ಸಾಹಿತ್ಯ ಪರಂಪರೆಯಲ್ಲಿ ಧರ್ಮವೆಂಬುದು ಕೇವಲ ನೆಪ: ಡಾ.ಜಿ.ಎಸ್.ಸಿದ್ಧಲಿಂಗಯ್ಯ

Update: 2017-12-10 14:00 GMT

ಬೆಂಗಳೂರು, ಡಿ.10: ಜೈನ, ವೀರಶೈವ, ವೈಷ್ಣವ ಹಾಗೂ ಬ್ರಾಹ್ಮಣ ಸಾಹಿತ್ಯ ಪರಂಪರೆಯಲ್ಲಿ ಸಾಹಿತ್ಯದ ವಿಚಾರಗಳೇ ಮೂಲವಾಗಿರುತ್ತದೆಯೇ ವಿನಃ ಜಾತಿ, ಧರ್ಮ ವೆಂಬುದು ಕೇವಲ ನೆಪಮಾತ್ರವಾಗಿರುತ್ತದೆ ಹಿರಿಯ ಕವಿ ಡಾ.ಜಿ.ಎಸ್.ಸಿದ್ಧಲಿಂಗಯ್ಯ ತಿಳಿಸಿದರು.

ರವಿವಾರ ಡಾ.ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಟಾನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಿರಿಯ ಸಂಶೋಧಕ ಪ್ರೊ.ಎಸ್.ಉಮಾಪತಿಗೆ ವಿದ್ಯಾಶಂಕರ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರತ್ನ ಸಂಸ್ಕರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೈನ ಕವಿಯಾಗಿದ್ದ ಪಂಪ ಜೈನ ಧರ್ಮದ ಕುರಿತು ಬರೆದಿಲ್ಲ. ‘ಮನುಷ್ಯ ಜಾತಿ ತಾನೊಂದೇ ವಲಂ’ ಎನ್ನುವ ಮೂಲಕ ಮಾನವೀಯ ವೌಲ್ಯವುಳ್ಳ ಸಾಹಿತ್ಯವನ್ನು ರಚಿಸಿದರು. ಹಾಗೆಯೆ ಹಿರಿಯ ಸಂಶೋಧಕ ಡಾ.ಎಸ್.ವಿದ್ಯಾಶಂಕರ ರಚಿಸಿರುವ ‘ವೀರ ಶೈವ ಸಾಹಿತ್ಯ ಚರಿತ್ರೆ’ ಸಂಪುಟಗಳಲ್ಲಿ ವೀರಶೈವ ಕವಿಗಳ ಕಾವ್ಯ ಹಾಗೂ ಕವಿಗಳ ಬದುಕುಗಳ ಕುರಿತು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಜೀವನದ ಅಗತ್ಯಗಳಿಗೆ ಅನುಗಣವಾಗಿ ಬದಲಾವಣೆ ಆಗುವುದು ಹಾಗೂ ಜನರ ಬದುಕಿಗೆ ಸತ್ವವನ್ನು ಒದಗಿಸಿಕೊಡುವುದೇ ಎಲ್ಲ ಧರ್ಮದ ನಿಜವಾದ ಸಾರವಾಗಿದೆ. ಇದನ್ನೇ ಜೈಮ, ಶರಣ, ವೈಷ್ಣವ ಹಾಗೂ ಬ್ರಾಹ್ಮಣ ಸಾಹಿತ್ಯ ಪರಂಪರೆ ನಮಗೆ ತೋರಿಸಿಕೊಟ್ಟಿದೆ. ಅದರ ಮುಂದುವರೆದ ಭಾಗವಾಗಿ ವೀರಶೈವ ಸಾಹಿತ್ಯ ಪರಂಪರೆಯ ಹಾದುಬಂದ ಕವಿಗಳ ಸಾಹಿತ್ಯವನ್ನು ಡಾ.ಎಸ್.ವಿದ್ಯಾಶಂಕರರವರು ವರ್ತಮಾನಕ್ಕೆ ಅನುಗುಣವಾಗಿ ವಿಶ್ಲೇಷಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.

  ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಮಾತನಾಡಿ, ಸಾಹಿತ್ಯ ಕೃತಿಗಳನ್ನು ಬರೆದ ಮಾತ್ರಕ್ಕೆ ದೊಡ್ಡವರಾಗುವುದಿಲ್ಲ. ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕನ್ನು ಜನರಪವಾಗಿ ರೂಡಿಸಿಕೊಳ್ಳುವುದರಲ್ಲಿ ದೊಡ್ಡತನವಿದೆ. ಅಂತವರ ಸಾಲಿನಲ್ಲಿ ಹಿರಿಯ ಸಂಶೋಧಕ ಡಾ.ಎಸ್.ವಿದ್ಯಾಶಂಕರ ನಿಲ್ಲುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಸಿ. ನಾಗಭೂಷಣರವರು ‘ನಂಬಿಯಣ್ಣ ಒಂದು ಅಧ್ಯಯನ’ ಹಾಗೂ ಕಲಬುರ್ಗಿ ವಿವಿಯ ಸಹ ಪ್ರಾಧ್ಯಾಪಕಿ ಡಾ.ಸುವರ್ಣಾ ಎಂ.ಹಿರೇಮಠರವರು ಡಾ.ಎಸ್. ವಿದ್ಯಾಶಂಕರರವರ ಬದುಕು-ಬರಹ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News