ಶತಕ ವಂಚಿತ ಗೌತಮ್ ಗಂಭೀರ್: ದಿಲ್ಲಿ ಸೆಮಿಗೆ

Update: 2017-12-11 18:02 GMT

ವಿಜಯವಾಡಾ, ಡಿ.11: ನಾಯಕ ಗೌತಮ್ ಗಂಭೀರ್ 129 ಎಸೆತಗಳಲ್ಲಿ ನೀಡಿದ 95 ರನ್‌ಗಳ ನೆರವಿನಲ್ಲಿ ದಿಲ್ಲಿ ತಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಗೆಲುವಿಗೆ 217 ರನ್‌ಗಳ ಸವಾಲನ್ನು ಪಡೆದಿದ್ದ ಏಳು ಬಾರಿ ರಣಜಿ ಟ್ರೋಫಿ ಜಯಿಸಿದ ದಿಲ್ಲಿ ತಂಡ ಎರಡನೇ ಇನಿಂಗ್ಸ್‌ನಲ್ಲಿ 51.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ದಾಖಲಿಸಿತು.

ದಿಲ್ಲಿ ತಂಡ ಮೂರನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿತ್ತು. ಅಂತಿಮ ದಿನವಾಗಿರುವ ಸೋಮವಾರ ಆರಂಭಿಕ ದಾಂಡಿಗ ವಿಕಾಸ್ ಟೋಕಸ್ ಅವರನ್ನು ಬೇಗನೆ ಕಳೆದುಕೊಂಡಿತು.

ಎರಡನೇ ವಿಕೆಟ್‌ಗೆ ನಾಯಕ ಗೌತಮ್ ಗಂಭೀರ್ ಮತ್ತು ಕುನಾಲ್ ಚಾಂಡೇಲಾ 98 ರನ್‌ಗಳ ಜೊತೆಯಾಟ ನೀಡಿದರು. ತಂಡದ ಸ್ಕೋರ್ 27 ಓವರ್‌ಗಳಳ್ಲಿ 129ಕ್ಕೆ ತಲುಪುವಾಗ ದಿಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ಚಾಂಡೇಲಾ 57 ರನ್ ಗಳಿಸಿ ಲೆಗ್ ಸ್ಪಿನ್ನರ್ ಮಿಹಾರ್ ಹಿರ್ವಾನಿಗೆ ವಿಕೆಟ್ ಒಪ್ಪಿಸಿದರು.

ಮೂರನೇ ವಿಕೆಟ್‌ಗೆ ಧ್ರುವ್ ಶೊರೈ ಮತ್ತು ಗಂಭೀರ್ ಜೊತೆಯಾಗಿ ತಂಡದ ಸ್ಕೋರ್‌ನ್ನು 49.4 ಓವರ್‌ಗಳಲ್ಲಿ 204ಕ್ಕೆ ಏರಿಸಿದರು. ಆದರೆ ನಾಯಕ ಗಂಭೀರ್ ರನೌಟಾಗುವುದರೊಂದಿಗೆ ದಿಲ್ಲಿ ಇನ್ನೊಂದು ವಿಕೆಟ್ ಕಳೆದುಕೊಂಡಿತು. ಗಂಭೀರ್129 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 95 ರನ್ ಗಳಿಸಿ ಔಟಾಗುವುದರೊಂದಿಗೆ ಶತಕ ವಂಚಿತಗೊಂಡರು. ಬಳಿಕ ಶೊರೈ ಔಟಾಗದೆ 46 ರನ್ ಮತ್ತು ನಿತೀಶ್ ರಾಣಾ ಔಟಾಗದೆ 6 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

2009-10ರ ಬಳಿಕ ದಿಲ್ಲಿ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ದಿಲ್ಲಿ ತಂಡ ಪಶ್ಚಿಮ ಬಂಗಾಳವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್ ವಿವರ

►ಮಧ್ಯಪ್ರದೇಶ ಮೊದಲ ಇನಿಂಗ್ಸ್ 338,

►ದಿಲ್ಲಿ ಮೊದಲ ಇನಿಂಗ್ಸ್ 405,ಮಧ್ಯಪ್ರದೇಶ ಎರಡನೇ ಇನಿಂಗ್ಸ್ 283,

►ದಿಲ್ಲಿ ಎರಡನೇ ಇನಿಂಗ್ಸ್ 51.4 ಓವರ್‌ಗಳಲ್ಲಿ 217/3 (ಗಂಭೀರ್ 95, ಚಾಂಡೆಲಾ 57, ಶೊರೈ ಔಟಾಗದೆ 46; ಈಶ್ವರ ಪಾಂಡೆ 18ಕ್ಕೆ 1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News