ಎಳೆಯ ಮನಸ್ಸುಗಳಿಗೆ ವಚನ ಸಂಸ್ಕಾರ ಅಗತ್ಯ: ಪಿನಾಕಪಾಣಿ

Update: 2017-12-10 14:04 GMT

ಬೆಂಗಳೂರು, ಡಿ.10: ಎಲ್ಲೆಲ್ಲೂ ಮೊಬೈಲ್‌ಗಳು ಹರಿದಾಡುತ್ತಿರುವಾಗ, ಟಿವಿಯ ಧಾರವಾಹಿಗಳು ಮನಸ್ಸನ್ನು ಕೆಡಿಸುತ್ತಿರುವಾಗ ಎಳೆಯ ಮನಸ್ಸುಗಳಿಗೆ ವಚನ ಸಂಸ್ಕಾರ ಬಹಳ ಅಗತ್ಯವೆಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದ್ದಾರೆ.

 ರವಿವಾರ ವಚನಜ್ಯೋತಿ ಬಳಗವು ಬಸವತತ್ತ್ವಪ್ರಚಾರ ಟ್ರಸ್ಟ್ ಸಹಯೋಗದಲ್ಲಿ ಕುಮಾರಪಾರ್ಕಿನ ಅಕ್ಕಮಹಾದೇವಿ ಸಮಾಜದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿಲಯದಿಂದ ವಿದ್ಯಾರ್ಥಿನಿಲಯಕ್ಕೆ ವಚನಜ್ಯೋತಿ; ಕನ್ನಡ ಸಂಸ್ಕೃತಿ ಸಂಚಾರದಲ್ಲಿ ಮಾತನಾಡಿದ ಅವರು, ವಚನ ಸಂಸ್ಕಾರವೆಂದರೆ ಧಾರ್ಮಿಕ ಕ್ರಿಯೆಯಲ್ಲ, ಅದು ಮಾನಸಿಕ ಕ್ರಿಯೆ. ವಿಶ್ವಕ್ಕೆ ಮಾರ್ಗದರ್ಶನೀಯವಾದ ವಿಚಾರವನ್ನು ಹೇಳಿದ ಬಸವಣ್ಣ ಮತ್ತು ಇತರ ವಚನಕಾರರ ವಚನಗಳನ್ನು ಕಲಿಸುವುದರೊಂದಿಗೆ ಅವುಗಳ ಅರ್ಥವನ್ನು ಹೇಳಿಕೊಟ್ಟು ಬದುಕನ್ನು ಪ್ರೀತಿ ವಿಶ್ವಾಸಗಳಿಂದ ಸುಂದರಗೊಳಿಸುವ ಪ್ರಕ್ರಿಯೆ ಎಂದು ಹೆೀಳಿದರು.

    ಬಸವಣ್ಣ ಕೇವಲ ತತ್ತ್ವವನ್ನು ಮಾತ್ರ ಹೇಳಿಕೊಡಲಿಲ್ಲ, ಸ್ವಾಭಿಮಾನದಿಂದ ಕಾಯಕ ನಡೆಸಿ ದಾಸೋಹ ಭಾವದಿಂದ ಸಂತೃಪ್ತವಾಗಿರುವ ಬಗೆಯನ್ನು ತೋರಿಸಿಕೊಟ್ಟ ಎಂದು ಹೇಳಿದ ಅವರು, ಸಂಪತ್ತನ್ನು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಸಂಗ್ರಹಿಸುವ ಇಂದಿನ ಪ್ರವೃತ್ತಿಗೆ ಬಸವಣ್ಣ ಕಡು ವಿರೋಧಿಯಾಗಿದ್ದ, ಇದನ್ನು ನಾವು ಮಕ್ಕಳಿಗೆ ಹೇಳಿಕೊಡುವುದಷ್ಟೇ ಅಲ್ಲ, ನಾವೂ ಕೂಡಾ ಕಾಯಕದ ಮೂಲಕ ದುಡಿದು ದಾಸೋಹದಿಂದ ಹಂಚಿಕೊಂಡು ತಿನ್ನುವುದನ್ನು ತೋರಿಸಿಕೊಡಬೇಕಾಗಿದೆ, ನಡೆಯೊಳಗೆ ನುಡಿಯ ಪೂರೈಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

 ರಂಗಭೂಮಿ ಕಲಾವಿದ ಅರಬಗಟ್ಟ ಬಸವರಾಜು ವಚನಗಳನ್ನು ಹಾಡುವುದರೊಂದಿಗೆ ವ್ಯಾಖ್ಯಾನ ಮಾಡಿದರು. ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಉಮಾದೇವಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದು, ಬಸವತತ್ತ್ವ ಪ್ರಚಾರ ಟ್ರಸ್ಟ್‌ನ ಸ್ಥಾಪಕರಾದ ಜಸ್ಟೀಸ್ ಡಿ.ಎಂ. ಚಂದ್ರಶೇಖರ್ ಅವರು, ಬಸವತತ್ತ್ವ ಪ್ರಚಾರ ನಡೆಯುತ್ತಿದ್ದು, ದ್ಯಾರ್ಥಿನಿಯರು ಇದರ ಸದುಪಯೋಗ ಪಡೆದು ಉತ್ತಮ ಬದುಕನ್ನು ರೂಢಿಸಿಕೊಳ್ಳಲೆಂದು ಆಶಿಸಿದರು. ವಚನಜ್ಯೋತಿ ಬಳಗದ ಕಾರ್ಯಾಧ್ಯಕ್ಷ ಗುರುಪ್ರಸಾದ್ ಕುಚ್ಚಂಗಿ, ಕ ಗುಂಡೀಗೆರೆ ವಿಶ್ವನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News