ಇದು ವಿಶ್ವದಲ್ಲಿ ಅತ್ಯಂತ ಹೆಚ್ಚು ಚಳಿಯಿರುವ ಜನವಸತಿ ಪ್ರದೇಶ

Update: 2017-12-12 11:29 GMT

ರಷ್ಯದ ಒಯ್ಮಕನ್ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಚಳಿಯಿರುವ ಗ್ರಾಮವಾಗಿದೆ. ಇಲ್ಲಿ ಸರಾಸರಿ ಮೈನಸ್ 50 ಡಿ.ಸೆ.ತಾಪಮಾನವಿರುತ್ತದೆ. ‘ಶೀತಲ ಧ್ರುವ’ ಎಂದೂ ಕರೆಯಲಾಗುವ ಈ ಗ್ರಾಮದಲ್ಲಿ ತಾಪಮಾನ ಮೈನಸ್ 71.2 ಡಿ.ಸೆ.ಗೆ ಕುಸಿದ ದಾಖಲೆಯಿದ್ದು, ಅದು ಈವರೆಗಿನ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಮಾನವನ ಶರೀರದ ಉಷ್ಣತೆ ಸಾಮಾನ್ಯವಾಗಿ 98.6 ಫ್ಯಾರನ್‌ಹೀಟ್‌ನಷ್ಟು, ಅಂದರೆ 37 ಡಿ.ಸೆ.ನಷ್ಟು ಇರುತ್ತದೆ. ಆದರೆ ಒಯ್ಮಾಕನ್ ಗ್ರಾಮದಲ್ಲಿ ಸರಾಸರಿ ತಾಪಮಾನ ಮೈನಸ್ 58 ಫ್ಯಾರನ್‌ಹೀಟ್‌ನಷ್ಟಿರುತ್ತದೆ ಅಂದರೆ ನಮ್ಮಂತಹವರು ಅಲ್ಲಿಗೆ ಹೋದರೆ ಏನು ಅವಸ್ಥೆಯಾದೀತು ಎನ್ನುವುದನ್ನು ಊಹಿಸಲೂ ಅಸಾಧ್ಯ.

ಈ ಗ್ರಾಮದಲ್ಲಿ ಡಿಸೆಂಬರ್‌ನಲ್ಲಿ ಹಗಲಿನ ಅವಧಿ ಮೂರು ಗಂಟೆಗಳಷ್ಟಿದ್ದರೆ ಬೇಸಿಗೆ ಸಮಯದಲ್ಲಿ ಇದು 21 ಗಂಟೆಗಳವರೆಗೂ ಬೆಳೆಯುತ್ತದೆ.

ಸುಮಾರು 500 ಜನರು ವಾಸವಾಗಿರುವ ಈ ಗ್ರಾಮವು ಮೂಲತಃ ಹಿಮಸಾರಂಗಗಳ ಸಾಕಣಿಕೆದಾರರು ಪ್ರಯಾಣದ ಸಮಯದಲ್ಲಿ ಅವುಗಳಿಗೆ ಇಲ್ಲಿರುವ ಬಿಸಿನೀರಿನ ಬುಗ್ಗೆಯೊಂದರಿಂದ ನೀರು ಕುಡಿಸಲು ತಂಗುತ್ತಿದ್ದ ಸ್ಥಳವಾಗಿತ್ತು.

ಈ ಗ್ರಾಮದಲ್ಲಿಯ ಹೆಚ್ಚಿನ ಮನೆಗಳು ಹೊರಗಡೆ ಶೌಚಾಲಯಗಳನ್ನು ಹೊಂದಿವೆ. ಒಳಗಡೆ ಖಾಯಂ ಕಲ್ಲಿದ್ದಲು ಮತ್ತು ಕಟ್ಟಿಗೆಯ ಅಗ್ಗಿಷ್ಟಿಕೆಗಳು ಇರುತ್ತವೆ. ಇತ್ತೀಚಿಗೆ ಕೆಲವು ಮನೆಗಳು ಒಳಗಡೆಯೇ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದು, ಕೆಲವು ಆಧುನಿಕ ಸೌಲಭ್ಯಗಳನ್ನೂ ಹೊಂದಿವೆ. ಈ ಅಂಗಡಿಯಲ್ಲಿ ಗ್ರಾಮಸ್ಥರ ಅಗತ್ಯಗಳನ್ನು ಪೂರೈಸಲು ಒಂದೇ ಒಂದು ಅಂಗಡಿಯಿದೆ.

 ಇಲ್ಲಿಯ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕಟ್ಟಿಗೆ ಮತ್ತು ಕಲ್ಲಿದ್ದಲಿನ ಕೊರತೆಯಾದರೆ ಐದು ಗಂಟೆಗಳಲ್ಲಿ ಇಡೀ ಗ್ರಾಮದ ಜನಜೀವನ ಸ್ಥಗಿತಗೊಳ್ಳುತ್ತದೆ. ಹಿಮಪಾತವಾಗುವ ಇತರ ದೇಶಗಳಲ್ಲಿ ಹೆಚ್ಚಿನ ಹಿಮಪಾತದಿಂದಾಗಿ ಆಗಾಗ್ಗೆ ಚಟುವಟಿಕೆಗಳು ಸ್ತಬ್ಧಗೊಂಡರೆ ಒಯ್ಮೆಕನ್‌ನಲ್ಲಿರುವ ಏಕೈಕ ಶಾಲೆಗೆ ತಾಪಮಾನ ಮೈನಸ್ 52ಕ್ಕಿಂತ ಕಡಿಮೆಯಾದರೆ ಮಾತ್ರ ರಜೆಯನ್ನು ನೀಡಲಾಗುತ್ತದೆ.

ಈ ಗ್ರಾಮದಲ್ಲಿ ಏನೂ ಬೆಳೆಯುವುದಿಲ್ಲ. ಹೀಗಾಗಿ ಜನರು ಬದುಕುಳಿಯಲು ಹಿಮಸಾರಂಗ ಮತ್ತು ಕುದುರೆ ಮಾಂಸವನ್ನು ಆಹಾರವಾಗಿ ಬಳಸುತ್ತಾರೆ. ಜೀವನೋಪಾಯವಾಗಿ ಹಿಮಸಾರಂಗಗಳ ಸಾಕುವಿಕೆ, ಬೇಟೆ ಮತ್ತು ಮಂಜುಗಡ್ಡೆಗಳ ನಡುವೆ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ.

ಈ ಜನರು ಸಾಕುವ ಪ್ರಾಣಿಗಳ ಹಾಲಿನಲ್ಲಿ ಬಹಳಷ್ಟು ಪೋಷಕಾಂಶಗಳು ಇರುವುದರಿಂದ ಇವರು ಅಪೌಷ್ಟಿಕತೆಯಿಂದ ಬಳಲುವುದಿಲ್ಲ ಎನ್ನುತ್ತಾರೆ ವೈದ್ಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News