ನಗರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಕೇಂದ್ರ ಸಚಿವ ಅನಂತಕುಮಾರ್

Update: 2017-12-10 13:19 GMT

ಬೆಂಗಳೂರು, ಡಿ. 10: ಹಾಡುಹಗಲೇ ಮಾಜಿ ಕಾರ್ಪೋರೇಟರ್‌ವೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಕೃತ್ಯ ನಡೆದಿದ್ದು, ಚಂಬಲ್ ಕಣಿವೆಯಲ್ಲಿ ಅಲ್ಲ, ಬದಲಿಗೆ ಸಿಲಿಕಾನ್ ಸಿಟಿಯಲ್ಲಿ. ಇಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಟೀಕಿಸಿದ್ದಾರೆ.

ರವಿವಾರ ಇಲ್ಲಿನ ಜೆ.ಪಿ.ನಗರದ ಆರ್‌ಬಿಐ ಮೈದಾನದಲ್ಲಿ ಏರ್ಪಡಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉದ್ಯಾನನಗರಿ ಬೆಂಗಳೂರಿನಲ್ಲಿ ಚಾಕು, ಚೂರಿ, ಮಚ್ಚು, ರಿವಾಲ್ವರ್‌ಗಳ ಹಾವಳಿ ಹೆಚ್ಚಿದೆ. ಜನತೆ ಜೀವ ಭಯದಲ್ಲಿದ್ದಾರೆ ಎಂದರು.

ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳು ಮಿತಿ ಮೀರಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಪರಾಧ ತಡೆಗಟ್ಟುವ ಕನಸು ಬೀಳುವುದಿಲ್ಲ. ಬದಲಿಗೆ ಸ್ಟೀಲ್ ಬ್ರಿಡ್ಜ್, ಸಚಿವ ಜಾರ್ಜ್, ಮರಳು ಕಳ್ಳ ಸಾಗಣೆ, ಮೇಟಿಯ ಕಲರ್ ಫುಲ್ ಕನಸುಗಳಷ್ಟೇ ಬೀಳುತ್ತವೆ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪಈಗಾಗಲೇ ಎರಡು ಬಾರಿ ಸಿಎಂ ಆಗಿದ್ದಾರೆ. ಪರಿವರ್ತನಾ ಯಾತ್ರೆ ನೋಡಿದರೆ ಹ್ಯಾಟ್ರಿಕ್ ನಿಶ್ಚಿತ ಎಂದ ಅವರು, ಆರು ಕ್ಷೇತ್ರದ ಸಮಾವೇಶ, ಇಲ್ಲಿನ ಜನ ಕಂಡು ಸಂತೋಷವಾಗಿದೆ. 30 ದಿನದಲ್ಲಿ 77 ತಾಲೂಕಿನಲ್ಲಿ ಸಮಾವೇಶ ನಡೆಯುತ್ತಿದೆ ಎಂದರು.

ದೇಶದಲ್ಲಿ ಬಂದ ಪರಿವರ್ತನೆ ಕರ್ನಾಟಕ ರಾಜ್ಯದಲ್ಲಿಯೂ ಬರಬೇಕು. ಅದಕ್ಕೆ ಬೆಂಗಳೂರಿನ 25 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಯಡಿಯೂರಪ್ಪ ಮಡಿಲಿಗೆ ಹಾಕಬೇಕು. ಉಳಿದ 125 ಸ್ಥಾನಗಳನ್ನು ಚಾಮರಾಜನಗರದಿಂದ ಬೀದರ್‌ವರೆಗೆ ಗೆಲ್ಲುವ ಸಂಕಲ್ಪಮಾಡಬೇಕು ಎಂದು ಕರೆ ನೀಡಿದರು.

‘ಬಿಜೆಪಿ ಪಕ್ಷವನ್ನು ಜೈಲು ಪಾರ್ಟಿ ಎಂದು ಕರೆದಿರುವ ಸಿಎಂ ಸಿದ್ದರಾಮಯ್ಯನವರಿಗೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ, ಅವರನ್ನು ಎಲ್ಲಿಗೆ ಕಳುಹಿಸಬೇಕು ಎನ್ನುವುದು ಗೊತ್ತಿದೆ. ಎಸಿಬಿ, ಸಿಒಡಿ ದುರ್ಬಳಕೆ ಮಾಡಿಕೊಂಡು ಎಲ್ಲ ಪ್ರಕರಣಗಳ ಕ್ಲೀನ್‌ಚಿಟ್ ಪಡೆಯಲಾಗುತ್ತಿದೆ. ಆ ಎಲ್ಲ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಿ ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇವೆ’

-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News