ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ : ಬಿಜೆಪಿ ನಾಯಕನ ಬಂಧನ

Update: 2017-12-12 10:08 GMT

ನಾಗ್ಪುರ್,ಡಿ.12 :  ಗಡ್ಚಿರೊಲಿ ಜಿಲ್ಲೆಯ ಸಿರೊಂಚ ತೆಹ್ಸಿಲ್ ಎಂಬಲ್ಲಿನ ಬಿಜೆಪಿ ನಾಯಕ ಅಜಯ್ ಯಂಗಂತಿ ಎಂಬವರನ್ನು ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ಸಂತ್ರಸ್ತೆ  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನಡೆಸುವ ಮಕ್ಕಳ ಕೇಂದ್ರವೊಂದರಲ್ಲಿ ವಾಸಿಸುತ್ತಿದ್ದಾಳೆ.

ಈಗ 17 ವರ್ಷದವಳಾಗಿರುವ ಸಂತ್ರಸ್ತೆಗೆ ಎರಡು ವರ್ಷದ ಹಿಂದೆಯೇ ಆಕೆಯ ತಾಯಿ ಬಲವಂತದಿಂದ ಮದುವೆ ಮಾಡಿದ್ದರೂ ಆಕೆ ಗಂಡನ ಮನೆಯಿಂದ ಮತ್ತೆ ತಾಯಿಯ ಮನೆಗೆ ಬಂದಿದ್ದಳು. ಆದರೆ ತಾಯಿ ಆಕೆಗೆ ಹೊಡೆದು ಗಂಡನ ಮನೆಗೆ ಹಿಂದಿರುಗುವಂತೆ ಒತ್ತಾಯಿಸಿದಾಗ ಆಕೆ ಅಸರಲಿ ಎಂಬಲ್ಲಿ ಯಂಗಂತಿ ನಡೆಸುವ ಹಾಸ್ಟೆಲ್ ಒಂದಕ್ಕೆ ಸೇರಿದ್ದಳು. ನಲ್ವತ್ತು ವರ್ಷದ ಯಂಗಂತಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಹೈದರಾಬಾದ್ ನಗರದಲ್ಲಿ ನೆಲೆಸುತ್ತಿದ್ದರೂ ಬಿಸಿನೆಸ್ ಸಂಬಂಧವಾಗಿ ಸಿರೊಂಚಾಗೆ ಬಂದಾಗಲೆಲ್ಲಾ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಶೋಷಿಸುತ್ತಿದ್ದರೆಂದು ಆರೋಪಿಸಲಾಗಿದೆ.

ಆರೋಪಿ ಬಿಜೆಪಿ ನಾಯಕ  ಸಿರೊಂಚ ಜಿಲ್ಲಾ ಬಿಜೆಪಿ ಘಟಕದ ಉಸ್ತುವಾರಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಅತ್ರಂ ಅವರ ಸಮೀಪವರ್ತಿ ಎಂದು ತಿಳಿದು ಬಂದಿದೆ.ಆರೋಪಿಯ ವಿರುದ್ಧ ಪೊಕ್ಸೊ ಹಾಗೂ ಐಪಿಸಿಯ ಸೆಕ್ಷನ್ 376 ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News