ನಾವು ಹಿಂದೂಗಳಲ್ಲ, ವೀರಶೈವರು ಮೂಲತಃ ನಮ್ಮವರಲ್ಲ: ಸಚಿವ ಎಂ.ಬಿ.ಪಾಟೀಲ್

Update: 2017-12-10 14:34 GMT

ವಿಜಯಪುರ, ಡಿ.10: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮದ ಹಕ್ಕೋತ್ತಾಯ ಚಳವಳಿಯಲ್ಲಿ ಮುಂಚೂಣಿಯಲ್ಲಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ರವಿವಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಒತ್ತಾಯಿಸಿ ನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಲಿಂಗಾಯತ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಮಾತ್ರ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸ್ವತಂತ್ರ ಧರ್ಮ ಮಾನ್ಯತೆ ಸಿಗುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.

  12ನೆ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಧರ್ಮ ಇದಾಗಿದ್ದು, ಐತಿಹಾಸಿಕವಾಗಿ ನಾವು ಹಿಂದೂಗಳೆ ಅಲ್ಲ. ವೀರಶೈವರು ಮೂಲತಃ ನಮ್ಮವರಲ್ಲ. ಈ ಹಿಂದಿದ್ದ ಮಾನ್ಯತೆಯನ್ನು ನಮಗೆ ಮರಳಿಸಿ ಎಂದು ಅವರು ಇದೇ ವೇಳೆ ಆಗ್ರಹಪಡಿಸಿದರು.

ಮೈಸೂರು ಸಂಸ್ಥಾನ ಸೇರಿದಂತೆ ಮದ್ರಾಸ್, ಮುಂಬೈ ಪ್ರಾಂತ್ಯದ ಜನಗಣತಿಯಲ್ಲಿ 1871ರವರೆಗೂ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ನಮೂದಿಸಿರುವ ದಾಖಲೆಗಳಿವೆ. 115 ಪುಟಗಳ ಈ ದಾಖಲೆಗಳನ್ನು ಶನಿವಾರವೆ ಬಿಡುಗಡೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಸೇರಿ ಇನ್ನಿತರ ರಾಜ್ಯಗಳಲ್ಲಿರುವ ಎಲ್ಲ ಲಿಂಗಾಯತರು ಒಗ್ಗಟ್ಟಾಗಿ ಪ್ರತ್ಯೇಕ ಧರ್ಮಕ್ಕೆ ಹೋರಾಟ ನಡೆಸುತ್ತಿದ್ದೇವೆ. ಧರ್ಮದ ಮಾನ್ಯತೆ ದೊರೆತರೆ ಎಲ್ಲರಿಗೂ ಅನುಕೂಲವಾಗುತ್ತದೆ. ನಾವು ಬೇರೆಯವರನ್ನು ವಿರೋಧಿಸುವುದಿಲ್ಲ. ಬಸವಣ್ಣನವರ ಸಮಾನತೆಯನ್ನು ಗೌರವಿಸುತ್ತೇವೆ. ಅದಕ್ಕಾಗಿ ನಾವು ನಮ್ಮ ಧರ್ಮಕ್ಕೆ ಮಾನ್ಯತೆ ಕೇಳುತ್ತಿದ್ದೇವೆ ಎಂದು ಹೇಳಿದರು.

  ಸಚಿವ ವಿನಯ ಕುಲಕರ್ಣಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಗದಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ, ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ, ಕೂಡಲ ಸಂಗಮದ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಜಮಾದಾರ ಸೇರಿ ವಿವಿಧ ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸಿದರು.

 ಲಿಂಗಾಯತ ಸಮುದಾಯದ ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News