ಮಾನವ ಬಂಧುತ್ವ ವೇದಿಕೆ ಎಂಬ ಭರವಸೆಯ ಬೆಳಕು

Update: 2017-12-10 18:12 GMT

ಉತ್ತರ ಕರ್ನಾಟಕದಲ್ಲಿ ಮಾನವ ಬಂಧುತ್ವ ವೇದಿಕೆ ಅಸ್ತಿತ್ವಕ್ಕೆ ಬರುವ ಮುನ್ನ ಕೋಮುವಾದಿ ಶಕ್ತಿಗಳ ಅಬ್ಬರ ಜೋರಾಗಿತ್ತು. ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಅವರ ಸಭೆಗಳಿಗೆ ಸಾವಿರಾರು ಜನರು ಸೇರುತ್ತಿದ್ದರು. ಆದರೆ ಜಾರಕಿಹೊಳಿಯವರು ಈ ವೇದಿಕೆ ಕಟ್ಟಿದ ಬಳಿಕ ಈ ಭಾಗದ ವಾತಾವರಣದಲ್ಲಿ ತುಂಬಾ ಬದಲಾವಣೆಯಾಗಿದೆ. ಹಿಂದುಳಿದ ದಲಿತ ಸಮುದಾಯದ ಅನೇಕ ಯುವಕರು ಈ ವೇದಿಕೆಗೆ ಬಂದು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ವಿಲ್ಫ್ರೆಡ್ ಡಿಸೋಜಾ ಅವರು ಅಲ್ಲದೆ ರವೀಂದ್ರ ನಾಯ್ಕೆ, ಅನಂತ ನಾಯ್ಕೆ, ಜಯಕುಮಾರ್ ಹೀಗೆ ನೂರಾರು ಯುವ ಕಾರ್ಯಕರ್ತರು ಈ ಸಂಘಟನೆ ಕಟ್ಟಲು ಶ್ರಮಿಸುತ್ತಿದ್ದಾರೆ.

ಕರ್ನಾಟಕದಲ್ಲಿ ನವೆಂಬರ್-ಡಿಸೆಂಬರ್ ತಿಂಗಳು ಬಂದ್ರೆ, ಒಂದು ರೀತಿಯ ಸಂಚಲನ ಉಂಟಾಗುತ್ತದೆ. ನವೆಂಬರ್ 1ರಂದು ರಾಜ್ಯೋತ್ಸವ ಆಚರಿಸುವುದರ ಜೊತೆಗೆ ಈ ಬಾರಿ ರಾಜ್ಯದ ವಿವಿಧೆಡೆ ಸಾಹಿತ್ಯ ಸಮಾವೇಶಗಳು, ವೈಚಾರಿಕ ಸಮ್ಮೇಳನಗಳು ನಡೆದವು. ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ದಿನವೇ, ನಮ್ಮ ಚುನಾಯಿತ ಸಂಸತ್ತಿಗೆ ಸವಾಲು ಹಾಕುವ ರೀತಿಯಲ್ಲಿ ಉಡುಪಿಯಲ್ಲಿ ಧರ್ಮ ಸಂಸದ್ ನಡೆಯಿತು. ಇವೆರಡರ ನಂತರ ಮೋಹನ ಆಳ್ವರ ನುಡಿಸಿರಿ ಸಮ್ಮೇಳನ ಜಾತ್ರೆಯಂತೆ ಎಲ್ಲರ ಗಮನ ಸೆಳೆಯಿತು. ನವೆಂಬರ್ ಮುಗಿದು, ಡಿಸೆಂಬರ್ ಆರಂಭ ಆಗುತ್ತಿದ್ದಂತೆ 6ನೇ ತಾರೀಕಿಗೆ ಬಾಬಾ ಸಾಹೇಬ ಅಂಬೇಡ್ಕರ್‌ರ ಪರಿನಿರ್ವಾಣ ದಿನ. ಅಂದು ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿಯವರು ತಮ್ಮ ಮಾನವ ಬಂಧುತ್ವ ವೇದಿಕೆ ಮೂಲಕ ವೌಢ್ಯ ವಿರೋಧಿ ಸಮಾವೇಶ ಏರ್ಪಡಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅವರು ಈ ಸಮಾವೇಶ ನಡೆಸುತ್ತಿದ್ದಾರೆ. ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ನಡೆಯುವ ಈ ಬೃಹತ್ ಸಮಾವೇಶದಲ್ಲಿ ನಾನು ಮೊದಲನೇ ವರ್ಷ ಭಾಗವಹಿಸಿದ್ದಾಗ, 10 ಸಾವಿರ ಜನರು ಸೇರಿದ್ದರು. ನಂತರ ಎರಡು ವರ್ಷ, ಸಮಾವೇಶಕ್ಕೆ ಹೋಗಲು ಆಗಲಿಲ್ಲ. ಈ ಬಾರಿ ಹೋದಾಗ, 50 ಸಾವಿರಕ್ಕೂ ಹೆಚ್ಚು ಜನಸ್ತೋಮ ಕಂಡು ಅಚ್ಚರಿ ಉಂಟಾಯಿತು.

