲೇ ವ್ಯಕ್ತಿಯ ಸಮಗ್ರ ಆರೋಗ್ಯಪೂರ್ಣವಾದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಮುಕ್ತ ಲೈಂಗಿಕ ತಿಳುವಳಿಕೆ ಬೇಕಾಗುತ್ತದೆ.

ಆ ಕಡೆ ಈ ಕಡೆ ನೋಡಿಕೊಂಡು ರಸ್ತೆ ದಾಟುವುದನ್ನು ಹೇಳಿಕೊಡುವ ಪೋಷಕರು ಮತ್ತು ಶಿಕ್ಷಕರು ಲೈಂಗಿಕತೆಯ ಬಗ್ಗೆ ತಿಳುವಳಿಕೆಯನ್ನು ಕೊಡುವುದರಲ್ಲಿ ಎಷ್ಟರಮಟ್ಟಿಗೆ ಎಡವುತ್ತಾರೆಂದರೆ, ತಮ್ಮದೇ ವಿಸರ್ಜನಾಂಗಗಳು ಅಥವಾ ಗುಪ್ತಾಂಗಗಳ ಬಗ್ಗೆ ತಿಳುವಳಿಕೆಯನ್ನು ಕೊಡದೇ ಹೋಗುತ್ತಾರೆ. ಅವರು ಅದರ ಬಗ್ಗೆ ತಿಳಿಸುವ ವೇಳೆಗೆ ಕೆಲವೊಮ್ಮೆ ತೀರಾ ತಡವಾಗಿ ಬಿಟ್ಟಿರುತ್ತದೆ. ಲೈಂಗಿಕ ದೌರ್ಜನ್ಯ, ವ್ಯಸನ ಅಥವಾ ಗೀಳು ಯಾವುದೇ ಆಗಲಿ, ವ್ಯಕ್ತಿಗಳ ವಿಷಯದಲ್ಲಿ ಬರಿಯ ದೇಹಕ್ಕೆ ಸಂಬಂಧಿಸಿರುವುದು ಮಾತ್ರವಲ್ಲದೇ ಶಾಶ್ವತವಾದ ಮಾನಸಿಕ ಮತ್ತು ಭಾವನಾತ್ಮಕ ವ್ಯಕ್ತಿತ್ವದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂಬುದನ್ನು ಎಂದಿಗೂ ಮರೆಯಲೇಬಾರದು.

ಭಾರತದಲ್ಲಿ ಶಿಕ್ಷಣ ಇಲಾಖೆ ಮತ್ತು ಸಾಮಾಜಿಕ ವ್ಯವಸ್ಥೆಯು ಹೊಂದಿರುವ ಮಡಿವಂತಿಕೆಯಿಂದಾಗಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವುದೇ ಇಲ್ಲ. ಆದರೆ ಗಂಭೀರ ಕ್ರಮಗಳನ್ನು ತೆಗೆದುಕೊಂಡಿರುವ ಅಮೆರಿಕದಂತಹ ದೇಶದಲ್ಲಿ ಅಲ್ಲಿನ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮಾಡಿರುವ ಸರ್ವೇಕ್ಷಣೆಯ ಪ್ರಕಾರ ಹದಿನೆಂಟರ ಪ್ರಾಯದೊಳಗಿನ ಮಕ್ಕಳಲ್ಲಿ ಆರರಲ್ಲಿ ಒಬ್ಬ ಹುಡುಗ, ನಾಲ್ಕರಲ್ಲಿ ಒಬ್ಬ ಹುಡುಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. ಮಕ್ಕಳಿಗೆ ಲೈಂಗಿಕ ದೌರ್ಜನ್ಯವನ್ನು ಎಸಗುವ ವ್ಯಕ್ತಿಗಳನ್ನು ತೀವ್ರವಾಗಿ ಮತ್ತು ಬಹುಬೇಗನೇ ವಿಚಾರಣೆಗೆ ಒಳಪಡಿಸಿ, ಸಾರ್ವಜನಿಕವಾಗಿ ನೇಣಿಗೇರಿಸುವಂತಹ ಇಸ್ಲಾಮಿಕ್ ದೇಶಗಳಲ್ಲೂ ಅಲ್ಲಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವರದಿಗಳಾಗುತ್ತವೆ. ಆದರೆ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತಾಡಲು ಅಥವಾ ತಿಳುವಳಿಕೆಯನ್ನು ನೀಡಲು ಮಡಿವಂತಿಕೆ ತೋರುವ ಭಾರತದಂತಹ ದೇಶದಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯಗಳು ಬಹುಪಾಲು ವರದಿಯಾಗುವುದೇ ಇಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ವರದಿಯಾದರೆಷ್ಟು ಬಿಟ್ಟರೆಷ್ಟು, ದೌರ್ಜನ್ಯವೆಸಗುವ ಅಪರಾಧಿಗೆ ಶಿಕ್ಷೆಯಾದರೆಷ್ಟು ಬಿಟ್ಟರೆಷ್ಟು; ನಮ್ಮ ಮಕ್ಕಳು ಲೈಂಗಿಕತೆಯ ಕಾರಣದಿಂದಾಗಿ ಬದುಕು ಮತ್ತು ಭವಿಷ್ಯಗಳನ್ನು ಹಾಳುಗೆಡವಿಕೊಳ್ಳಬಾರದು ಅಷ್ಟೇ.

