ಮಠಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಲಿ

Update: 2017-12-10 18:34 GMT

ಮಾನ್ಯರೆ, 

ನಮ್ಮ ಭಾರತೀಯ ನೆಲದಲ್ಲಿ ಮಠ, ಮಂದಿರ, ದೇಗುಲ, ಆಶ್ರಮಗಳಿಗೆ ಅತ್ಯಂತ ಗೌರವ ಪೂಜ್ಯನೀಯ ಸ್ಥಾನ ನೀಡಲಾಗಿದೆ.ಅಲ್ಲದೆ ಸಾಧು, ಸಂತ, ಶರಣರಿಗೆ ಮತ್ತು ಸ್ವಾಮಿಗಳಿಗೆ ಸಾಕ್ಷಾತ್ ದೇವರ ಸ್ವರೂಪಿ ಎಂದು ಭಾವಿಸಿ ಇವರನ್ನು ಭಕ್ತಿ ಪೂರ್ವಕವಾಗಿ ಪೂಜಿಸಲಾಗುತ್ತಿದೆ, ಆರಾಧಿಸಲಾಗುತ್ತಿದೆ. ಏಕೆಂದರೆ ಅವರು ದಿವ್ಯ ಶಕ್ತಿ ಹೊಂದಿರುವ ಮಹಾತಪಸ್ವಿಗಳು, ಯಾವಾಗಲೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾಯಕಕ್ಕೆ ತಮ್ಮ ತನು ಮನ ಅರ್ಪಿಸಿ ಮಠ, ಮಂದಿರಗಳಲ್ಲಿ ಸದಾ ಧಾರ್ಮಿಕ ಚಿಂತನೆ, ಪುರಾಣ, ಪ್ರವಚನ, ವೇದ ಉಪನಿಷತ್ತುಗಳ ಪಠಣ, ಭಜನೆ, ಶಿವನ ಆರಾಧನೆ ಹಾಗೂ ಜನರಲ್ಲಿ ಅಡಗಿರುವ ಅಂಧಕಾರ, ಅಸಮಾನತೆ, ಅಸ್ಪಶ್ಯತೆ, ಲಿಂಗ ಭೇದ, ಪಂಥ ಭೇದ, ಮೇಲು ಕೀಳು ಹಾಗೂ ಮೌಢ್ಯ ಆಚರಣೆಗಳ ಕುರಿತು ಜಾಗೃತಿ ಮೂಡಿಸಿ ಧರ್ಮ ಧರ್ಮಗಳ ನಡುವೆ ಪರಸ್ಪರ ಪ್ರೀತಿ, ಸಾಮರಸ್ಯ, ಸೌಹಾರ್ದ, ಅನ್ಯೋನ್ಯತೆ, ಹುಟ್ಟ್ಟು ಹಾಕುವ ಮೂಲಕ ಸಮಾಜದ ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಜಾತಿಗೊಂದು ಮಠ ಮಂದಿರಗಳು ಸ್ಥಾಪನೆಗೊಳ್ಳುತ್ತಿವೆ. ಮಠಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನ ಮಂಥನ ಸಮಾಜಕ್ಕೆ ಒಳಿತಾಗುವಂತಹ ಸಭೆ ಸಮಾರಂಭಗಳು ಜರುಗುತ್ತಿಲ್ಲ. ಬದಲಿಗೆ ಜಾತೀಯತೆ, ಪ್ರತ್ಯೇಕ ಧರ್ಮದ ವಿಚಾರ, ಅನಾಚಾರ, ಶಿಕ್ಷಣ ಸಂಸ್ಥೆಗಳ ವ್ಯಾಪಾರೀಕರಣ, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿವೆ. ಮತ್ತೊಂದೆಡೆ ಮಠಗಳು ರಾಜಕೀಯ ತಾಣಗಳಾಗಿವೆ. ಇದರಿಂದಾಗಿ ಮಠ, ಮಂದಿರಗಳ ಪಾವಿತ್ರ ಹಾಳಾಗುತ್ತಿದೆ. ಅದಕ್ಕಾಗಿಯೇ ಜನರು ಮಠ ಮಂದಿರಗಳ ಮೇಲಿನ ನಂಬಿಕೆ, ಗೌರವ, ಕಳೆದುಕೊಳ್ಳುತ್ತಿದ್ದ್ದಾರೆ. ಇನ್ನು ಮುಂದಾದರೂ ಮಠ, ಮಂದಿರಗಳು ಸಮಾಜದಲ್ಲಿನ ಎಲ್ಲಾ ಸಮುದಾಯಗಳ ಸಮಾನತೆ ಹಾಗೂ ಸಹಬಾಳ್ವೆ ಮತ್ತು ಸಾಮರಸ್ಯಕ್ಕೆ ಸಹಕಾರಿಯಾಗುವ ಆಧ್ಯಾತ್ಮಿಕ ಕೇಂದ್ರಗಳಾಗಲಿ.

- ಮೌಲಾಲಿ ಕೆ ಬೋರಗಿ, ಸಿಂದಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News