ಈ ವೌಢ್ಯ ವಿರೋಧಿ ಸಮಾವೇಶಕ್ಕೆ ಒಂದು ಹಿನ್ನೆಲೆಯಿದೆ. ಕಳೆದ ಒಂದು ದಶಕದಿಂದ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳು ನಡೆಸುತ್ತಿದ್ದ ಧರ್ಮದ ಹೆಸರಿನ ಸಮಾಜೋತ್ಸವಗಳಿಗೆ ಪ್ರತಿರೋಧವೇ ಇರಲಿಲ್ಲ. ಕೋಮು ಸೌಹಾರ್ದ ವೇದಿಕೆಯಂತಹ ಸಂಟನೆಗಳು ಪ್ರತಿರೋಧ ಒಡ್ಡಲು ಯತ್ನಿಸಿದರೂ ಈ ಕರಾಳ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿರಲಿಲ್ಲ. ಕೋಮುವಾದಕ್ಕೆ ನಮ್ಮ ವಿರೋಧ ಬರೀ ಸಾಂಕೇತಿಕವಾಗಿ ಇರುತ್ತಿತ್ತು. ಆದರೆ ಸತೀಶ್ ಜಾರಕಿಹೊಳಿಯವರ ಮಾನವ ಬಂಧುತ್ವ ವೇದಿಕೆ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ರಾಜ್ಯದೆಲ್ಲೆಡೆ ಒಂದು ಸಂಚಲನ ಉಂಟಾಗಿದೆ. ಎಲ್ಲಾ ಸಮಾನ ಮನಸ್ಕರನ್ನು, ವಿಶೇಷವಾಗಿ ದಮನಿತ ವರ್ಗಗಳ ಸಮುದಾಯದ ಯುವಕರನ್ನು ದೃಷ್ಟಿಯಲ್ಲಿರಿಸಿಕೊಂಡು ನಡೆಸುತ್ತಿರುವ ಈ ಸಮಾವೇಶಗಳು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ ಮತ್ತು ಶಕ್ತಿಗಳಿಗೆ ಹೊಸ ಭರವಸೆ ತಂದುಕೊಟ್ಟಿವೆ.

ಮಹಾರಾಷ್ಟ್ರದ ಮೂಢನಂಬಿಕೆ ವಿರೋಧಿ ಹೋರಾಟಗಾರ, ನರೇಂದ್ರ ದಾಭೋಲ್ಕರ ಹತ್ಯೆ ನಂತರ ಸಾಲುಸಾಲಾಗಿ ನಡೆದ ವಿಚಾರವಾದಿಗಳ ಕಗ್ಗೊಲೆ ಗಳಿಂದ ಸಾಮಾಜಿಕ ಜೀವನದಲ್ಲಿ ಒಂದು ರೀತಿಯ ಆತಂಕದ ವಾತಾವರಣ ಉಂಟಾಗಿತ್ತು. ಈ ಹತ್ಯೆಗಳು ಮಾಡಿದವರು ಯಾರು ಎಂಬುದು ಪುರಾವೆ ಸಹಿತ ಬಹಿರಂಗವಾಗದಿದ್ದರೂ ಈ ಸಾವಿಗೆ ಸಂಭ್ರಮಿಸಿದವರು ಯಾರು ಎಂಬುದು ಗುಟ್ಟಾಗಿ ಉಳಿದಿಲ್ಲ. ಈ ಹತ್ಯೆಯನ್ನು ಪ್ರತಿರೋಧಿಸಬೇಕಾದ ಧ್ವನಿಗಳು ವೌನವಾಗುವಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹತ್ಯೆಗಳನ್ನು ಖಂಡಿಸಿದರೆ, ಖಂಡಿಸಿದವರ ಮೇಲೆ ದಾಳಿ ಆರಂಭ ವಾಗುತ್ತದೆ. ಇಂತಹ ಭಯಾನಕ ವಾತಾವರಣ ದೇಶದ ತುಂಬೆಲ್ಲ ಕವಿದಿರುವಾಗ, ಬೆಳಗಾವಿಯಲ್ಲಿ ನಡೆದ ವೌಢ್ಯ ವಿರೋಧಿ ಸಮಾವೇಶ ಪ್ರತಿರೋಧದ ಧ್ವನಿಗಳಿಗೆ ಹೊಸ ಬಲ ತಂದುಕೊಟ್ಟಿತು. ಅಂತಲೇ ಈ ಸಮಾವೇಶದಲ್ಲಿ ಮಾತನಾಡಿದ ಚಿತ್ರ ನಟ ಪ್ರಕಾಶ ರೈ, ನಿಮ್ಮನ್ನು ನೋಡಿ ನನಗೆ ಸ್ಫೂರ್ತಿ ಬಂದಿದೆ. ನಾನು ಒಂಟಿಯಲ್ಲ ಎಂಬ ಭಾವನೆ ಮೂಡಿದೆ ಎಂದು ಸ್ಪಷ್ಟವಾಗಿ ಹೇಳಿದರು.