ಇನ್ನೂ ಹೆದರಿಕೆಯ ವಿಷಯವನ್ನು ಗಮನಿಸಿ. ಅಮೆರಿಕೆಯ ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್ (ಎನ್.ಎಸ್.ಒ.ಪಿ.ಡಬ್ಲ್ಯು) ಪ್ರಕಾರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಮಾಡುವವರಲ್ಲಿ ಮಕ್ಕಳಿಗೆ ಅಪರಿಚಿತರು ಬರಿಯ ಶೇ.10ರಷ್ಟು. ಅವರಲ್ಲಿ ಲೈಂಗಿಕತೆಯ ದೌರ್ಜನ್ಯಕ್ಕೆ ಒಳಪಡಿಸುವವರು ಅವರದೇ ಓರಗೆಯ ಮಕ್ಕಳೇ ಶೇ.23ರಷ್ಟು ಇದ್ದಾರೆ. ನಮ್ಮ ಭಾರತದಲ್ಲಿ ಹೀಗಿರುವುದಿಲ್ಲ ಎಂದು ಭಾವಿಸಲಾಗುವುದಿಲ್ಲ. ಏಕೆಂದರೆ ಕಾನೂನು ಮತ್ತು ವ್ಯವಸ್ಥೆಯ ಗಮನಕ್ಕೆ ಬರದಂತೆ ಹೋಗುವ ಅನೇಕ ಪ್ರಕರಣಗಳು ನಮ್ಮ ಸುತ್ತಮುತ್ತ ಬೇಕಾದಷ್ಟು ನಡೆಯುತ್ತಿವೆ.

►ಮಕ್ಕಳೇ ಮಕ್ಕಳ ಲೈಂಗಿಕ ಶೋಷಕರಾಗುವರು:

