ಪೇಯ್ಡ್-ಅಪ್ ಇನ್ಶೂರನ್ಸ್ ಪಾಲಿಸಿಯ ಬಗ್ಗೆ ನಿಮಗೆಷ್ಟು ಗೊತ್ತು...?

Update: 2017-12-11 12:06 GMT

ಹೆಚ್ಚಿನ ಜನಸಾಮಾನ್ಯರು ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಕುಟುಂಬಕ್ಕೆ ಆರ್ಥಿಕ ಸುಭದ್ರತೆಯನ್ನೊದಗಿಸಲು ಜೀವವಿಮೆ ರಕ್ಷಣೆಯನ್ನು ಪಡೆಯುತ್ತಾರೆ ಮತ್ತು ಆಯ್ಕೆ ಮಾಡಿದ ಅವಧಿಯವರೆಗೆ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಕಂತುಗಳ ರೂಪದಲ್ಲಿ ಪ್ರೀಮಿಯಂ ಕಟ್ಟುತ್ತಿರುತ್ತಾರೆ. ಆದರೆ ಪೇಯ್ಡ್-ಅಪ್ ಪಾಲಿಸಿ ಖರೀದಿಸಿದವರು ಮುಂದಿನ ಪ್ರೀಮಿಯಂಗಳನ್ನು ತುಂಬುವ ಅಗತ್ಯವಿರುವುದಿಲ್ಲ ಮತ್ತು ಪಾಲಿಸಿಯು ಪಕ್ವಗೊಳ್ಳುವವರೆಗೆ ಎಲ್ಲ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ. ಇಂತಹ ಪಾಲಿಸಿಗಳನ್ನು ಖರೀದಿಸುವಾಗ ಒಂದೇ ಬಾರಿಗೆ ಎಲ್ಲ ಪ್ರೀಮಿಯಂ ಹಣವನ್ನು ತುಂಬಬೇಕಾಗುತ್ತದೆ.

ಯಾವುದೇ ವಿಮೆ ಪಾಲಿಸಿ ತನ್ನ ಸರೆಂಡರ್ ವ್ಯಾಲ್ಯುಗೆ ತಲುಪಿದಾಗ ಅದನ್ನು ಪೇಯ್ಡ್-ಅಪ್ ಪಾಲಿಸಿಯನ್ನಾಗಿ ಪರಿವರ್ತಿಸಬಹುದು. ಸಾಂಪ್ರದಾಯಿಕ ಜೀವವಿಮೆ ಯೋಜನೆಗಳಲ್ಲಿ 2-3 ವರ್ಷಗಳ ಪ್ರೀಮಿಯಂ ಪಾವತಿಯ ಬಳಿಕ ಅದನ್ನು ಹಿಂದಿರುಗಿಸಿದರೆ ಸ್ವಲ್ಪ ಹಣವನ್ನು ಮುರಿದುಕೊಂಡು(ಸಾಮಾನ್ಯವಾಗಿ ಶೇ.10) ಉಳಿದ ಹಣವನ್ನು ಮರಳಿಸುತ್ತಾರೆ. ಇದಕ್ಕೆ ಸರೆಂಡರ್ ವ್ಯಾಲ್ಯೂ ಎನ್ನುತ್ತಾರೆ. ಯುಲಿಪ್‌ಗಳಲ್ಲಿ ಈ ಅವಧಿ ಐದು ವರ್ಷಗಳದ್ದಾಗಿದೆ.

ಸಾಮಾನ್ಯವಾಗಿ, ಪಾವತಿ ಮಾಡಲಾದ ಪ್ರೀಮಿಯಂ ಕಂತುಗಳ ಸಂಖ್ಯೆಯನ್ನು ಭರವಸೆ ನೀಡಲಾಗಿರುವ ವಿಮೆ ಮೊತ್ತದಿಂದ ಗುಣಿಸಿ ಅದನ್ನು ಒಟ್ಟು ಪ್ರೀಮಿಯಂ ಸಂಖ್ಯೆಯಿಂದ ವಿಭಾಗಿಸುವ ಮೂಲಕ ಪೇಯ್ಡ್-ಅಪ್ ವ್ಯಾಲ್ಯೂವನ್ನು ಲೆಕ್ಕ ಹಾಕಲಾಗುತ್ತದೆ.

► ಪೇಯ್ಡ್-ಅಪ್ ಯುಲಿಪ್ ಪ್ರಕರಣದಲ್ಲಿ ಪಾಲಿಸಿ ನಿರ್ವಹಣೆ ವೆಚ್ಚ, ಮಾರ್ಟಿಲಿಟಿ ಮತ್ತು ಫಂಡ್ ನಿರ್ವಹಣೆ ವೆಚ್ಚಗಳ ಅನ್ವಯವು ಮುಂದುವರಿಯುತ್ತದೆ ಮತ್ತು ಇದು ಫಂಡ್ ವ್ಯಾಲ್ಯೂದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

► ಪಾಲಿಸಿಯನ್ನು ಖರೀದಿಸುವಾಗ ತಪ್ಪು ಆಯ್ಕೆಯಿಂದಾಗಿ ಸೂಕ್ತವಲ್ಲದ ಯೋಜನೆಯಲ್ಲಿ ಸಿಕ್ಕಿಹಾಕಿಕೊಂಡವರಿಗೆ ಇದೊಂದು ಉಪಯುಕ್ತ ಪರ್ಯಾಯವಾಗಿದೆ. ಅವರು ಪಾಲಿಸಿಯನ್ನು ಸರೆಂಡರ್ ಮಾಡುವ ಬದಲು ವಿಮೆರಕ್ಷಣೆಯನ್ನು ಪಡೆದುಕೊಳ್ಳಲು ತಮ್ಮ ಪಾಲಿಸಿಯನ್ನು ಪೇಯ್ಡ್-ಅಪ್ ಆಗಿ ಪರಿವರ್ತಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News