ಡಿ.17 ರಂದು ತುಳು ಉತ್ಸವ, ಸಾಹಿತ್ಯ ಸಮ್ಮೇಳನ

Update: 2017-12-09 18:03 GMT

ಬೆಂಗಳೂರು, ಡಿ.9: ತುಳುಕೂಟ ವತಿಯಿಂದ ಡಿ.17ರಂದು ವಿಜಯನಗರ ದಲ್ಲಿರುವ ಬಂಟರ ಸಂಘದ ಆವರಣದಲ್ಲಿ ತುಳು ಉತ್ಸವ ಹಾಗೂ ತುಳು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತುಳು ಕೂಟದ ಅಧ್ಯಕ್ಷ ಜಯರಾಮ ಸೂಡ ತಿಳಿಸಿದ್ದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನೆಲೆಸಿರುವ ತುಳು ಸಮುದಾಯ ಒಗ್ಗೂಡಿಸುವುದು ಹಾಗೂ ಯುವ ಸಮುದಾಯಕ್ಕೆ ತುಳು ಸಾಹಿತ್ಯ ಮತ್ತು ಸಂಸ್ಕೃತಿ ಪರಿಚಯಿಸುವ ಉದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಡಿ.17ರಂದು ಬೆಳಗ್ಗೆ 8 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಸಚಿವರು, ತುಳು ಸಮುದಾಯ ಮುಖಂಡರು, ವಿದೇಶಿ ತುಳು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 5 ಮಂದಿ ತುಳು ಸಾಧಕರಿಗೆ ‘ತೌಳವ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಹಿತ್ಯ ಕ್ಷೇತ್ರದಲ್ಲಿ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರಿ, ಕಾನೂನು ಕ್ಷೇತ್ರದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಸಿನಿಮಾ ಕ್ಷೇತ್ರದಲ್ಲಿ ವಿ.ಮನೋಹರ್, ಕ್ರೀಡೆಯಲ್ಲಿ ಮಮತಾ ಪೂಜಾರಿ ಹಾಗೂ ಹೊರನಾಡು ತುಳುವ ಸರ್ವೋತ್ತಮ ಶೆಟ್ಟಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುವುದಾಗಿ ಅವರು ತಿಳಿಸಿದರು.

ಇದರ ಜೊತೆಗೆ ತುಳು ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಮಹಿಳಾ ಹಾಗೂ ಯುವ ಕವಿ ಗೋಷ್ಠಿಗಳು ನಡೆಯಲಿವೆ. ಸಾಹಿತಿಗಳಾದ ಡಾ.ಚಿನ್ನಪ್ಪಗೌಡ, ಡಾ.ಎ.ವಿ.ನಾವುಡ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ.ಪದ್ಮನಾಭ ಕೇಕುಣ್ಣಾಯ ಸೇರಿದಂತೆ ಹಲವು ತುಳು ಸಾಹಿತಿ, ಲೇಖಕರು, ಕವಿಗಳು, ಬರಹಗಾರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ವಿಚಾರವಾಗಿ ಚರ್ಚಾಗೋಷ್ಠಿ ನಡೆಯಲಿದೆ. ಸಾಹಿತಿ ಡಾ.ಬಿ.ಎ.ವಿವೇಕರೈ ಅವರು ಈ ಗೋಷ್ಠಿ ನಡೆಸಿಕೊಡಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಅಂತೆಯೆ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ ಎಂದರು.

ಸುಮಾರು 2 ಸಾವಿರ ಇತಿಹಾಸ ಹೊಂದಿರುವ ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕನ ಹೆಸರಿಡಬೇಕು. ವಿಜಯನಗರ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಡಾ.ಕಯ್ಯೆರ ಕಿಜ್ಞಣ್ಣರೈ ಹೆಸರಿಡಬೇಕು. ತುಳು ಕೂಟಕ್ಕೆ ಸ್ವಂತ ಕಟ್ಟಡ ಕಟ್ಟಲು ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ಡಾ.ಉದಯ ಧರ್ಮಸ್ಥಳ, ಬಿಬಿಎಂಪಿ ಸದಸ್ಯ ಕೆ.ವಿ.ರಾಜೇಂದ್ರ ಕುಮಾರ್, ಕಾಂತಿ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News