ಮಕ್ಕಳೇ ತಮ್ಮ ಓರಗೆಯ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸುವುದು ಏನೇನೂ ಅಪರೂಪದ ಅಥವಾ ಅಪರಿಚಿತ ವಿಷಯವೇನೂ ಅಲ್ಲ. ಮಕ್ಕಳು ಪರಸ್ಪರ ಆಡಿಕೊಂಡು, ತುಂಬಾ ಮುಗ್ಧವಾಗಿಯೇ ಇರುತ್ತಾರೆ ಎಂದು ಈ ಯುಗದಲ್ಲಿಯೂ ಪೋಷಕರು ಮತ್ತು ಶಿಕ್ಷಕರು ಭಾವಿಸುವುದು ಮಾತ್ರ ವಿಚಿತ್ರವೇ ಸರಿ. ಮೆಟ್ಟಿಲುಗಳ ಕೆಳಗಿನ ಭಾಗಗಳಲ್ಲಿ, ಮನೆಯ ಸಂದಿಗೊಂದಿಗಳಲ್ಲಿ, ಗೋಡೆಗಳ ಮರೆಗಳಲ್ಲಿ, ಮನೆಯಾಟವಾಡುತ್ತಾ ಮೈಮರೆಯುವ ಮಕ್ಕಳು ಸೇರಿಕೊಂಡು ಬಾಗಿಲು ಹಾಕಿಕೊಂಡಿರುವ ಕೋಣೆಗಳಲ್ಲಿ ಆಟದ ಹೆಸರಿನಲ್ಲಿ ಒಂದು ಮಗು ಮತ್ತೊಂದು ಮಗುವಿಗೆ ಲೈಂಗಿಕತೆಯ ಅನುಭವವನ್ನು ನೀಡುವುದಿಲ್ಲ ಎಂದು ಭ್ರಮಿಸುವಷ್ಟು ಮಡಿವಂತಿಕೆಯ ಮುಗ್ಧತೆಯನ್ನು ಹೇರಿಕೊಳ್ಳುವುದು ಬೇಡ. ತಾನು ಎಲ್ಲೋ ಕಂಡ ಕಾಮುಕತೆಯ ದೃಶ್ಯವನ್ನು, ಪಟ್ಟ ಲೈಂಗಿಕ ಅನುಭವವನ್ನು, ಕುತೂಹಲದ ಚಿತ್ರಣವನ್ನು, ಅಕಸ್ಮಾತ್ ಆಗಿ ದೊರಕಿದ ಮಿಥುನದ ನೇರ ವೀಕ್ಷಣೆಯನ್ನು, ಕನಿಷ್ಠ ಪಕ್ಷ ತಾವು ರಸ್ತೆಯಲ್ಲಿ ನೋಡುವ ನಾಯಿಯೇ ಮೊದಲಾದ ಪ್ರಾಣಿಗಳ ಮಿಲನ ಕ್ರಿಯೆಯನ್ನು ಒಂದು ಮಗು ತನ್ನ ಓರಗೆಯ ಮತ್ತೊಂದು ಮಗುವಿನೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಹಂಚಿಕೊಳ್ಳದು ಎಂದು ಭಾವಿಸಿದ್ದೀರಾ? ಅಥವಾ ಇಬ್ಬರೂ ತಮ್ಮ ಅನುಭವಗಳನ್ನು, ಗಮನಿಸುವಿಕೆಗಳನ್ನು ಹಂಚಿಕೊಳ್ಳಲಾರರು ಎಂದುಕೊಂಡಿದ್ದೀರಾ? ನಾವೂ ನೋಡೋಣ ಎಂದು ಪ್ರಯೋಗ ಮಾಡಲಾರರು ಎಂದುಕೊಂಡಿದ್ದೀರಾ? ಈ ಲೇಖನವನ್ನು ಓದುವಾಗಲೇ ಹಲವರಿಗೆ ಲೈಂಗಿಕ ಕುತೂಹಲದ ಮತ್ತು ಅದನ್ನು ಗುಪ್ತವಾಗಿ ಹಂಚಿಕೊಳ್ಳುವ ಅಥವಾ ತಣಿಸಿಕೊಳ್ಳುವ ನೆನಪಿನ ಪುಟಗಳು ತೆರೆದುಕೊಂಡರೂ ಆಶ್ಚರ್ಯವಿಲ್ಲ.