ಅಧಿಕಾರ ರಾಜಕಾರಣದ ವ್ಯಾಮೋಹದಿಂದ ನಿಧಾನವಾಗಿ ದೂರ ಸರಿಯು ತ್ತಿರುವ ಜಾರಕಿಹೊಳಿಯವರು ಸಮಾಜದಲ್ಲಿ ಬೇರು ಬಿಟ್ಟಿರುವ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಹಾಗೂ ಜನಾಂಗ ದ್ವೇಷ ಬಿತ್ತುತ್ತಿರುವ ಕೋಮುವಾದ ವನ್ನು ಬುಡ ಸಮೇತ ಕಿತ್ತು ಹಾಕಲು ಸಂಕಲ್ಪ ಮಾಡಿದ್ದಾರೆ. ಈ ಮಾನವ ಬಂಧುತ್ವ ವೇದಿಕೆ ಅತ್ಯಂತ ಪ್ರಜಾಸತ್ತಾತ್ಮಕವಾಗಿದೆ. ಈ ಸಂಘಟನೆಯ ದೈನಂದಿನ ಚಟುವಟಿಕೆಗಳಲ್ಲಿ ಜಾರಕಿಹೊಳಿಯವರು ಕೈ ಹಾಕುವುದಿಲ್ಲ. ಈ ಸಂಘಟನೆಯ ಹೊಣೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಡಪಂಥೀಯ ಹೋರಾಟಗಾರ ವಿಲ್ಫ್ರೆಡ್ ಡಿಸೊಜಾ ಅವರ ಹೆಗಲಿಗೆ ಹೊರಿಸಿ, ಅವರು ಮುನ್ನಡೆಸುತ್ತಿದ್ದಾರೆ. ಬರೀ ವರ್ಷಕ್ಕೊಮ್ಮೆ ಸಮಾವೇಶ ಮಾಡಿ, ಉಳಿದ ದಿನಗಳಲ್ಲಿ ಗಾಢ ನಿದ್ದೆಯಲ್ಲಿರುವ ಅನೇಕ ಸಂಘಟನೆಗಳು ನಮ್ಮಲ್ಲಿವೆ. ಆದರೆ ಮಾನವ ಬಂಧುತ್ವ ವೇದಿಕೆ ವರ್ಷದ 12 ತಿಂಗಳು ಚಟುವಟಿಕೆಯಲ್ಲಿ ನಿರತವಾಗಿರುತ್ತದೆ. ಸುಮಾರು 8 ಕಡೆ ತರಬೇತಿ ಕೇಂದ್ರ ಸ್ಥಾಪಿಸಿ, ಬುದ್ಧ, ಬಸವ, ಜ್ಯೋತಿಬಾ ಫುಲೆ ಮತ್ತು ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ತರಬೇತಿ ಪಡೆದ ಯುವಕರು ಹಳ್ಳಿಗಳಿಗೆ ಹೋಗಿ, ಜನ ಜಾಗೃತಿ ಮೂಡಿಸುತ್ತಾರೆ. ಈ ಬಾರಿ ಬೆಳಗಾವಿ ಸಮಾವೇಶಕ್ಕೆ ರಾಜ್ಯದ 20 ಜಿಲ್ಲೆ ಗಳಿಂದ ಯುವಕರ ಜನಜಾಗೃತಿ ಜಾಥಾಗಳು ನಾಡಿನೆಲ್ಲೆಡೆ ಸುತ್ತಾಡಿ, ಬೆಳಗಾವಿಗೆ ಬಂದು ಸೇರಿದವು. ದಾರಿಯಲ್ಲಿ ಬರುವ ಪ್ರತೀ ಹಳ್ಳಿಯಲ್ಲೂ ಸಭೆ ಮತ್ತು ಬೀದಿ ನಾಟಕಗಳನ್ನು ಮಾಡಿ, ಕ್ರಾಂತಿ ಗೀತೆಗಳನ್ನು ಹಾಡಿದರು. ಜನರಲ್ಲಿ ಎಚ್ಚರ ಮೂಡಿಸುವ ಕೆಲಸವನ್ನು ಈ ಯುವಕರು ಮಾಡಿದರು.

