ಶಿವಮೊಗ್ಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2017-12-10 13:03 GMT

ಬೆಂಗಳೂರು, ಡಿ.10: ಶಿವಮೊಗ್ಗ ಜಿಲ್ಲೆಯ ಕೊಟೆಗಂಗೂರಿನ ದೇವಕಾತಿಕೊಪ್ಪ ಗ್ರಾಮ ಹಾಗೂ ಸುತ್ತಮುತ್ತ ಹಲವು ಕಂಪೆನಿಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆ ಘಟಕ ನಿರ್ವಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸಿದ್ದೇಶಪ್ಪ ಸೇರಿ ದೇವಕಾತಿಕೊಪ್ಪ ಗ್ರಾಮದ ಇತರ ಏಳು ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಿಕಾ ಸ್ಟೋನ್ ಕ್ರಷರ್ ಹಾಗು ಇತರೆ ಕಲ್ಲು ಗಣಿಗಾರಿಕೆ ಘಟಕಗಳನ್ನು ನಡೆಸುತ್ತಿರುವ ಇತರೆ 15 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ.

ದೇವಕಾತಿ ಕೊಪ್ಪ ಗ್ರಾಮ, ಬಸವೇಶ್ವನಗರ, ಭೂತನಂಗಡಿ, ಅಂಬೇಡ್ಕರ್ ನಗರದ ಸುತ್ತಮುತ್ತ ಸುಮಾರು 16 ಕಂಪೆನಿಗಳು ಕಲ್ಲು ಗಣಿಗಕಾರಿಕೆ ಚಟುವಟಿಕೆಗಳನ್ನು ನಡೆಸುತ್ತಿವೆ. ಆದರೆ, ಇವುಗಳ ಪರವಾನಿಗೆ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಹೀಗಿದ್ದರೂ ಕಂಪನಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿವೆ. ಪರಿಣಾಮ ಗ್ರಾಮದಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ಉಂಟಾಗಿ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ಗಣಿಗಾರಿಕೆಯಿಂದಾಗಿ ಶಬ್ದ ಮಾಲಿನ್ಯದಿಂದ ಮಕ್ಕಳ ವ್ಯಾಸಂಗಕ್ಕೂ ತೊಂದರೆಯಾಗಿದೆ. ನೀರು ಸಹ ಮಾಲಿನ್ಯವಾಗಿದ್ದು, ವ್ಯವಸಾಯ ಚಟುವಟಿಕೆಗಳನ್ನು ನಡೆಸಲಾಗುತ್ತಿಲ್ಲ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಸಮೀಪದ ಶೆಟ್ಟಿಹಳ್ಳಿ ಮತ್ತು ಹಲಿ ಸಂರಕ್ಷಿತ ಅರಣ್ಯ ಪ್ರದೇಶದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಆದ್ದರಿಂದ ದೇವಕಾತಿಕೊಪ್ಪ, ಜತಕಮ್ಮ ಲೇಔಟ್, ಬಸವೇಶ್ವರ ನಗರ, ಭೂತನಂಗಡಿ ಮತ್ತು ಅಂಬೇಡ್ಕರ್ ನಗರದ ಸುತ್ತಮುತ್ತಲಿನ ಕಲ್ಲು ಗಣಿಗಾರಿಕೆ ಘಟಕಗಳನ್ನು ಸ್ಥಗಿತಗೊಳಿಸಲು ಸರಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News