ಒಂದು ಮಗು ತನ್ನ ಲೈಂಗಿಕ ಕುತೂಹಲವನ್ನು ಮತ್ತೊಂದು ಮಗುವಿನ ಜೊತೆಗೆ ಯಾವ ರೀತಿಯಲ್ಲಿ ಹಂಚಿಕೊಳ್ಳುವುದು ಎನ್ನುವುದು ಆ ಮಗುವಿನ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರಕ್ಕೇ ಬಿಟ್ಟದ್ದು. ಪೋಷಕರ ಮತ್ತು ಶಿಕ್ಷಕರ ಕಣ್ಣಳತೆಯನ್ನು ಮೀರಿ ಮಕ್ಕಳು ಎಲ್ಲೋ ಆಡುತ್ತಿದ್ದಾರೆ, ಪಕ್ಕದ ಮನೆಯ ಕಾಂಪೌಂಡಿನಲ್ಲೋ, ಅಲ್ಲೆಲ್ಲೋ ಮೈದಾನದಲ್ಲೋ, ಇನ್ನೆಲ್ಲೋ ಮರಳಿನ ರಾಶಿಯಲ್ಲಿ ಗುಪ್ಪೆ ಮಾಡಿಕೊಂಡೋ ಆಡುತ್ತಿದ್ದಾರೆ ಎಂದರೆ ಬರೀ ಆಟವನ್ನೇ ಆಡುತ್ತಿದ್ದಾರೆ ಎಂದು ಪ್ರತಿಶತ ನೆಮ್ಮದಿಯಾಗಿ ಇರಲು ಸಾಧ್ಯವೇ ಇಲ್ಲ. ಏಕೆಂದರೆ ಯಾವುದು ಅತ್ಯಂತ ಸಹಜವೋ, ನೈಸರ್ಗಿಕವೋ ಅಂತಹ ಲೈಂಗಿಕತೆಯನ್ನು ಮಡಿವಂತಿಕೆಯ ಪೂರ್ವಾಗ್ರಹದಿಂದ ಕೂಡಿಟ್ಟಿರುವ ಸಮಾಜದ ಮಕ್ಕಳು ಅವು. ನೆನಪಿರಲಿ, ಎಲ್ಲದರ ಅರಿವಿದ್ದು, ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಗೆ ಒಳಪಡದೇ ತಪ್ಪಿಸಿಕೊಳ್ಳಲು ಸಾಧ್ಯವಿರುವಂತಹ ಸಂದರ್ಭಗಳನ್ನು ಬಳಸಿಕೊಂಡು ಅದೆಷ್ಟು ಅನುಭವಿ ಹಿರಿಯರು ತಮ್ಮ ಕಾಮುಕತೆಯನ್ನು ಈಡೇರಿಸಿಕೊಳ್ಳಲು ಯತ್ನಿಸುವುದಿಲ್ಲ? ಇನ್ನು ಲೈಂಗಿಕತೆಯ ಕುತೂಹಲವು ಪುಟಿದೇಳುವ ಮುಗ್ಧ ಮಕ್ಕಳ ಕತೆ ಏನು?

►ಮಕ್ಕಳು ಯಾವಾಗಲೂ ಮುಗ್ಧರಲ್ಲ:

