ಸಹೋದ್ಯೋಗಿ ಕೊಲೆಗೆ ಸುಪಾರಿ ಆರೋಪ: ರವಿಬೆಳಗೆರೆ ವಿಚಾರಣೆ ಬಹುತೇಕ ಪೂರ್ಣ?

Update: 2017-12-10 16:17 GMT

ಬೆಂಗಳೂರು, ಡಿ.10: ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪ ಪ್ರಕರಣ ಸಂಬಂಧ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕ ರವಿಬೆಳಗೆರೆ ಅವರ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಸತತ ಮೂರು ದಿನಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು, ರವಿವಾರವೂ ‘ಹಾಯ್ ಬೆಂಗಳೂರು’ ವಾರಪತ್ರಿಕೆಯ ಸಹ ಸಂಪಾದಕ ಲೋಕೇಶ್ ಕೊಪ್ಪದ್, ರವಿಬೆಳಗೆರೆ ಪುತ್ರ ಕರ್ಣ ಹಾಗೂ ಅವರ ಎರಡನೆ ಪತ್ನಿ ಯಶೋಮತಿ ಅವರನ್ನು ವಿಚಾರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿದರು ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲು: ರವಿಬೆಳಗೆರೆ ಅವರಿಗೆ ಮಧುಮೇಹ, ರಕ್ತದೊತ್ತಡ ಇರುವುದರಿಂದ ರವಿವಾರ ಸ್ವಲ್ಪಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ, ಸಂಜೆ 4 ಗಂಟೆ ಸುಮಾರಿಗೆ ಅವರನ್ನು ವೈದ್ಯಕೀಯ ತಪಾಸಣೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯಕೀಯ ಪರೀಕ್ಷೆ ನಂತರ ಸಿಸಿಬಿ ಕಚೇರಿಗೆ ವಾಪಸ್ ಕರೆತರಲಾಯಿತು.

ಮನೆ ಮಹಜರು: ಶನಿವಾರ ರವಿಬೆಳಗೆರೆ ಅವರ ಎರಡನೆ ಪತ್ನಿ ಯಶೋಮತಿ ಅವರ ಮನೆಯ ಮಹಜರನ್ನು ಪೊಲೀಸರು ನಡೆಸಿ, ಪ್ರಕರಣ ಸಂಬಂಧ ಅವರ ಹೇಳಿಕೆಗಳನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಫ್‌ಐಆರ್: ರವಿಬೆಳಗೆರೆ ಬಂಧನ ಪ್ರಕರಣದ ಬಳಿಕ ಇಲ್ಲಿನ ಪದ್ಮನಾಭನಗರದಲ್ಲಿರುವ ‘ಹಾಯ್ ಬೆಂಗಳೂರು’ ವಾರಪತ್ರಿಕೆ ಕಚೇರಿಯಲ್ಲಿ ಜಿಂಕೆ ಚರ್ಮ, ಆಮೆ ಚಿಪ್ಪು ಪತ್ತೆ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ತದನಂತರ ಅರಣ್ಯಾಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪುವಶಕ್ಕೆ ಪಡೆದು ರವಿಬೆಳಗೆರೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವುದಾಗಿ ತಿಳಿದುಬಂದಿದೆ.

ಕೊಪ್ಪದ್ ಹೇಳಿಕೆ: ರವಿವಾರ ‘ಹಾಯ್‌ಬೆಂಗಳೂರು’ ಪತ್ರಿಕೆ ಸಹ ಸಂಪಾದಕ ಲೋಕೇಶ್ ಕೊಪ್ಪದ್ ಅವರನ್ನು ಸಿಸಿಬಿ ಕಚೇರಿಗೆ ಕರೆದುಕೊಂಡ ತನಿಖಾಧಿಕಾರಿಗಳು ಸುನೀಲ್ ಹತ್ಯೆಗೆ ಸುಪಾರಿ ಪ್ರಕರಣ ಸಂಬಂಧ ಅವರ ಹೇಳಿಕೆಗಳನ್ನು ಪಡೆದರು.

