ಸೂಕ್ತ ತರಬೇತಿ ಸಿಕ್ಕರೆ, ನನ್ನ ಇಲಾಖೆಯೇ ಇರುವುದಿಲ್ಲ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

Update: 2017-12-10 13:57 GMT

ಬೆಂಗಳೂರು, ಡಿ.10: ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮಾಣಪತ್ರದೊಂದಿಗೆ ಸೂಕ್ತ ರೀತಿಯಲ್ಲಿ ತರಬೇತಿ ಸಿಕ್ಕರೆ, ನನ್ನ ಇಲಾಖೆಯೇ ಇರುವುದಿಲ್ಲ ಎಂದು ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

 ರವಿವಾರ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಚಾರಿಟಬಲ್ ಟ್ರಸ್ಟ್ ಏರ್ಪಡಿಸಿದ್ದ, ವಾರ್ಷಿಕ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದ ಜತೆಗೆ ಸೂಕ್ತ ತರಬೇತಿ ದೊರೆತರೆ ನಾನು ಸಚಿವನಾಗಿರುವ ಕೌಶಲ್ಯಾಭಿವೃದ್ಧಿ ಸಚಿವಾಲಯದ ಅಗತ್ಯವೇ ಇರುವುದಿಲ್ಲ ಎಂದರು.

ಕೌಶಲ್ಯಾಭಿವೃದ್ಧಿ ಸಚಿವನಾಗುವ ಮುನ್ನ ಈ ಇಲಾಖೆ ಏಕಿದೆ ಎಂಬುದು ಗೊತ್ತಿರಲಿಲ್ಲ. ಸಾಮಾನ್ಯ ಜನರಂತೆ ನಾನು ಕೂಡಾ ಕೌಶಲ್ಯಾಭಿವೃದ್ಧಿ ಬಗ್ಗೆ ಕೇಳಿ ದೂರ ಉಳಿಯುತ್ತಿದ್ದೆ ಎಂದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ದೊರೆಯುತ್ತಿದೆಯೇ ಹೊರತು ಬದುಕಲು ಬೇಕಾದ ಜ್ಞಾನ ದೊರೆಯುತ್ತಿಲ್ಲ ಎಂದು ಅನಂತ್‌ಕುಮಾರ್ ಹೆಗಡೆ ನುಡಿದರು.

ಪಾಶ್ಚಿಮಾತ್ಯರನ್ನು ಅನುಕರಣೆ ಮಾಡುತ್ತಿರುವುದರಿಂದ ವಾಸ್ತವ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಾಗುತ್ತಿಲ್ಲ.ಗಣಿತ, ವಿಜ್ಞಾನ, ಇತಿಹಾಸ ಸೇರಿದಂತೆ ಎಲ್ಲ ವಿಷಯಗಳು ನಿತ್ಯದ ಬದುಕಿನಲ್ಲಿ ಅಡಕವಾಗಿವೆ ಎಂದು ಹೇಳಿದರು.

 ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ ರಾವ್ ಮಾತನಾಡಿ, ಸಾಮಾಜಿಕವಾಗಿ ಕೆಳಹಂತದಲ್ಲಿದ್ದ ಜಾತಿಯ ಜನರನ್ನು ಮೇಲಕ್ಕೆತ್ತಲು ಮೀಸಲು ನೀಡಲಾಯಿತು. ಆ ಜಾತಿಯ ಜನರನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂದಿಗೂ ಮೀಸಲು ಮುಂದುವರಿಸಲಾಗಿದೆ. ಇತ್ತೀಚೆಗೆ ಮರಾಠರು, ಪಟೇಲರು ಸೇರಿದಂತೆ ಬೇರೆ ಸಮುದಾಯದ ಜನರು ಕೂಡಾ ಮೀಸಲು ಕೇಳುತ್ತಿದ್ದಾರೆ. ಆದರೆ ಆರ್ಯ ವೈಶ್ಯ ಸಮುದಾಯದವರು ಮೀಸಲು ಕೇಳಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ 1,236 ವಿದ್ಯಾರ್ಥಿಗಳಿಗೆ 1.20 ಕೋಟಿ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಜಿಎಂಆರ್ ಗ್ರೂಪ್ ಅಧ್ಯಕ್ಷ ಜಿ.ಮಲ್ಲಿಕಾರ್ಜುನ ರಾವ್, ಟ್ರಸ್ಟ್ ಅಧ್ಯಕ್ಷ ಐ.ಎಸ್.ಪ್ರಸಾದ್ ಸೇರಿ ಪ್ರಮುಖರಿದ್ದರು.

‘ಉಪೇಂದ್ರ ಸಿನೆಮಾದಿಂದ ಕನಸಿಲ್ಲ’

‘ಪ್ರತಿಯೊಬ್ಬರು ಏನಾದರೂ ಮಾಡಬೇಕೆಂದು ಕನಸು ಕಾಣುತ್ತಾರೆ. ಆದರೆ, ಕೆಲವರಿಗೆ ಮಾತ್ರ ಮಹತ್ವಕಾಂಕ್ಷೆಯ ಕನಸು ಬೀಳುತ್ತದೆ. ಕನ್ನಡ ಸಿನೆಮಾ ನಟ ಉಪೇಂದ್ರ ಅವರ ಸಿನಿಮಾಗಳನ್ನು ನೋಡುವುದರಿಂದ ಇಂತಹ ಕನಸು ಕಾಣಲು ಸಾಧ್ಯವಿಲ್ಲ. ಭಗತ್‌ಸಿಂಗ್, ಚಂದ್ರಶೇಖರ ಆಝಾದ್, ಬಾಲಗಂಗಾಧರ ತಿಲಕರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಓದಿದಾಗ ಮಹತ್ವಕಾಂಕ್ಷೆಯ ಕನಸು ಬೀಳುತ್ತದೆ’

-ಅನಂತಕುಮಾರ್ ಹೆಗಡೆ ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News