ಪ್ರಜಾಪ್ರಭುತ್ವ ದೇಶಗಳಲ್ಲಿ ಸರ್ವಾಧಿಕಾರಿಗಳ ಮೇಲುಗೈ: ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆತಂಕ

Update: 2017-12-10 14:09 GMT

 ಬೆಂಗಳೂರು, ಡಿ.10: ಭಾರತವೂ ಸೇರಿದಂತೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸರ್ವಾಧಿಕಾರಿಗಳು ಮೇಲುಗೈ ಸಾಧಿಸುತ್ತಿರುವುದು ಆತಂಕದ ವಿಚಾರ. ಈ ಬಗ್ಗೆ ಪ್ರಜಾಪ್ರಭುತ್ವದ ಕುರಿತು ನಂಬಿಕೆ ಇಟ್ಟುಕೊಂಡಿರುವವರು ಗಂಭೀರವಾಗಿ ಚಿಂತಿಸಿ, ಹೋರಾಟಗಳನ್ನು ರೂಪಿಸಬೇಕಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ತಿಳಿಸಿದರು.

ರವಿವಾರ ಮಾನವ ಧರ್ಮ ಪೀಠ ನಗರದ ನಿಡುಮಾಮಿಡಿ ಮಠದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಗೆ ‘ಮಾನವತಾ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲಿಯೇ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ. ಈ ದೇಶಗಳಲ್ಲಿ ಪ್ರಜಾಪ್ರಭುತ್ವ ಅಳವಡಿಸಿಕೊಂಡಿದ್ದರೂ ಸರ್ವಾಧಿಕಾರಿಗಳು ಹಿಡಿತದಲ್ಲಿ ನಲುಗುವಂತಾಗಿದೆ. ಕಾರ್ಮಿಕರು, ರೈತರು, ಮಹಿಳೆಯರು ತಮ್ಮ ನಿತ್ಯ ಜೀವನವನ್ನು ನಡೆಸುವುದಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಹಬ್ಬುತ್ತಿರುವ ಕೋಮುವಾದ ಜನತೆಯನ್ನು ಸ್ವ ಇಚ್ಚೆಯಂತೆ ಬದುಕಲು ಬಿಡುತ್ತಿಲ್ಲ. ಜನತೆಯ ಚಿಂತನೆಗಳಿಗೆ ಕಡಿವಾಣ ಹಾಕುವ ಮೂಲಕ ಗುಲಾಮರನ್ನಾಗಿ ಮಾಡಿಕೊಳ್ಳುವತ್ತ ಸಾಗಿದೆ. ಕೋಮುವಾದ ಎಂಬ ದುಷ್ಟಶಕ್ತಿಯ ವಿರುದ್ಧ ಜನಸಾಮಾನ್ಯರು ಒಂದುಗೂಡಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಅವರು ಆಶಿಸಿದರು.

ದೊರೆಸ್ವಾಮಿ ಬದುಕು ಆದರ್ಶ: ದೇಶದ ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದೊಡ್ಡ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ, ತಮ್ಮ ಇಡೀ ಬದುಕನ್ನು ಚಳವಳಿ, ಹೋರಾಟಗಳಿಗೆ ಮೀಸಲಿಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಬದುಕು ಯುವ ಜನತೆಗೆ ಸ್ಫೂರ್ತಿಯಾಗಲಿ ಎಂದು ಅವರು ತಿಳಿಸಿದರು.

ನಿವೃತ್ತ ಹೈಕೋರ್ಟ್ ನ್ಯಾ.ನಾಗಮೋಹನ ದಾಸ್ ಮಾತನಾಡಿ, ಎರಡನೆ ಮಹಾಯುದ್ಧದಲ್ಲಿ ಎರಡು ಕೋಟಿ ಸೈನಿಕರು ಸತ್ತರೆ, ನಾಲ್ಕು ಕೋಟಿ ಜನತೆ ಸಾವಿಗೀಡಾದರು. ಸರ್ವಾಧಿಕಾರಿಗಳ ಸ್ವಾರ್ಥ ಹಿತಾಸಕ್ತಿಗಳ ಫಲವಾಗಿ ಜನಸಾಮಾನ್ಯರ ಸಾವು ನೋವುಗಳಿಗೆ ತುತ್ತಾಗುತ್ತಿರುವುದು ಇತಿಹಾಸದ ಉದ್ದಕ್ಕೂ ನಡೆದುಕೊಂಡು ಬಂದಿದೆ. ಜನಸಾಮಾನ್ಯರಾದ ನಾವು ನಮ್ಮೆಲ್ಲರ ಬದುಕನ್ನು ಉತ್ತಮಗೊಳಿಸಲು ಒಟ್ಟಾಗುವುದು ಅಗತ್ಯವಿದೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಮಾನವತಾ ಪ್ರಶಸ್ತಿ ಪುರಸ್ಕೃತ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಿಪಿಐ ಮುಖಂಡ ಡಾ.ಸಿದ್ಧನಗೌಡ ಪಾಟೀಲ್, ಸಾಹಿತಿ ಲೀಲಾಸಂಪಿಗೆ, ಲೇಖಕ ನಾಗರಾಜಪ್ಪ ಮತ್ತಿತರರಿದ್ದರು.

‘ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವವರು ದೇಶದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹೀಗಾಗಿಯೇ ಕೋಮುವಾದಿಗಳು ವಿಜೃಂಭಿಸುತ್ತಿದ್ದಾರೆ. ಜನ ಏನು ತಿನ್ನಬೇಕು, ಏನು ಮಾತನಾಡಬೇಕೆಂದು ನಿರ್ಧರಿಸುವ ಮಟ್ಟಕ್ಕೆ ಬಂದಿದ್ದು, ಅಪಾಯದ ತುತ್ತುತುದಿ ಮುಟ್ಟಿದೆ. ಇಂತಹ ವಿಷಮಯ ಸನ್ನಿವೇಶದಲ್ಲಿ ಜನಸಾಮಾನ್ಯರಿಗೆ ಇರುವುದು ಹೋರಾಟವೊಂದೇ. ಹೋರಾಟದ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ’

-ನಾಗಮೋಹನದಾಸ್ ,ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News