‘‘ನನಗೆ ನಿನ್ನ ಜೊತೆ ಹೀಗೆ ಆಟ ಆಡಕ್ಕೆ ಇಷ್ಟ. ನಿನಗೂ ಇದು ಇಷ್ಟ ಆಯ್ತೆ? ನೀನು ಯಾರಿಗಾದರೂ ನಾವು ಹೀಗೆ ಆಡುವುದನ್ನು ಹೇಳಿದರೆ ಅವರು ನಮಗೆ ಆಡಕ್ಕೆ ಬಿಡುವುದಿಲ್ಲ’’ ಎಂದೋ, ‘‘ಇದು ನಮ್ಮಿಬ್ಬರ ಮಧ್ಯೆ ಇರೋ ಸೀಕ್ರೆಟ್. ನೀನೇನಾದರೂ ಹೊರಗೆ ಅಪ್ಪ ಅಮ್ಮನಿಗೋ, ಟೀಚರ್ಗೋ ಹೇಳಿದರೆ ನೀನೇ ಇದನ್ನು ನನ್ನ ಮೇಲೆ ಮಾಡಿದ್ದು ಅಂತ ಹೇಳಿಬಿಡ್ತೀನಿ’’ ಎಂದೋ, ‘‘ಗಾಡ್ ಪ್ರಾಮಿಸ್, ಮದರ್ ಪ್ರಾಮಿಸ್ ಯಾರಿಗೂ ಹೇಳಬಾರದು’’ ಎಂದೋ, ಶಾಲೆಯ ಬಸ್‌ಗಳಲ್ಲಿ, ತರಗತಿಗಳಲ್ಲಿ, ಹಿತ್ತಲುಗಳಲ್ಲಿ, ಕ್ಯಾಂಪುಗಳಿಗೆಂದು ಹೋದಾಗ ಎಲ್ಲೆಲ್ಲೋ ಮಲಗಿಕೊಂಡಲ್ಲಿ, ಆಟದ ಮೈದಾನಗಳಲ್ಲಿ, ಶಾಲೆಯಿಂದ ಬರುವಾಗ ಎಲ್ಲೋ ನಿಲ್ಲುವ ನಿರ್ಜನಪ್ರದೇಶಗಳಲ್ಲಿ; ಮಕ್ಕಳೇ ತಮ್ಮ ಓರಗೆಯ ಮಕ್ಕಳೊಂದಿಗೆ ತಮ್ಮ ಲೈಂಗಿಕತೆಯ ಕುತೂಹಲವನ್ನು ಹಂಚಿಕೊಳ್ಳುವಂತಹ ಕ್ರಿಯೆಯನ್ನು ಲೈಂಗಿಕ ದೌರ್ಜನ್ಯವೆಂದು ನಾನು ಕರೆಯಲಾರೆ. ಆದರೆ ಅವುಗಳು ಎಡವಟ್ಟುಗಳಾಗಿ ಮುಂದೆ ಲೈಂಗಿಕ ದೌರ್ಜನ್ಯಗಳಿಗೆ ಕಾರಣವಾಗುವುದನ್ನು ಮಾತ್ರ ಅಲ್ಲಗಳೆಯಲಾರೆ. ಯಾವ ಮಗು ಈ ಲೈಂಗಿಕ ಕುತೂಹಲವನ್ನು ಪ್ರಕಟಿಸಲು ಅಥವಾ ಹಂಚಿಕೊಳ್ಳಲು ಮುಂದಾಳತ್ವ ತೆಗೆದುಕೊಳ್ಳುತ್ತದೆ ಎಂಬುದೋ, ಯಾವ ಮಗುವು ತನ್ನ ಕುತೂಹಲವನ್ನು ಅದುಮಿಟ್ಟುಕೊಳ್ಳಲಾಗದೇ ಅನುಸರಿಬಿಡುತ್ತದೋ, ಮುಗ್ಧರಂತೆ ನಟಿಸುತ್ತಾ ಪರಸ್ಪರ ಪ್ರೇರೇಪಿಸಿಕೊಂಡು, ಪ್ರಚೋದಿಸಿಕೊಂಡು ಲೈಂಗಿಕಾನುಭವ ಪಡೆದು, ಮತ್ತೆ ಅದೇ ಮುಗ್ಧತೆಯನ್ನು ನಟಿಸಿಕೊಂಡೇ ಏನೂ ಆಗದಿರುವಂತೆ ಸುಮ್ಮನಿದ್ದು ಬಿಡುತ್ತಾರೋ; ಇದಲ್ಲ ವಿಷಯ. ಅವರು ಹೀಗೆ ವರ್ತಿಸಲು ಕಾರಣವೇ ಅನಗತ್ಯ ಮತ್ತು ಡಾಂಭಿಕ ಮಡಿವಂತಿಕೆಯ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರ.ಡಾಂಭಿಕ ಶೀಲದ ಪರಿಕಲ್ಪನೆ ದೊಡ್ಡವರ ಪರಿಸರದಲ್ಲಿರುವಂತೆ, ಮುಗ್ಧತೆಯ ನಟನೆಯು ಮಕ್ಕಳ ಪರಿಸರದಲ್ಲಿರುತ್ತದೆ. ಇಲ್ಲಿ ನಿರ್ವಂಚನೆಯಿಂದ ಒಪ್ಪಿಕೊಳ್ಳಬೇಕಾಗಿರುವ ವಿಷಯವೆಂದರೆ, ದೊಡ್ಡವರ ಡಾಂಭಿಕ ಶೀಲದ ಪರಿಕಲ್ಪನೆಯೇ ಮಕ್ಕಳ ಮುಗ್ಧತೆಯ ನಟನೆಗೆ ಕಾರಣವೆಂಬುದು.