ಇತ್ತೀಚೆಗೆ ಕೋಮುವಾದಿ ಶಕ್ತಿಗಳ ದಾಳಿಗೆ ಗುರಿಯಾಗಿರುವ ಪ್ರಕಾಶ ರೈ, ‘ಜಾತಿ-ಧರ್ಮದ ಹೆಸರಿನಲ್ಲಿ ವೌಢ್ಯ ಬಿತ್ತುವುದು ಮಾತ್ರವಲ್ಲ, ರಾಷ್ಟ್ರೀಯತೆ ಮತ್ತು ಹಿಂದುತ್ವ ಒಂದೇ ಎಂಬ ಹೊಸ ವೌಢ್ಯ ಬಿತ್ತಲಾಗುತ್ತಿದೆ’ ಎಂದು ಸಭೆಯಲ್ಲಿ ಹೇಳಿದರು. ತುಂಬಾ ಭಾವುಕರಾಗಿ ಮಾತನಾಡಿದ ಅವರು, ತಮ್ಮ ತಾಯಿ ಉತ್ತರ ಕರ್ನಾಟಕದ ಗದಗದವರು. ಅನಾಥೆಯಾಗಿದ್ದ ಅವರನ್ನು ಕ್ರೈಸ್ತ ಪಾದ್ರಿಗಳು ಸಾಕಿ, ಬೆಳೆಸಿ ದೊಡ್ಡವರನ್ನಾಗಿ ಮಾಡಿದರು. ನಂತರ ಆಕೆ, ದಾದಿಯಾಗಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದರು. ಅಲ್ಲಿ ಪರಿಚಯವಾದ ಮಂಗಳೂರು ಮೂಲದ ಬಂಟ ಯುವಕನನ್ನು ಮದುವೆಯಾದರು. ಇವರ ಮಗನಾದ ನಾನು ಯಾವ ಜಾತಿಯೆಂದು ಪ್ರಕಾಶ ರೈ ಪ್ರಶ್ನಿಸಿದರು.

ಭಾರೀ ಜನಸ್ತೋಮ ಉದ್ದೇಶಿಸಿ ಮಾತನಾಡಿದ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಡಾ.ಪುರುಷೋತ್ತಮ ಬಿಳಿಮಲೆಯವರು ಉಡುಪಿಯ ಧರ್ಮ ಸಂಸದ್‌ನಲ್ಲಿ ಮಾತನಾಡಿದ ಧರ್ಮಗುರುಗಳು ನಮ್ಮ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ ಎಂದರು. ಇತ್ತೀಚೆಗೆ ಪದ್ಮಾವತಿ ಸಿನೆಮಾ ಬಗ್ಗೆ ಉಂಟಾದ ವಿವಾದವನ್ನು ಪ್ರಸ್ತಾಪಿಸಿದ ಅವರು, ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಅವರಿಗೂ 200 ವರ್ಷಗಳ ಅಂತರವಿದೆ. ಆದರೆ ಇತಿಹಾಸ ಓದದೆ, ಸಿನೆಮಾ ನೋಡದೆ, ಅನಗತ್ಯವಾಗಿ ವಿರೋಧ ವ್ಯಕ್ತಪಡಿಸಲಾಯಿತು ಎಂದರು.