ವಿಚಾರಣೆ ಬಳಿಕ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೇಶ್ ಕೊಪ್ಪದ್, "ನಾನು ಹದಿನಾಲ್ಕು ವರ್ಷದಿಂದ ‘ಹಾಯ್‌ಬೆಂಗಳೂರು’ ಪತ್ರಿಕೆಯಲ್ಲಿದ್ದೀನಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೊಬೈಲ್‌ನಿಂದ ಸುಪಾರಿ ಹಂತಕರಿಗೆ ಕರೆ ಹೋಗಿದೆ ಎಂಬ ಬಗ್ಗೆ ನನ್ನನ್ನು ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಹೀಗೆ ಆಗಿದ್ದರೆ ನನ್ನನ್ನು ನೇಣಿಗೇರಿಸಿ" ಎಂದು ಅಧಿಕಾರಿಗಳಿಗೆ ಹೇಳಿರುವುದಾಗಿ ತಿಳಿಸಿದರು.

"ಸುನೀಲ್ ಹೆಗ್ಗರವಳ್ಳಿ ಮತ್ತು ನಾನು ಒಟ್ಟಿಗೇ ಕೆಲಸ ಮಾಡಿದ್ದೇವೆ. ಕಚೇರಿಯ ಮೇಲೆ ದಾಳಿ ನಡೆಸಿ ರವಿಬೆಳಗೆರೆ ಅವರನ್ನು ಬಂಧಿಸುವ ಕೆಲವೇ ಸಮಯದವರೆಗೂ ಸುನೀಲ್ ಕಚೇರಿಯಲ್ಲಿದ್ದರು.ಅಲ್ಲದೆ, ರವಿ ಬೆಳಗೆರೆ ಯಾರನ್ನು ನಂಬಿಕೊಂಡು 22 ವರ್ಷಗಳಿಂದ ಪತ್ರಿಕೆ ನಡೆಸುತ್ತಿಲ್ಲ. ಪತ್ರಿಕೆ ಈ ವಾರ ಕೂಡ ನಿಲ್ಲುವುದಿಲ್ಲ" ಎಂದರು.

ಇಂದು ಸುನೀಲ್ ಹೇಳಿಕೆ: ಸುನೀಲ್ ಹೆಗ್ಗರವಳ್ಳಿ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಐಪಿಸಿ ಕಲಂ 164ರ ಅಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟಾರೆ, ಸುಪಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರವಿಬೆಳಗೆರೆ ಅವರ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. 

 ಮತ್ತೊಬ್ಬನಿಗೆ ಶೋಧ: ಸುಪಾರಿ ಕೊಲೆ ಪ್ರಕರಣ ಸಂಬಂಧ ಮತ್ತೊಬ್ಬ ಪ್ರಮುಖ ಆರೋಪಿ ಎನ್ನಲಾದ ಭೀಮಾತೀರದ ವಿಜುಬಡಿಗೇರ್ ಪತ್ತೆಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಎನ್ನಲಾದ ಭೀಮಾತೀರದ ಸುಪಾರಿ ಶಶಿಧರ್ ರಾಮಚಂದ್ರ ಮುಂಡೆವಾಡಿ ಸಹಚರನಾಗಿರುವ ವಿಜು, ಈ ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದಾನೆ.

‘ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ’

ಈ ಪ್ರಕರಣಕ್ಕೆ ಸಂಬಂಧಿಸಿ ತನಗೆ ಹಾಗೂ ಕುಟುಂಬಸ್ಥರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪತ್ರಕರ್ತ ಸುನೀಲ್ ಹೆಗ್ಗರಹಳ್ಳಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ರವಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಸುನೀಲ್, ತಾನು ಮತ್ತು ಕುಟುಂಬದವರು ಜೀವ ಬೆದರಿಕೆ ಎದುರಿಸುತ್ತಿದ್ದು, ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಯುಕ್ತ ಸುನೀಲ್ ಕುಮಾರ್ ಅವರಿಗೆ ಮನವಿ ಮಾಡಿದರು.

"ನಗರದ ವಸಂತಪುರದ ಸಾಗರ್ ಸ್ಪೆಂಡರ್ ಅಪಾರ್ಟ್‌ಮೆಂಟ್‌ನಲ್ಲಿ ನಾನು ಕುಟುಂಬದೊಂದಿಗೆ ವಾಸವಾಗಿದ್ದು, ಪತ್ನಿ ಮತ್ತು ಮಗು ಸೇರಿದಂತೆ ಕುಟುಂಬಕ್ಕೆ ರಕ್ಷಣೆ ನೀಡಬೇಕು" ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News