►ಲೈಂಗಿಕ ಸುರಕ್ಷತೆಯ ಕ್ರಮಗಳು

ದೊಡ್ಡವರಾಗಲಿ, ನೆಂಟರು, ಸಂಬಂಧಿಗಳಾಗಲಿ, ಶಿಕ್ಷಕರಾಗಲಿ, ಕೋಚ್‌ಗಳಾಗಲಿ, ಮಕ್ಕಳಲ್ಲಿ ಮಕ್ಕಳೇ ಆಗಲಿ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುವುದನ್ನಾಗಲಿ, ಬಲಿಪಶುಗಳಾಗುವುದನ್ನಾಗಲಿ ತಪ್ಪಿಸಬೇಕೆಂದರೆ ಅಪ್ಪ, ಅಮ್ಮ ಅಥವಾ ಮನೆಯ ಕುಟುಂಬದ ಆಪ್ತ ಸದಸ್ಯರು ಮಕ್ಕಳಿಗೆ ಲೈಂಗಿಕ ತಿಳುವಳಿಕೆ ಕೊಡಬೇಕಾಗುತ್ತದೆ. ಇದಕ್ಕೆ ಮಾಡಬೇಕಾಗಿರುವುದೇನೆಂದರೆ,

1.ಎಳೆಯ ಮಕ್ಕಳೊಂದಿಗೇ ಅವರ ದೇಹದ ಎಲ್ಲಾ ಅಂಗಗಳ ಬಗ್ಗೆ ಮುಕ್ತವಾಗಿ ಮಾತಾಡಿ. ಆಯಾ ಅಂಗಗಳನ್ನು ಆಯಾ ಹೆಸರುಗಳೊಂದಿಗೇ ಗುರುತಿಸುವುದನ್ನು ಹೇಳಿಕೊಡಿ. ಅವರಿಗೆ ಅದರ ಬಗ್ಗೆ ಏನೇ ಪ್ರಶ್ನೆ ಬಂದರೂ ಕೇಳಲು ಬಿಡಿ. ದೇಹದ ಅಂಗಗಳ ಹೆಸರುಗಳನ್ನು ಹೇಳುವಾಗ ಕಿಸಿಯದೇ, ಪೆಕ್ರುಪೆಕ್ರಾಗಿ ಅಡ್ಡ ಹೆಸರುಗಳಲ್ಲಿ ತೇಲಿಸದೇ ಸಭ್ಯವಾಗಿ ಹೇಳಿ.

2.ದೇಹದ ಕೆಲವು ಅಂಗಗಳು ಅಪ್ರದರ್ಶಕವಾಗಿರುವವು ಎಂಬುದನ್ನು ತಿಳಿಸಿ. ಖಾಸಗಿತನಕ್ಕೆ ಒಳಪಟ್ಟಿರುವ ಅಂಗಗಳ ಬಗ್ಗೆ ಸ್ಪಷ್ಟಗೊಳಿಸಿ. ಪ್ರೈವೇಟ್ ಪಾರ್ಟ್ಸ್ ಎಂಬುದರ ಬಗ್ಗೆ ಅರಿವಿರಲಿ. ಆದರೆ ಅದು ಖಾಸಗಿಯೇ ಹೊರತು ರಹಸ್ಯವೇನಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ. ಅವರ ದೇಹದ ಖಾಸಗೀ ಅಂಗಗಳ ಬಗ್ಗೆ ಖಾಸಗಿತನದಲ್ಲಿ ಕರ್ತವ್ಯ ಮತ್ತು ಹಕ್ಕುಗಳನ್ನು ಹೊಂದಿರುವ ತಂದೆ, ತಾಯಿ, ಒಡಹುಟ್ಟುಗಳೊಡನೆ ಮುಕ್ತವಾಗಿ ಮಾತಾಡಲು ಅರಿವು ಮೂಡಿಸಿ.

