ಜನ್ಮದಿನಗಳಂದು ಗಿಡ ನೆಡಿ: ಶಾಸಕ ಹ್ಯಾರಿಸ್

Update: 2017-12-10 12:33 GMT

ಬೆಂಗಳೂರು, ಡಿ.10: ಜನ್ಮದಿನಾಚರಣೆ ದಿನದಂದು ಅನಗತ್ಯ ಖರ್ಚು ಮಾಡುವುದರ ಬದಲಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಸಲುವಾಗಿ ಒಂದು ಗಿಡ ನೆಟ್ಟು, ಅದನ್ನು ಪೋಷಣೆ ಮಾಡಿ ಎಂದು ಶಾಸಕ ಎನ್.ಎ.ಹ್ಯಾರಿಸ್ ಅಭಿಪ್ರಾಯಿಸಿದ್ದಾರೆ.

ನಗರದ ಗುಡ್ ಶೆಪರ್ಡ್ ಹಾಲ್‌ನಲ್ಲಿ ನಡೆದ ಪ್ಲಾಸ್ಟಿಕ್ ದುಷ್ಪಾರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಭೂಮಿಯನ್ನು ಉಳಿಸಲು ಪರಿಸರ ಸಂರಕ್ಷಿಸಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಮರ ಗಿಡಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕುರ್ಚಿ, ಮೈಕ್ ನಿಂದ ಹಿಡಿದು ದೈನಂದಿನ ಅಗತ್ಯ ವಸ್ತುಗಳೆಲ್ಲವೂ ಪ್ಲಾಸ್ಟಿಕ್ ಮಯವಾಗಿದೆ. ಪ್ಲಾಸ್ಟಿಕ್ ಅನ್ನು ಹೇಗೆ ಪುನರ್ಬಳಕೆ ಮಾಡಬಹುದು ಎಂಬ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಜನ್ಮದಿನದಂದು ಒಂದು ಗಿಡ ನೆಟ್ಟು, ಅದರ ಪಾಲನೆ, ಪೋಷಣೆಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪ್ಲಾಸ್ಟಿಕ್ ಉತ್ಪಾದನೆಯಿಂದ ಹಿಡಿದು ವೀಲೇವಾರಿವರೆಗಿನ ಎಲ್ಲ ಘಟ್ಟಗಳಲ್ಲಿ ಪರಿಸರಕ್ಕೆ ಹಾನಿಕಾರಕವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಹಿತಮಿತ ಬಳಕೆಯ ಜತೆಗೆ ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಒತ್ತು ನೀಡಲು ಜನರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಸಿಂಕ್ ಯು ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಸಂಸ್ಥಾಪಕ ಜೇಮ್ಸ್ ನವೀನ್ ಮಾತನಾಡಿ, ಫೇಸ್‌ಬುಕ್, ವಾಟ್ಸ್ ಆ್ಯಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ತಮ್ಮ ಸಂಸ್ಥೆಯು ಒಂದು ಹೊಸ ಆ್ಯಪ್ ಸಿದ್ಧಪಡಿಸಿದ್ದು ಅದರ ಮೂಲಕ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪಿ.ಒ.ಥಾಮಸ್, ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಸಕ್ರಿಯವಾಗಿ ಪಾಲ್ಗೊಂಡಿದ್ದ ಸ್ವಯಂ ಸೇವಕರಿಗೆ ಮೆಚ್ಚುಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News