ಕರ್ನಾಟಕದಲ್ಲಿ ಬುಲೆಟ್ ಸ್ವಾಮಿಯೆಂದೇ ಹೆಸರಾಗಿರುವ ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಮಾತನಾಡಲು ಎದ್ದು ನಿಲ್ಲುತ್ತಿ ದ್ದಂತೆ ಯುವಕರಿಂದ ಚಪ್ಪಾಳೆಯ ಸುರಿಮಳೆಯಾಯಿತು. ಇದರಿಂದ ಸ್ಫೂರ್ತಿ ಪಡೆದು ಮಾತು ಮುಂದುವರಿಸಿದ ಈ ಸ್ವಾಮೀಜಿ, ಚುನಾವಣೆಯಲ್ಲಿ ಕೋಮುವಾದಿ ಶಕ್ತಿ ಗಳನ್ನು ಸೋಲಿಸಿ, ಜಾತ್ಯತೀತ ಶಕ್ತಿಗಳನ್ನು ಬೆಂಬಲಿಸಬೇಕು ಎಂದು ಬಹಿರಂಗವಾಗಿ ಕರೆ ನೀಡಿದರು. ನೀವು ಹೀಗೇಕೆ ಹೇಳುತ್ತೀರಿಯೆಂದರೆ, ನನ್ನ ಉತ್ತರ ಒಂದೆ. ನಾನು ಮೊದಲು ಈ ದೇಶದ ನಾಗರಿಕ. ನಂತರ ಸ್ವಾಮಿ. ಅದಕ್ಕಾಗಿ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ಹೇಳಿದರು.

ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಬಗ್ಗೆ ಪ್ರಸ್ತಾಪಿಸಿದ ನಿಜ ಗುಣಾನಂದ ಸ್ವಾಮೀಜಿ, ಇದು ಭಾರತದ ಸೌಹಾರ್ದ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ. ಧರ್ಮದ ಹೆಸರಿನಲ್ಲಿ ದ್ವೇಷವನ್ನು ಬಿತ್ತುವ ಕೋಮುವಾದಿಗಳಿಗೆ ಅದು ಬೆಂಬಲ ನೀಡಿತು ಎಂದು ಹೇಳಿದರು. ಈ ದೇಶದಲ್ಲಿ ಅನೇಕ ಅವತಾರಗಳು ಆಗಿವೆ. ಆಚಾರ್ಯಗಳು ಬಂದು ಹೋಗಿದ್ದಾರೆ. ಆದರೆ ಇವರು ಯಾರಿಂದಲೂ ದಲಿತರ ಶೋಷಣೆ ಕೊನೆಗೊಳ್ಳಲಿಲ್ಲ. ಬಾಬಾ ಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಬೆಳಕಿನಿಂದ ದಮನಿತ ಸಮುದಾಯದಲ್ಲಿ ಕವಿದಿದ್ದ ಕತ್ತಲು ನಿವಾರಣೆಯಾಯಿತು ಎಂದು ಹೇಳಿದರು. ಈ ದೇಶವನ್ನು ನೂರಾರು ವರ್ಷಗಳಿಂದ ಹಾಳು ಮಾಡಿದ ಪುರೋಹಿತಶಾಹಿಗಳು ಹಿಂದುತ್ವದ ಮಂಕುಬೂದಿ ಎರಚಿ, ಮತ್ತೆ ದೇಶದ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ.

ಈ ಸಮಾವೇಶದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ ಅವರು ಹನುಮ ಜಯಂತಿ ಹೆಸರಿನಲ್ಲಿ ಕಾನೂನು ಉಲ್ಲಂಘಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡರು. ಮಹಿಳೆಯರನ್ನು, ಶೂದ್ರರನ್ನು ನಾಯಿ, ಬೆಕ್ಕುಗಳಿಗಿಂತ ಕಡೆಯಾಗಿ ಕಂಡ ಮನುಸ್ಮತಿಯನ್ನು ಬಾಬಾ ಸಾಹೇಬರು ಸುಟ್ಟು ಹಾಕಿದ್ದರು. ಬಾಬಾ ಸಾಹೇಬರು ಮನುಸ್ಮತಿಯನ್ನು ಸುಟ್ಟು ಹಾಕಿದ ಈ ದಿನವನ್ನು ನಾವು ಸಂಭ್ರಮದಿಂದ ಆಚರಿಸಬೇಕಿದೆ ಎಂದು ಹೇಳಿದರು.