3.ಹೊರಗಿನವರು ಎಷ್ಟರ ಮಟ್ಟಿಗೆ ತಮ್ಮ ಭೌತಿಕ ವಲಯದಲ್ಲಿ ಪ್ರವೇಶಿಸಬಹುದು ಎಂಬುದನ್ನು ಹೇಳಿಕೊಡಿ. ದೇಹದ ಯಾವ ಭಾಗವನ್ನು ಅವರು ಮುಟ್ಟಬಹುದು. ಯಾವುದನ್ನು ಮುಟ್ಟಬಾರದು ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿಕೊಡಿ.

4.ಮಕ್ಕಳು ತಮ್ಮ ಲೈಂಗಿಕತೆಯ ವಿಷಯದಲ್ಲಿ ರಹಸ್ಯವನ್ನು ಕಾಪಾಡಿಕೊಂಡಿರುವುದು ಬೇಡ ಎಂಬುದನ್ನು ಸ್ಪಷ್ಟಪಡಿಸಬೇಕಾದರೆ, ಪೋಷಕರು ಅದರ ಬಗ್ಗೆ ನಕಾರಾತ್ಮಕವಾದ ಅಥವಾ ಗಾಬರಿಪಡಿಸುವಂತೆ ಅಥವಾ ತಾವೇ ಗಾಬರಿಗೊಳ್ಳುವಂತಹ ಧೋರಣೆಗಳನ್ನು ಹೊಂದಿರಬಾರದು. ಎಂದಿಗೂ ತಮ್ಮ ಲೈಂಗಿಕ ವಿಚಾರದಲ್ಲಿ ಏನೇ ಸಮಸ್ಯೆ ಅಥವಾ ಅನಪೇಕ್ಷಿತವಾದ ಅನುಭವವಾದರೆ ತಮ್ಮ ಬಳಿ ಹೇಳಿಕೊಳ್ಳಬೇಕೆಂದು ಮನವೊಲಿಸಿ. ಯಾವ ಪ್ರಾಮಿಸ್ ಅಥವಾ ದೇವರ ಭಯ ಎಂಥದ್ದೂ ಹಾಕಿದ್ದರೂ ಏನೂ ಪರವಾಗಿಲ್ಲ. ಮಕ್ಕಳು ಪೋಷಕರೊಡನೆ ತಮ್ಮ ಲೈಂಗಿಕತೆಯ ವಿಷಯವನ್ನು ಹೇಳಲೇಬೇಕು ಎಂಬುದನ್ನು ಮನವೊಲಿಸಿ.

5.ಮಗುವಿನ ಒಳ ಉಡುಪುಗಳಲ್ಲಿ ಕೈ ಹಾಕುವುದು, ಹಿಂಬದಿಯನ್ನು ಮುಟ್ಟುವುದು, ಯಾವುದೇ ನೆಪದಲ್ಲಿ ಗುಪ್ತಾಂಗವನ್ನು ತೋರಿಸು ಎಂದು ಹೇಳಿ ಅದರ ಫೋಟೊ ತೆಗೆದುಕೊಳ್ಳುವುದು ಇತ್ಯಾದಿಗಳನ್ನು ಮಾಡಿದರೆ ಕೂಡಲೇ ಪ್ರತಿಭಟಿಸುವುದು ಮಾತ್ರವಲ್ಲದೇ ಪೋಷಕರಿಗೆ, ಶಿಕ್ಷಕರಿಗೆ ಅಥವಾ ಯಾವುದೇ ರಕ್ಷಕರೆನಿಸುವ ಹಿರಿಯರಿಗೆ ಹೇಳುವುದನ್ನು ಕಲಿಸಿ.

