ರಾಜ್ಯ ಕಂಡ ಅಪರೂಪದ ರಾಜಕಾರಣಿ ನಿಜಲಿಂಗಪ್ಪ: ಕೆ.ಎಸ್.ನಾಗರಾಜ್

Update: 2017-12-10 15:53 GMT

ಬೆಂಗಳೂರು, ಡಿ. 10: ತಪ್ಪು ಅನ್ನಿಸಿದ್ದನ್ನು ನೇರವಾಗಿ ವಿರೋಧಿಸುವ, ರಾಜಿಯಾಗದ ನಾಯಕತ್ವ ಗುಣ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪಅವರಲ್ಲಿತ್ತು. ಇದೇ ಗುಣ ಅವರನ್ನು ಮೇರು ವ್ಯಕ್ತಿಯಾಗಿಸಿದೆ. ಅಲ್ಲದೆ, ಅವರನ್ನು ಮಾದರಿ ರಾಜಕಾರಣಿಯನ್ನಾಗಿ ರೂಪಿಸಿತ್ತು ಎಂದು ಲೇಖಕ ಕೆ.ಎಸ್.ನಾಗರಾಜ್ ಬಣ್ಣಿಸಿದ್ದಾರೆ.

ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಆಯೋಜಿಸಿದ್ದ ಮಾಜಿ ಸಿಎಂ ನಿಜಲಿಂಗಪ್ಪ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ನುಡಿ ನಮನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಜಲಿಂಗಪ್ಪ ತಾವು ಬೆಳೆಯುವ ಜತೆಗೆ ತಮ್ಮೊಂದಿಗಿದ್ದವರನ್ನೂ ಅಷ್ಟೇ ಪ್ರಾಮುಖ್ಯತೆ ನೀಡಿ ಬೆಳೆಸಿದರು ಎಂದು ಹೇಳಿದರು.

 ಯಾರ ಬಗೆಗೂ ಮೇಲು-ಕೀಳೆಂಬ ಭಾವನೆ ತೋರಲಿಲ್ಲ. ಮುಖ್ಯಮಂತ್ರಿಯಾಗಿ ಭಾವನಾತ್ಮಕ ಹಾಗೂ ಆಡಳಿತಾತ್ಮಕವಾಗಿ ಮೈಸೂರು ರಾಜ್ಯದ ಐದು ಭಾಗಗಳನ್ನು ಒಂದುಗೂಡಿಸಿ ಸಮರ್ಥ ಹಾಗೂ ಜನಪರ ಆಡಳಿತ ನೀಡುವ ಮೂಲಕ ನಾಡಿನ ಜನರ ಆಶೋತ್ತರ ಈಡೇರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸರಳ, ಸಮಗ್ರ, ವಚನ ಬದ್ಧ, ನಿಸ್ಪಕ್ಷಪಾತ, ಪರಿಪಕ್ವ ನಿಲುವು ಒಬ್ಬ ಸಮರ್ಥ ನಾಯಕನನ್ನಾಗಿ ರೂಪಿಸಿತು ಎಂದು ಸ್ಮರಿಸಿದರು.

ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯೂ ಅಗಿ ಕಾರ್ಯನಿರ್ವಹಿಸಿದ ಅವರು, ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಹೆಸರು ಮಾಡಿದರು. ಕೊಂಚ ತಡವಾಗಿ ರಾಜಕೀಯ ಬದುಕು ಆರಂಭಿಸಿದ ನಿಜಲಿಂಗಪ್ಪ ತಮ್ಮದೇ ಆದ ಛಾಪನ್ನು ರಾಜಕೀಯ ವಲಯದಲ್ಲಿ ಮೂಡಿಸಿದ್ದರು. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು ಎನ್ನುವುದಕ್ಕಿಂತ ನ್ಯಾಯಪರ, ನಿಷ್ಠುರ ಹಾಗೂ ಸಜ್ಜನ ರಾಜಕಾರಣಿ ಆಗಿ ಜನಪ್ರಿಯರಾಗಿದ್ದರು ಎಂದು ಹೇಳಿದರು.

ಸಂಸ್ಕೃತಿ ಇಲಾಖೆ ಅಪರ ನಿರ್ದೇಶಕ ಡಾ.ಹೊನ್ನಲಿಂಗಯ್ಯ ಮಾತನಾಡಿ, ದೇಶದಲ್ಲಿ ರಾಷ್ಟ್ರ ನಾಯಕರ ಹಾಗೂ ಹಬ್ಬ ಹರಿದಿನಗಳ ಆಚರಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಆದರೆ, ದೇಶ ಕಟ್ಟಲು, ರಾಜ್ಯ ಕಟ್ಟಲು ಶ್ರಮಿಸಿದ, ದುಡಿದ ನಾಯಕರು ಹುಟ್ಟಿದ ದಿನಗಳನ್ನು ಮರೆ ಬಿಟ್ಟಿರುತ್ತೇವೆ. ಈ ಕುರಿತು ಸರಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದವರ ಮೊಕದ್ದಮೆಗಳನ್ನು ವಾದಿಸುತ್ತಾ ಭೂ ಸುಧಾರಣೆ ಹಾಗೂ ಉಳುವವರಿಗೆ ಭೂಮಿ ಕೊಡಿಸಬೇಕು ಎಂದು ಅಪಾರ ಪ್ರಮಾಣದಲ್ಲಿ ಶ್ರಮ ವಹಿಸಿದರು. ಅದರಲ್ಲಿ ಯಶಸ್ಸು ಕಂಡರು. ಅದಕ್ಕಿಂತ ಮುಖ್ಯವಾಗಿ ಇವರ ಕಾಂಗ್ರೆಸ್ ಪಕ್ಷದಲ್ಲಿ ಬದುಕು ಮತ್ತು ಸ್ವಾತಂತ್ರ ಸಂಗ್ರಾಮದೊಂದಿಗಿನ ಸಂಬಂಧ ವಿಶೇಷವಾಗಿದೆ. 1924ರಲ್ಲಿ ಗಾಂಧಿಯನ್ನು ಕಂಡು, ಅಂದಿನಿಂದ ಮುಂದೆ ಕಾಂಗ್ರೆಸ್ ಜತೆಗಿನ ನಿಕಟ ಸಂಪರ್ಕ ಬೆಳೆಸಿಕೊಂಡು ಗಮನಾರ್ಹರಾಗಿ ಗುರುತಿಸಿಕೊಂಡರು ಎಂದು ವಿವರಿಸಿದರು.

ನಿಜಲಿಂಗಪ್ಪರನ್ನು ನವ ಕರ್ನಾಟಕದ ನಿರ್ಮಾತೃ ಎಂದು ಜನ ನೆನಪಿಸಿಕೊಳ್ಳುತ್ತಾರೆ. ಆದರೆ, ಶರಾವತಿ ಜಲ ವಿದ್ಯುತ್ ಯೋಜನೆ ಮತ್ತು ಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿಯಾಗಿದ್ದಾರೆ. ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಪಟೇಲ್ ಹಾಗೂ ನಾಗರಾಜಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News