ಸಮಾವೇಶದ ಉದ್ಘಾಟನಾ ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿಯವರು, 20 ವರ್ಷ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ ನನಗೆ ಈಗ ಅಧಿಕಾರ ರಾಜಕಾರಣದಲ್ಲಿ ಆಸಕ್ತಿ ಉಳಿದಿಲ್ಲ. ಬಸವ, ಬುದ್ಧ, ಅಂಬೇಡ್ಕರ್ ವಿಚಾರಗಳನ್ನು ಜನರ ಬಳಿ ತಲುಪಿಸುವುದೇ ನನ್ನ ಮುಂದಿರುವ ಏಕೈಕ ಕಾರ್ಯಸೂಚಿಯಾಗಿದೆ ಎಂದು ಹೇಳಿದರು.

ನಾನು ಸೂಕ್ಷ್ಮವಾಗಿ ಗಮನಿಸಿದಂತೆ, ಉತ್ತರ ಕರ್ನಾಟಕದಲ್ಲಿ ಮಾನವ ಬಂಧುತ್ವ ವೇದಿಕೆ ಅಸ್ತಿತ್ವಕ್ಕೆ ಬರುವ ಮುನ್ನ ಕೋಮುವಾದಿ ಶಕ್ತಿಗಳ ಅಬ್ಬರ ಜೋರಾಗಿತ್ತು. ಪ್ರಮೋದ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆಯವರ ಸಭೆಗಳಿಗೆ ಸಾವಿರಾರು ಜನರು ಸೇರುತ್ತಿದ್ದರು. ಆದರೆ ಜಾರಕಿಹೊಳಿಯವರು ಈ ವೇದಿಕೆ ಕಟ್ಟಿದ ಬಳಿಕ ಈ ಭಾಗದ ವಾತಾವರಣದಲ್ಲಿ ತುಂಬಾ ಬದಲಾವಣೆಯಾಗಿದೆ. ಹಿಂದುಳಿದ ದಲಿತ ಸಮುದಾಯದ ಅನೇಕ ಯುವಕರು ಈ ವೇದಿಕೆಗೆ ಬಂದು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ವಿಲ್ಫ್ರೆಡ್ ಡಿಸೊಜಾ ಅವರು ಅಲ್ಲದೆ ರವೀಂದ್ರ ನಾಯ್ಕೆ, ಅನಂತ ನಾಯ್ಕೆ, ಜಯಕುಮಾರ್ ಹೀಗೆ ನೂರಾರು ಯುವ ಕಾರ್ಯಕರ್ತರು ಈ ಸಂಘಟನೆ ಕಟ್ಟಲು ಶ್ರಮಿಸುತ್ತಿದ್ದಾರೆ.

ಮಾನವ ಬಂಧುತ್ವ ವೇದಿಕೆಯು ಕೇವಲ ಚುನಾವಣೆ ರಾಜಕೀಯ ಎದುರಿಟ್ಟು ಕೊಂಡು ಅಸ್ತಿತ್ವಕ್ಕೆ ಬಂದಿದ್ದರೆ, ನಾನು ಇಷ್ಟೆಲ್ಲ ಬರೆಯುವ ಅಗತ್ಯವಿರಲಿಲ್ಲ. ಆದರೆ ಚುನಾವಣೆ ರಾಜಕೀಯಕ್ಕಿಂತ ಭಿನ್ನವಾಗಿ ಬುದ್ಧ, ಬಸವ, ಮಾರ್ಕ್ಸ್, ಪುಲೆ, ಅಂಬೇಡ್ಕರ್ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ, ಆ ಮೂಲಕ ಮನು ವಾದಿ ಶಕ್ತಿಗಳ ಸೊಂಟ ಮುರಿಯುವ ಮಹಾನ್ ಗುರಿ ಈ ಸಂಘಟನೆ ಹೊಂದಿರುವು ದರಿಂದ ಇದು ನಾಡಿನೆಲ್ಲೆಡೆ ವ್ಯಾಪಿಸಬೇಕಿದೆ. ಸಮಾನತೆಯಲ್ಲಿ ನಂಬಿಕೆ ಹೊಂದಿರುವ ಸಮಾನ ಮನಸ್ಕರು ಇದರೊಂದಿಗೆ ಕೈಗೂಡಿಸಿದರೆ ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News