6.ಮಕ್ಕಳು ತಮ್ಮ ಓರಗೆಯ ಮಕ್ಕಳಾಗಲಿ, ದೊಡ್ಡವರಾಗಲಿ ಅಹಿತಕರವಾದಂತಹ ಅಥವಾ ರಹಸ್ಯಕರವಾಗಿ ವರ್ತಿಸುತ್ತಿದ್ದಾರೆ ಎಂದಾಗ ಅದರಿಂದ ಹೊರಗೆ ಬರುವುದನ್ನು, ಪ್ರತಿಭಟಿಸುವುದನ್ನು ಹೇಳಿಕೊಡಿ. ಖಾಸಗಿತನವನ್ನು ರಹಸ್ಯಮಯವಾಗಿಡುವ ಸುಳಿಹುಗಳು ಸಿಗುವಾಗ ಅದರಿಂದ ತಪ್ಪಿಸಿಕೊಳ್ಳುವುದನ್ನು ಹೇಳಿಕೊಡಿ. ಆಪ್ತರೂ ಮತ್ತು ಕುಟುಂಬದವರೂ ಆಗಿರುವ ವ್ಯಕ್ತಿಗಳಿಂದಲೂ ಮುಚ್ಚಿಡುವಂತಹ ಯಾವುದೇ ರಹಸ್ಯಗಳನ್ನು ಹೊಂದಬಾರದು ಎಂಬುದರ ಬಗ್ಗೆ ಸ್ಪಷ್ಟವಾಗಿ ಅರಿವನ್ನು ನೀಡಿರಬೇಕು. 7.ಮಕ್ಕಳು ತಮ್ಮ ಹಿರಿಯರು ಅಥವಾ ಶಿಕ್ಷಕರೊಡನೆ ಎಲ್ಲರ ಮುಂದೆ ಹೇಳಲು ಸಾಧ್ಯವಾಗದೇ ಇದ್ದಾಗ, ತಾವು ಅಸುರಕ್ಷಿತ ಭಾವವನ್ನು ಹೊಂದಿದ್ದರೆ, ಅಥವಾ ಅಂತಹ ಸನ್ನಿವೇಶ ಅಥವಾ ದೃಶ್ಯವನ್ನು ನೋಡಿದರೆ, ಪ್ರತ್ಯೇಕವಾಗಿ ಕರೆದು ಹೇಳಲು ಸಂಕೇತ ವಾಕ್ಯ ಅಥವಾ ಪದ (ಕೋಡ್‌ವರ್ಡ್) ಹೇಳಿಕೊಟ್ಟಿರಬೇಕು.

8.ಎಂದೆಂದಿಗೂ ನಮ್ಮಂದಿಗೆ ತಮ್ಮ ಲೈಂಗಿಕ ವಿಷಯ ಅಥವಾ ಸಮಸ್ಯೆಯನ್ನು ಹೇಳಿಕೊಳ್ಳಲು ಮುಜುಗರ ಪಡಬಾರದು ಮತ್ತು ಅದಕ್ಕೆ ಎಂದಿಗೂ ನಾವು ನಕಾರಾತ್ಮಕವಾಗಿ ಆಕ್ರಮಣಕಾರಿಯಾಗಿ ವರ್ತಿಸುವುದಿಲ್ಲ ಎಂದು ಅವರಿಗೆ ಭರವಸೆ ಕೊಟ್ಟಿರಬೇಕು. ಹಾಗೆಯೇ ಆ ಮಾತನ್ನು ಎಂದಿಗೂ ಮರೆಯಬಾರದು. ನೆನಪಿಡಿ, ಪೋಷಕರ ಧೋರಣೆಯ ಮತ್ತು ಆಕ್ರಮಣದ ಭಯದಿಂದಲೇ ಬಹಳಷ್ಟು ಮಕ್ಕಳು ತಮ್ಮ ಇನ್ಯಾರೋ ಸ್ನೇಹಿತರ ಬಳಿ ಲೈಂಗಿಕತೆಯ ಕುತೂಹಲವನ್ನು ಮತ್ತು ಸಮಸ್ಯೆಯನ್ನು ಹಂಚಿಕೊಳ್ಳಲು ಮುಂದಾಗುತ್ತಾರೆಯೇ ಹೊರತು ಕುಟುಂಬದವರೊಂದಿಗೆ ಅಲ್ಲ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News